EXCLUSIVE | ಭ್ರಷ್ಟಾಚಾರ ಕೊನೆ ಮಾಡ್ಬೇಕು ಅಂದ್ರೆ, ಇಡಿ-ಸಿಬಿಐನಂಥ ಸಂಸ್ಥೆಗೆ ಮುಕ್ತ ಸ್ವಾತಂತ್ರ್ಯ ನೀಡಬೇಕು: ಮೋದಿ
ಏಷ್ಯಾನೆಟ್ ಸುವರ್ಣನ್ಯೂಸ್‌ನ ಪ್ರಧಾನ ಸಂಪಾದಕರಾದ ಅಜಿತ್ ಹನುಮಕ್ಕನವರ್ ಜೊತೆಗಿನ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಕೇಂದ್ರ ಸರ್ಕಾರ ಇಡಿ ಹಾಗೂ ಸಿಬಿಐ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎನ್ನುವ ಆರೋಪಗಳ ಬಗ್ಗೆ ಉತ್ತರಿಸಿದ್ದಾರೆ.
ಬೆಂಗಳೂರು (ಏ.20): ಹೇಮಂತ್ ಸೊರೆನ್, ಅರವಿಂದ್ ಕೇಜ್ರಿವಾಲ್, ಮನೀಷ್ ಸಿಸೋಡಿಯಾ, ಡಿಕೆ ಶಿವಕುಮಾರ್. ಜಾರಿ ನಿರ್ದೇಶನಾಲಯ ಈ ಎಲ್ಲರ ಮೇಲೂ ಕೇಸ್‌ಗಳನ್ನು ಹಾಕಿ ಜೈಲಿಗೆ ತಳ್ಳಿತ್ತು. ಕೆಲವರು ಇನ್ನೂ ಜೈಲಿನಲ್ಲಿಯೇ ಇದ್ದಾರೆ. ಇದರ ಬೆನ್ನಲ್ಲಿಯೇ ದೇಶದ ವಿರೋದ ಪಕ್ಷಗಳು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಇಡಿ ಹಾಗೂ ಸಿಬಿಐ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ವಿರೋಧ ಪಕ್ಷದ ನಾಯಕರನ್ನು ಹತ್ತಿಕ್ಕುವ ಸಲುವಾಗಿಯೇ ಇಡಿ ಹಾಗೂ ಸಿಬಿಐ ಅಧಿಕಾರಿಗಳನ್ನು ಛೂ ಬಿಡುತ್ತಿದೆ. ಕೇಂದ್ರ ಸರ್ಕಾರ ಹೇಳಿದಂತೆ ಈ ಸಂಸ್ಥೆಗಳು ಕೇಳುತ್ತಿವೆ ಎಂದು ಆರೋಪಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲಿರುವ ದೊಡ್ಡ ಆರೋಪದ ಬಗ್ಗೆ ಸ್ವತಃ ಮೋದಿ ಅವರೇ ಏಷ್ಯಾನೆಟ್ ಸುವರ್ಣನ್ಯೂಸ್‌ನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ.
'ನನಗೆ ಆಶ್ಚರ್ಯವಾಗುತ್ತೆ... ಉದಾಹರಣೆಗೆ ರೈಲ್ವೆ ತೆಗೆದುಕೊಳ್ಳಿ, ರೈಲಿನಲ್ಲಿ ಟಿಕೆಟ್ ಚೆಕ್ ಮಾಡುವೆ ಒಂದು ಕೆಲಸವಿದೆ. ಅವರ ಬಳಿ ನೀವ್ಯಾಕೆ ಟಿಕೆಟ್ ಚೆಕ್ ಮಾಡ್ತೀರಾ ಅಂದ್ರೆ? ನನ್ನ ಮೇಲೆ ಅನುಮಾನವಿದ್ಯಾ ಅಂದ್ರೆ. ಟಿಕೆಟ್ ಚೆಕ್ ಮಾಡುವವರ ಕೆಲಸ ಟಿಕೆಟ್ ಚೆಕ್ ಮಾಡೋದು. ಅದೇ ಥರ ಇ.ಡಿ ಮಾಡಿದ್ದು ಯಾಕೆ? ಸಿಬಿಐ ಮಾಡಿದ್ದು ಯಾಕೆ? ಅವರ ಜವಾಬ್ದಾರಿ ಅದು. ಸರ್ಕಾರ ಸ್ವಾರ್ಥ ರಾಜಕಾರಣಕ್ಕಾಗಿ ಅವರನ್ನ ತಡೆಯುವ ಕೆಲಸ ಮಾಡಬಾರದು. ಅವರಗೆ ಅಡ್ಡಿಯಾಗಬಾರದು. ಅವರಿಗೆ ಸ್ವತಂತ್ರ್ಯವಾಗಿ ಕೆಲಸ ಮಾಡೋಕೆ ಬಿಡಬೇಕು. ರೈಲಿನಲ್ಲಿ ಟಿಕೆಟ್ ಚೆಕ್ ಮಾಡಿದಂತೆ ತನಿಖಾ ಸಂಸ್ಥೆಗಳ ಕೆಲಸಕ್ಕೂ ಅವಕಾಶ ಕೊಡಬೇಕು' ಎಂದರು.
ಎರಡನೇಯದ್ದಾಗಿ, ಇ.ಡಿ ಏನೇನು ಕೆಲಸ ಮಾಡಿದೆ? ಇಡಿ ಬಳಿ ಭ್ರಷ್ಟಾಚಾರ ಕೇಸ್, ಸರ್ಕಾರಿ ಅಧಿಕಾರಿಗಳದ್ದು, ಡ್ರಗ್ಸ್ ಮಾಫಿಯಾ ಈ ರೀತಿಯ ಕೇಸ್‌ಗಳು ಇರುತ್ತವೆ. ಇದರಲ್ಲಿ ಶೇ.3ರಷ್ಟು ಮಂದಿ ಮಾತ್ರ ರಾಜಕಾರಣಕ್ಕೆ ಸಂಬಂಧಪಟ್ಟವರು. ಶೇ.97ರಷ್ಟು ಜನರಿದ್ದಾರಲ್ಲ, ಕೆಲವರು ಭಯದಿಂದ ಅವಿತುಕೊಂಡಿದ್ದಾರೆ? ಕೆಲವರು ಮನೆಯಲ್ಲಿದ್ದಾರೆ.. ಕೆಲವರು ಜೈಲಿನಲ್ಲಿದ್ದಾರೆ.. ಅವರ ಬಗ್ಗೆ ಯಾರು ಚರ್ಚೆನೇ ಮಾಡಲ್ಲ. ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಕೆಲಸ ಮಾಡೋಕೆ ಯಾವ ಸಂಸ್ಥೆಯನ್ನ ಹುಟ್ಟುಹಾಕಿದ್ರೋ, ಹಳೇ ಸರ್ಕಾರಗಳು ಮಾಡಿದ್ದು, ನಾವು ಮಾಡಿದ್ದಲ್ಲ. ಅವರು ಕೆಲಸ ಮಾಡಿಲ್ಲ ಅಂದ್ರೆ ಪ್ರಶ್ನೆ ಮಾಡಬೇಕು. ನಾವು ಕೆಲಸ ಮಾಡಿದ್ರೆ ಪ್ರಶ್ನೆ ಮಾಡ್ತಿದ್ದಾರೆ. ಇದರಲ್ಲಿ ಲಾಜಿಕ್ ಅರ್ಥ ಆಗ್ತಿಲ್ಲ. ಸರಿ.. ಮೂರು ಪರ್ಸೆಂಟ್ ಜನರ ಬಳಿಗಷ್ಟೇ ಇಡಿ ಹೋಗಿರೋದು. ಇನ್ನೂ 97 ಪರ್ಸೆಂಟ್ ಇದ್ದಾರಲ್ಲ ಅದು ಬೇರೆ ಮಾತು..
ಭ್ರಷ್ಟಾಚಾರ ಮಾಡಿ ಹಣ ಹೊಡೆದು ಒಂದು ಬ್ರಿಡ್ಜ್ ನಿರ್ಮಿಸಿದ್ದಾರೆ ಎಂದುಕೊಳ್ಳಿ, ಭ್ರಷ್ಟಾಚಾರ ಮಾಡೋಕೆ ಅಂತಾನೆ ಕೆಲವರಿಗೆ ಟೆಂಡರ್ ಕೊಟ್ರು, ಅವರು ಬ್ರಿಡ್ಜ್ ಕಟ್ಟಿದ್ರು, ಕೆಲ ವರ್ಷಗಳಾದ್ಮೇಲೆ ಆ ಸೇತುವೆ ಕುಸಿದು ಬಿತ್ತು. ನೀವು ಹೇಳಿ ಎಷ್ಟು ನಷ್ಟವಾಗುತ್ತೆ ಅಂತ. ಯಾರೋ ಒಬ್ಬ ಸಾಮಾನ್ಯ ವ್ಯಕ್ತಿ ತುಂಬಾ ಕಷ್ಟಪಟ್ಟು ಪರೀಕ್ಷೆ ಪಾಸ್ ಮಾಡಿದ್ದಾನೆ. ಅವನ್ಯಾಕೆ ಭ್ರಷ್ಟಾಚಾರ ಮಾಡಲ್ಲ ಅಂದ್ರೆ ಅವನಿಗೆ ಯಾರ ಬೆಂಬಲವಿಲ್ಲ. ಈ ಕಾರಣಕ್ಕೆ ಅವನಿಗೆ ಹಕ್ಕು ಸಿಕ್ಕಿಲ್ಲ ಇನ್ಯಾರಿಗೋ ಸಿಗುತ್ತೆ ಅಂದ್ರೆ, ಯಾರೋ ಅರ್ಹತೆಯಿಲ್ಲದವನಿಗೆ ಕೆಲಸ ಸಿಗುತ್ತೆ ಅಂದರೆ ಏನರ್ಥ. ಇಂಥಾ ಜನರ ಅಸಂತೋಷ... ದೇಶದಲ್ಲಿ ತುಂಬಾ ದಿನ ನಡೆಯಲ್ಲ ಎಂದು ಹೇಳಿದರು.
ಅಧಿಕಾರ ಚಲಾಯಿಸಿಲ್ಲ, ಜನರ ಸೇವೆ ಮಾಡಿದ್ದೇವೆ, 2024ರ ಅಭೂತಪೂರ್ವ ಗೆಲುವಿನ ಕುರಿತು ಮೋದಿ ಮಾತು!
ಮತ್ತೊಂದು, 2014ಕ್ಕೆ ಮೊದಲು ಇ.ಡಿ.. ಪಿಎಂಎಲ್ಎ ಅಡಿಯಲ್ಲಿ ದೇಶದಲ್ಲಿ 1800ಕ್ಕೂ ಕಡಿಮೆ ಕೇಸ್ಗಳನ್ನ ಹಾಕಿತ್ತು. ನೋಡಿ. ಆಗ ಅವರು ಕೆಲಸ ಮಾಡಬೇಕಿತ್ತು. ಅವರ ಸರ್ಕಾರಗಳ ಮೇಲೆಯೇ ಭ್ರಷ್ಟಾಚಾರದ ಆರೋಪಗಳಿದ್ವು. 1800 ಕೇಸ್ಗಳನ್ನಷ್ಟೇ ಮಾಡಿದ್ರು. 2014ರ ನಂತರ 10 ವರ್ಷದಲ್ಲಿ ನಮ್ಮ ಸರ್ಕಾರದಲ್ಲಿ ಇ.ಡಿ, 5000ಕ್ಕೂ ಹೆಚ್ಚು ಕೇಸ್ಗಳನ್ನ ದಾಖಲಿಸಿದೆ. ಇದು ಇ.ಡಿ ಕಾರ್ಯಕ್ಷಮತೆ, ಕೆಲಸ ಎಷ್ಟಿದೆ ನೋಡಿ.. 2014ಕ್ಕೂ ಮೊದಲು ಕೇವಲ 84 ದಾಳಿ ಮಾಡಿದ್ರು ಅಷ್ಟೇ. ಎಷ್ಟೊಂದು ಇಲಾಖೆಗಳಿದ್ವು ಅಲ್ವಾ? 2014ರ ನಂತರ 7 ಸಾವಿರ ಇ.ಡಿ ದಾಳಿ ಮಾಡಲಾಗಿದೆ. 2014ಕ್ಕೂ ಮೊದಲು ಅವರ ಹತ್ತು ವರ್ಷದಲ್ಲಿ 5 ಸಾವಿರ ಕೋಟಿ ಆಸ್ತಿಗಳನ್ನಷ್ಟೇ ಅವರು ಜಪ್ತಿ ಮಾಡಿದ್ರು. 2014ರ ನಂತರ ಒಂದು ಲಕ್ಷ ಕೋಟಿ ಮೊತ್ತದ ಆಸ್ತಿಯನ್ನ ವಶಕ್ಕೆ ಪಡೆಯಲಾಗಿದೆ. ಅದು ದೇಶದ ಸಂಪತ್ತು. ನನಗೆ ಹೇಳಿ ಇ.ಡಿಯ ಟ್ರ್ಯಾಕ್ ರೆಕಾರ್ಡ್ ಏನ್ ಹೇಳುತ್ತೆ ಅಂತಾ. ಇಡಿಯ ಟ್ರ್ಯಾಕ್ ರೆಕಾರ್ಡ್ ಹೇಳುತ್ತೆ, ಕಾರ್ಯಕ್ಷಮತೆ.. ತುಂಬಾ ದೊಡ್ಡಮಟ್ಟದಲ್ಲಿ ಕೆಲಸ. ಸ್ವತಂತ್ರ್ಯವಾಗಿ ಕೆಲಸ ಮಾಡ್ತಿದ್ದಾರೆ. ಈ ದೇಶದಿಂದ ಭ್ರಷ್ಟಾಚಾರ ಹೊರಗೆ ಹಾಕಬೇಕು ಅಂದ್ರೆ, ಯಾವ ಸಂಸ್ಥೆಯನ್ನ ಇದಕ್ಕಾಗಿ ಮಾಡಿದ್ರೋ ಅವರಿಗೆ ಕೆಲಸ ಮಾಡೋಕೆ ನಾವು ಬಿಡಬೇಕು. ರಾಜಕಾರಣಿಗಳು ಇಂಥಾ ಸಂಸ್ಥೆಗಳ ಮೇಲೆ ಮಧ್ಯ ಪ್ರವೇಶ ಮಾಡಬಾರದು. ನಾನು ಪ್ರಧಾನ ಮಂತ್ರಿಯಾಗಿದ್ದೀನಿ ಇ.ಡಿಯ ಕೆಲಸವನ್ನ ನಿಲ್ಲಿಸೋಕೆ ನನಗೆ ಯಾವುದೇ ಹಕ್ಕಿಲ್ಲ.