ಆಡಳಿತ ಸುಧಾರಣೆಗೆ ಮೋದಿ ಹೊಸ ಪ್ಲಾನ್
* 77 ಮಂತ್ರಿಗಳನ್ನು ಒಳಗೊಂಡ 8 ತಂಡಗಳ ರಚನೆ
* ಆಡಳಿತ ಸುಧಾರಣೆಗೆ ಮೋದಿ ಹೊಸ ಪ್ಲಾನ್
* ಪ್ರತಿ ತಂಡಕ್ಕೂ ಪ್ರತ್ಯೇಕ ಟಾಸ್ಕ್ ನೀಡಿದ ಪ್ರಧಾನಿ
ನವದೆಹಲಿ(ನ.15): ಆಡಳಿತ ಸುಧಾರಣೆ ಮತ್ತು ಯೋಜನೆಗಳಿಗೆ ಚುರುಕು ನೀಡಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi), ಈ ನಿಟ್ಟಿನಲ್ಲಿ ಸಂಪುಟದ (Cabinet) ಎಲ್ಲಾ 77 ಸದಸ್ಯರನ್ನು ಒಳಗೊಂಡ 8 ತಂಡಗಳನ್ನು ರಚಿಸಿದ್ದಾರೆ. ಈ ಪ್ರತಿ ತಂಡಕ್ಕೂ ನಿರ್ದಿಷ್ಟಯೋಜನೆಗಳ ಮೇಲೆ ನಿಗಾ ವಹಿಸುವ ಹೊಣೆ ವಹಿಸಲಾಗಿದೆ. ಹೊಸ ಯೋಜನೆ ಜಾರಿಯಲ್ಲಿ ತಂತ್ರಜ್ಞಾನದ ಗರಿಷ್ಠ ಬಳಕೆಗೆ ಒತ್ತು ನೀಡುವಂತೆ ಸೂಚಿಸಲಾಗಿದೆ. ಅಲ್ಲದೆ ಯುವ ವೃತ್ತಿಪರರನ್ನು ತಂಡಕ್ಕೆ ಸೇರಿಸಿಕೊಳ್ಳುವ ಮತ್ತು ನಿವೃತ್ತ ಅಧಿಕಾರಿಗಳ ಸಲಹೆ ಪಡೆಯುವ ಅವಕಾಶವನ್ನು ಕಲ್ಪಿಸಲಾಗಿದೆ.
ಆಡಳಿತ ಸುಧಾರಣೆ (Governance reforms) ನಿಟ್ಟಿನಲ್ಲಿ ಮಂತ್ರಿ ಮಂಡಲದ ಎಲ್ಲಾ 77 ಸಚಿವರ ಜೊತೆ ಇತ್ತೀಚೆಗೆ ನಡೆಸಿದ 5 ತಾಸಿನ ಸುದೀರ್ಘ ಚಿಂತನ ಶಿಬಿರಗಳ ಫಲವಾಗಿ ಈ ಹೊಸ ಕಾರ್ಯತಂತ್ರ ರೂಪುಗೊಂಡಿದೆ ಎಂದು ಮೂಲಗಳು ತಿಳಿಸಿವೆ.
10 ತಂಡ:
77 ಸಚಿವರನ್ನು ತಲಾ 9-10 ಜನರಂತೆ 8 ತಂಡಗಳಾಗಿ ವಿಭಜಿಸಲಾಗಿದೆ. ಪ್ರತಿ ತಂಡಕ್ಕೂ ಹಿರಿಯ ಸಚಿವರು ಸಮನ್ವಯಕಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಪ್ರತಿ ತಂಡಕ್ಕೂ ಪ್ರತ್ಯೇಕವಾಗಿ ತಂತ್ರಜ್ಞಾನ ಆಧರಿತ ಸಂಪನ್ಮೂಲ ಅಭಿವೃದ್ಧಿಪಡಿಸಲು ಸೂಚಿಸಲಾಗಿದೆ. ಅಲ್ಲದೆ ವಿವಿಧ ಕ್ಷೇತ್ರಗಳ ವೃತ್ತಿಪರರನ್ನು ಹುಡುಕಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಸೂಚಿಸಲಾಗಿದೆ. ಸಚಿವಾಲಯದ ಇತರೆ ಕಚೇರಿಗಳಲ್ಲೂ ಇಂಥದ್ದೇ ನೀತಿ ಜಾರಿಗೊಳಿಸಿ ಅಲ್ಲಿಯೂ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡುವ ಮೂಲಕ ಆಡಳಿತದಲ್ಲಿ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಪ್ರತ್ಯೇಕ ಪೋರ್ಟಲ್:
ಸಚಿವರ ಪ್ರತಿ ತಂಡಗಳಿಗೂ, ಪ್ರತಿ ಸಚಿವಾಲಯಕ್ಕೂ ಪ್ರತ್ಯೇಕ ಪೋರ್ಟಲ್ (Portal) ಸೃಷ್ಟಿಸುವಂತೆ ಸೂಚಿಸಲಾಗಿದೆ. ಈ ಪೋರ್ಟಲ್‌ಗಳು ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು ಮತ್ತು ನೀತಿಗಳ ಜಾರಿಯಲ್ಲಿ ಸಚಿವಾಲಯದ ಸಾಧನೆಗಳ ಮಾಹಿತಿ ನೀಡುವಂತೆ ರೂಪುಗೊಳ್ಳಲಿವೆ. ಅಲ್ಲದೆ ಪ್ರತಿ ಸಚಿವಾಲಯವು ಕೈಗೊಂಡ ನಿರ್ಧಾರಗಳ ಮಾಹಿತಿ ಒದಗಿಸುವ, ನಿಗದಿತ ಸಭೆಗಳ ಬಗ್ಗೆ ಮಾಹಿತಿ ಕೊಡುವ, ಸಂವಹನ ನಿರ್ವಹಣೆಯ ಸಮಗ್ರ ಚಿತ್ರಣ ಒದಗಿಸುವ ಪ್ರತ್ಯೇಕ ಡ್ಯಾಶ್‌ಬೋರ್ಡ್ ಸ್ಥಾಪನೆಯ ಹೊಣೆಯನ್ನೂ ಈ ತಂಡಗಳಿಗೆ ವಹಿಸಲಾಗಿದೆ. ಜೊತೆಗೆ ಈ ತಂಡಗಳಿಗೆ ದೇಶದ ಪ್ರತಿ ಜಿಲ್ಲೆ, ರಾಜ್ಯ, ಸಚಿವಾಲಯದ ಪ್ರೊಫೈಲ್ ಸಿದ್ಧಪಡಿಸುವ ಹೊಣೆಯನ್ನು ನೀಡಲಾಗಿದೆ.
ಈ 8 ತಂಡಗಳ ಪೈಕಿ ಒಂದು ತಂಡಕ್ಕೆ ಸಂಶೋಧನೆ, ಸಂವಹನ ಮತ್ತು ಇತರೆ ಕೆಲ ವಲಯಗಳನ್ನು ಸಮರ್ಥವಾಗಿ ನಿರ್ವಹಿಸುವ ಕನಿಷ್ಠ ಮೂರು ವೃತ್ತಿಪರರ ಆಯ್ಕೆಗೆ ಬೇಕಾದ ವ್ಯವಸ್ಥೆ ರೂಪಿಸುವ ಹೊಣೆ ನೀಡಲಾಗಿದೆ. ಜೊತೆಗೆ ಈ ತಂಡಕ್ಕೆ ನಿವೃತ್ತ ಸಿಬ್ಬಂದಿಗಳ ಪ್ರತಿಕ್ರಿಯೆ ಮತ್ತು ಅನುಭವಗಳ ಮಾಹಿತಿ ಸಂಗ್ರಹಿಸುವ ಪೋರ್ಟಲ್ ಸೃಷ್ಟಿಯ ಹೊಣೆ ವಹಿಸಲಾಗಿದೆ.
ಏನೇನು ಯೋಜನೆ?
- ಮಂತ್ರಿಮಂಡಲದ 77 ಸಚಿವರು 9-10 ಜನರ ತಂಡಗಳಾಗಿ ವಿಂಗಡಣೆ
- ಪ್ರತಿ ತಂಡಕ್ಕೂ ಹಿರಿಯ ಸಚಿವರು ಸಮನ್ವಯಕಾರರಾಗಿ ಕಾರ‍್ಯನಿರ್ವಹಣೆ
- ಒಂದೊಂದು ತಂಡಕ್ಕೂ ನಿರ್ದಿಷ್ಟಯೋಜನೆ ಮೇಲೆ ನಿಗಾ ಹೊಣೆಗಾರಿಕೆ
- ಯುವ ವೃತ್ತಿಪರರ ಸೇರ್ಪಡೆ, ನಿವೃತ್ತರ ಸಲಹೆ ಪಡೆಯಲು ಅವಕಾಶ
- ಹೊಸ ಯೋಜನೆ ಜಾರಿಯಲ್ಲಿ ತಂತ್ರಜ್ಞಾನ ಗರಿಷ್ಠ ಬಳಕೆಗೆ ನಿರ್ದೇಶನ
- ಸಚಿವರ ಪ್ರತಿ ತಂಡಗಳಿಗೂ ಪ್ರತ್ಯೇಕ ಪೋರ್ಟಲ್ ಸೃಷ್ಟಿಸಲು ಸೂಚನೆ
- ಆಡಳಿತ ಸುಧಾರಣೆ, ಯೋಜನೆಗಳಿಗೆ ಚುರುಕು ನೀಡಲು ಈ ಕಸರತ್ತು