ನವದೆಹಲಿ(ಡಿ.26): ರೈತರು ತಮ್ಮ ಉತ್ಪನ್ನಗಳನ್ನು ರೈತನಿಗೆ ಸೂಕ್ತ ಬೆಲೆ ಸಿಗುವಲ್ಲಿ ಮಾರಾಟ ಮಾಡಲು ಕೇಂದ್ರ ಕೃಷಿ ಮಸೂದೆ ಅನುವು ಮಾಡಿಕೊಡುತ್ತದೆ. ಹೀಗಾಗಿ ರೈತರ ಬೆಳೆಗಳನ್ನು ಸಾಗಿಸಲು ಸುಲಭ ಹಾಗೂ ಕಡಿಮೆ ದರದ ಸಾಗಾಣಿಕೆ ವ್ಯವಸ್ಥೆ ಬೇಕು. ಇದಕ್ಕಾಗಿ ಕೇಂದ್ರ ಸರ್ಕಾರ ಕಿಸಾನ್ ರೈಲಿಗೆ ಚಾಲನೆ ನೀಡಿದೆ. ಆಗಸ್ಟ್ ತಿಂಗಳಲ್ಲಿ ಮೊದಲ ಕಿಸಾನ್ ರೈಲು ಆರಂಭಗೊಂಡಿತ್ತು. ಇದೀಗ 100ನೇ ಕಿಸಾನ್ ರೈಲಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಲು ಸಜ್ಜಾಗಿದ್ದಾರೆ.

ತರ​ಕಾರಿ ಹೊತ್ತ ರಾಜ್ಯದ ಮೊದಲ ರೈಲು ದೆಹಲಿಗೆ ಪ್ರಯಾಣ.

ಡಿಸೆಂಬರ್ 28 ರಂದು ಸಂಜೆ 4.30ಕ್ಕೆ ಮೋದಿ ವರ್ಚುವಲ್ ಕಾರ್ಯಕ್ರಮದ ಮೂಲಕ 100ನೇ ಕಿಸಾನ್ ರೈಲಿಗೆ ಹಸಿರು ನಿಶಾನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹಾಗೂ ಪಿಯೂಷ್ ಗೋಯಲ್ ಹಾಜರಿರಲಿದ್ದಾರೆ.

ಬಹ ಉಪಯೋಗಿ ಸರಕು ಸಾಗಾಣಿಕೆಯ ಕಿಸಾನ್ ರೈಲು  ರೈತರ ಬೆಳೆಗಳಾದ ಎಲೆಕೋಸು, ಹೂಕೋಸು, ಕ್ಯಾಪ್ಸಿಕಂ, ಈರುಳ್ಳಿ, ಮೆಣಸಿನ ಕಾಯಿ, ನುಗ್ಗೆ ಕಾಯಿ, ಹಣ್ಣುಗಳಾದ, ದಾಳಿಂಬೆ, ಬಾಳೆ ಹಣ್ಣು, ದ್ರಾಕ್ಷಿ, ಸೇಬು ಸೇರಿದಂತೆ ಹಲವು ಹಣ್ಣುಗಳನ್ನು ಸಾಗಾಟ ಮಾಡಲಿದೆ. ಇಷ್ಟೇ ಸಾಗಾಣೆ ಮಾಡಬೇಕು ಎಂದು ಯಾವುದೇ ನಿರ್ಬಂಧ ವಿದಿಸಿಲ್ಲ. ಇಷ್ಟೇ ಅಲ್ಲ ಹಣ್ಣುಗಳು ಮತ್ತು ತರಕಾರಿಗಳ ಸಾಗಣೆಗೆ ಭಾರತ ಸರ್ಕಾರ ಶೇಕಡಾ 50 ರಷ್ಟು ಸಹಾಯ ಧನವನ್ನು ನೀಡುತ್ತಿದೆ.

100ನೇ ಕಿಸಾನ್ ರೈಲು ಮಹಾರಾಷ್ಟ್ರದ ಸಂಗೋಲಾದಿಂದ ಪಶ್ಚಿಮ ಬಂಗಾಳದ ಶಾಲಿಮಾರ್‌ಗೆ ಸಂಚಾರ ಮಾಡಲಿದೆ. ಇನ್ನು ಮೊದಲ ಕಿಸಾನ್ ರೈಲು ದೇವಲಾಲಿಯಿಂದ ದಾನಾಪುರಕ್ಕೆ ಸಂಚರಿಸುತ್ತಿತ್ತು. ಈ ಮಾರ್ಗವನ್ನು ಮುಝಾಫರ್‌ಪುರ್ ವರೆಗೆ ವಿಸ್ತರಿಸಲಾಗಿದೆ.