- ಕೇಂದ್ರದ ರಾಜತಾಂತ್ರಿಕ ಬಲ, ರಾಜ್ಯ ಸರ್ಕಾರದ ಅವಿರತ ಶ್ರಮಕ್ಕೆ ಕಡೆಗೂ ಸಂದ ಫಲ- ಮಾ.1ಕ್ಕೆ ಉಕ್ರೇನ್‌-ರಷ್ಯಾ ಯುದ್ಧದಲ್ಲಿ ಬಲಿಯಾಗಿದ್ದ ಹಾವೇರಿಯ ವೈದ್ಯ ವಿದ್ಯಾರ್ಥಿ- ದೇಹ ಕೆಡದಂತೆ ರಕ್ಷಿಸಿ, ಯುದ್ಧದ ನಡುವೆಯೇ ರಸ್ತೆ ಮೂಲಕ ಪೋಲೆಂಡ್‌ಗೆ 

ಬೆಂಗಳೂರು(ಮಾ.22): ರಷ್ಯಾ ಉಕ್ರೇನ್‌ ಯುದ್ಧ ಭೂಮಿಯಲ್ಲಿ ಸಾವಿರಾರು ಹೆಣಗಳ ರಾಶಿಯಲ್ಲಿ ಒಂದಾಗಿದ್ದ ಕನ್ನಡಿಗ ನವೀನ್‌ ಪಾರ್ಥಿವ ಶರೀರ ಪವಾಡ ಸದೃಶ ರೀತಿ ಕಡೆಗೂ ತಾಯ್ನಾಡಿಗೆ ತಲುಪಿದೆ.

ಪ್ರಧಾನಿ ನರೇಂದ್ರ ಮೋದಿಯ ರಾಜತಾಂತ್ರಿಕತೆಯ ಬಲದೊಂದಿಗೆ ಮೂರು ವಾರಗಳ ಕಾಲ ನಡೆದ ಕೇಂದ್ರ ಸರ್ಕಾರ ಮತ್ತು ಭಾರತೀಯ ರಾಯಭಾರ ಕಚೇರಿಗಳ ಅವಿರತ ಶ್ರಮ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದ ಕಟಿಬದ್ಧತೆ ಫಲವಾಗಿ ದೂರದ ದೇಶದಲ್ಲಿ ಯುದ್ಧವೊಂದಕ್ಕೆ ಬಲಿಯಾದ ತಮ್ಮ ಪುತ್ರನ ಪಾರ್ಥಿವ ಶರೀರದ ಅಂತಿಮ ದರುಶನ ಪಡೆಯಲು ನವೀನ್‌ ಪೋಷಕರಿಗೆ ಸಾಧ್ಯವಾಗಿದೆ.

ಆಪರೇಷನ್‌ ಗಂಗಾ ಕಾರ್ಯಾಚರಣೆ ಮೂಲಕ ಯುದ್ಧ ಭೂಮಿಯಲ್ಲಿ ಸಿಲುಕಿರುವರನ್ನು ಕರೆತರುವ ಸಾಹಸಕ್ಕೆ ಕೈಹಾಕಿದ್ದ ಕೇಂದ್ರ ಸರ್ಕಾರಕ್ಕೆ ಆರಂಭದಲ್ಲಿ ಖಾರ್ಕೀವ್‌ನಲ್ಲಿ ಮಾ.1 ರಂದು ಮೃತಪಟ್ಟಭಾರತೀಯ ನವೀನ್‌ ಸಾವಿನ ಸುದ್ದಿ ದೊಡ್ಡ ಆಘಾತ ಕೊಟ್ಟಿತು. ಮೊದಲು ಬದುಕಿರುವವರನ್ನು ಭಾರತಕ್ಕೆ ಕರೆತರುವತ್ತ ಗಮನ ಹರಿಸಿದ ಕೇಂದ್ರ ಸರ್ಕಾರ, ಎರಡು ವಾರಗಳ ನಿರಂತರ ಶ್ರಮವಹಿಸಿ ಮೊದಲು ಜೀವಂತವಾಗಿದ್ದವರನ್ನು ಕರೆತಂದಿತು. ಇತ್ತ ರಾಜ್ಯ ಸರ್ಕಾರದ ಒತ್ತಡ ಹೆಚ್ಚಾದ ಹಿನ್ನೆಲೆ ಪ್ರಧಾನಿ ಮತ್ತು ವಿದೇಶಾಂಗ ಸಚಿವರು ತಮ್ಮ ರಾಜತಾಂತ್ರಿಕ ನೈಪುಣ್ಯತೆಯೊಂದಿಗೆ ನವೀನ್‌ ಮೃತದೇಹ ತರುವ ಕಾರ್ಯಾಚರಣೆ ಆರಂಭಿಸಿದರು.

21 ದಿನಗಳ ನಂತರ ತಾಯ್ನಾಡಿಗೆ ಬಂದ ನವೀನ್ ಪಾರ್ಥಿವ ಶರೀರ: ಅಂತಿಮ ದರ್ಶನ ಪಡೆದ ಸಿಎಂ ಬೊಮ್ಮಾಯಿ

ಏಜೆಂಟ್‌ಗಳ ಮೂಲಕ ಮೃತದೇಹ ರಕ್ಷಣೆ
ನವೀನ್‌ ದೇಹವನ್ನು ದೂರದ ಉಕ್ರೇನ್‌ನಿಂದ ತವರಿಗೆ ತರುವ ಯಮಸಾಹಸದ ವಿವರವನ್ನು ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಚ್ಚಿಟ್ಟರು. ಆಹಾರ ಪದಾರ್ಥ ತರಲೆಂದು ಮನೆ ಸಮೀಪದ ಸೂಪರ್‌ ಮಾರ್ಕೆಟ್‌ಗೆ ತೆರಳಿದ್ದ ನವೀನ್‌ ಶೆಲ್‌ ದಾಳಿಯ ವೇಳೆ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಸ್ಥಳೀಯ ಶವಾಗಾರದಲ್ಲಿ ಇರಿಸಲಾಗಿತ್ತು. ಭಾರತೀಯ ರಾಯಭಾರಿ ಅಧಿಕಾರಿಗಳು ನೇರವಾಗಿ ನವೀನ್‌ ಮೃತದೇಹಗಳ ಅಂತ್ಯಕ್ರಿಯೆಗೆಂದೇ ಇರುವ ಫ್ಯುನರಲ್‌ ಏಜೆಂಟ್ಸ್‌ ಸಂಪರ್ಕಿಸಿ ನವೀನ್‌ ಮೃತದೇಹವನ್ನು ವಾಪಸ್‌ ಪಡೆದುಕೊಂಡಿತು. ಇನ್ನು ಯುದ್ಧ ತೀವ್ರತೆ ಕಡಿಮೆಯಾದ ನಂತರ ಕರೆದೊಯ್ಯುವ ಉದ್ದೇಶ ಇದ್ದ ಹಿನ್ನೆಲೆ ಮೃತದೇಹವನ್ನು ಸುರಕ್ಷಿತವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ಎಂಬಾಲ್ಮಿಂಗ್‌ ಮಾಡಲಾಗಿತ್ತು. ಈ ಮೂಲಕ ಶವವನ್ನು ದೀರ್ಘಕಾಲದವರೆಗೆ ಕೊಳೆಯದಂತೆ ರಕ್ಷಿಸಿ ಇಡುವ ಕೆಲಸ ಮಾಡಲಾಗಿದೆ.

ದಾಳಿ ನಡವೆ ರಸ್ತೆ ಮಾರ್ಗದಲ್ಲಿ ಪಯಣ
ಬಳಿಕ ಉಕ್ರೇನಲ್ಲಿ ವಿಮಾನ ಹಾರಾಟ ರದ್ದಾಗಿದ್ದ ಹಿನ್ನೆಲೆ ರಸ್ತೆ ಮಾರ್ಗದ ಮೂಲಕ ಮೃತದೇಹ ರವಾನಿಸುವ ಸಾಹಸ ಕೈಗೊಳ್ಳಬೇಕಿತ್ತು. ನಗರದ ಮೇಲೆ ಭಾರೀ ಪ್ರಮಾಣದ ಶೆಲ್‌, ಬಾಂಬ್‌, ಕ್ಷಿಪಣಿ ದಾಳಿ ನಡೆಯುತ್ತಿತ್ತು. ಜನರೇ ಮನೆಯಿಂದ ಹೊರಗೆ ಬರುವ ಸ್ಥಿತಿ ಇರಲಿಲ್ಲ. ಆ್ಯಂಬುಲೆನ್ಸ್‌ ಅಥವಾ ಸಾರಿಗೆ ಚಾಲಕರು ಮೃತದೇಹ ಸಾಗಿಸಲು ತಯಾರಿರಲಿಲ್ಲ. ಸ್ಥಳೀಯ ನೆರವಿನಿಂದ ವಾಹನ ವ್ಯವಸ್ಥೆ ಮಾಡಿಕೊಂಡು ಯುದ್ಧ ಭೂಮಿಯಲ್ಲಿ ಮೃತದೇಹ ರವಾನೆ ಮಾಡಲು ಹರಸಾಹಸ ಪಡಬೇಕಾಯಿತು ಎಂದು ಅವರು ವಿವರಿಸಿದರು.

Russia Ukraine War: ರಷ್ಯಾಕ್ಕೆ ದೊಡ್ಡ ಇರುಸುಮುರುಸು... ಪೋಲೆಂಡ್‌ ಗಡಿಯಿಂದ ದಾಳಿ

ಪವಾಡಸದೃಶವಾಗಿ ಕೆಡದಂತೆ ಬಂದಿದೆ
ಅಂತಿಮವಾಗಿ ಔಪಚಾರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿಕೊಂಡು ಮಾ.12ರಂದು ರಸ್ತೆ ಮಾರ್ಗದ ಮೂಲಕವಾಗಿ ಖಾರ್ಕೀವ್‌ನಿಂದ ಡ್ನಿಪ್ರೋಗೆ ಪಾರ್ಥಿವ ಶರೀರ ಸಾಗಿಸಲಾಯಿತು. ಮಾ.14ರಂದು ವಿನ್ನಿಸ್ತಿಯಾಗೆ ಸ್ಥಳಾಂತರಿಸಿ, ಉಕ್ರೇನ್‌ ಸರ್ಕಾರದ ಅಗತ್ಯ ಅನುಮತಿ ಪಡೆದು ಮಾ.18ರಂದು ನೆರೆಯ ಪೋಲೆಂಡ್‌ ಗಡಿಗೆ ಸಾಗಿಸಲಾಯಿತು. ಅಲ್ಲಿಯೂ ಅಗತ್ಯ ದಾಖಲೆಗಳನ್ನು ಒದಗಿಸಿ ಮಾ.19ರಂದು ವಾರ್ಸೋವ್‌- ಬೆಂಗಳೂರಿಗೆ ರವಾನಿಸುವ ವ್ಯವಸ್ಥೆ ಮಾಡಲಾಯಿತು. ಎಮಿರೈಟ್ಸ್‌ ಇಕೆ-0568 ವಿಮಾನದ ಮೂಲಕ ಬೆಂಗಳೂರಿಗೆ ತರಲಾಗಿದೆ. ನವೀನ್‌ ಮೃತದೇಹ 20 ದಿನಗಳ ಬಳಿಕವೂ ಕೆಡದಂತೆ ಹಾಗೂ ಯುದ್ಧ ಭೂಮಿಯಿಂದ ತಂದಿರುವುದನ್ನು ಪವಾಡಸದೃಶ ಎಂದು ಸಿಎಂ ಬಣ್ಣಿಸಿದರು.

ನವೀನ್‌ ತಾಯಿ ಭಾವನೆಗೆ ಮೋದಿ ಗೌರವ
ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ತಕ್ಷಣ ಪ್ರಧಾನಿಗಳು ನವೀನ್‌ ಪೋಷಕರೊಂದಿಗೆ ಮಾತನಾಡಿದರು. ಯುದ್ಧ ಭೂಮಿಯಿಂದ ಸೈನಿಕರನ್ನು ತರುವುದೇ ಕಷ್ಟವಿರುವಾಗ ಪವಾಡದ ರೀತಿಯಲ್ಲಿ ನವೀನ್‌ ದೇಹ ತರಲಾಗಿದೆ. ಈ ಅಸಾಧ್ಯವಾದ ಕೆಲಸವನ್ನು ಪ್ರಧಾನಿಗಳು ಮಾಡಿ ತೋರಿಸಿದ್ದಾರೆ. ಆ ಮೂಲಕ ನವೀನ್‌ ತಾಯಿಯ ಭಾವನೆಯನ್ನು ಪ್ರಧಾನಿಗಳು ಗೌರವಿಸಿದ್ದಾರೆ ಎಂದು ಸಿಎಂ ಹೇಳಿದರು.

ಸಮನ್ವಯದ ಕೆಲಸ
ಉಕ್ರೇನ್‌ನಲ್ಲಿ ಭಾರತೀಯೊಬ್ಬರ ಮೊದಲ ಸಾವಿನ ಘಟನೆಯಾಗಿತ್ತು. ಘಟನೆ ನಡೆದಾಗ ಖಾರ್ಕೀವ್‌ನಲ್ಲಿ ಇದ್ದ ಪರಿಸ್ಥಿತಿ ನೋಡಿ, ನವೀನ್‌ ಮೃತದೇಹವನ್ನು ತಾಯ್ನಾಡಿಗೆ ತರಲು ಆಗುವುದಿಲ್ಲ ಎಂದು ಅಲ್ಲಿನ ಭಾರತ ರಾಯಭಾರ ಕಚೇರಿಯ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದರು. ಅಂತಿಮವಾಗಿ ಯೋಜನೆಯೊಂದನ್ನು ರೂಪಿಸಿ ಮೃತ ನವೀನ್‌ ಪಾರ್ಥಿವ ಶರೀರ ತರುವಲ್ಲಿ ಪ್ರಧಾನಮಂತ್ರಿಗಳು, ಪಿಎಂ ಕಚೇರಿ, ವಿದೇಶಾಂಗ ಸಚಿವ ಜೈಶಂಕರ, ರಷ್ಯಾ, ಉಕ್ರೇನ್‌ ರಾಯಭಾರಿ ಕಚೇರಿಗಳು ಸಮನ್ವಯದಿಂದ ಕಾರ್ಯಾಚರಣೆ ಮಾಡಿದ್ದಾರೆ ಎಂದು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ಯವಾಗಿದೆ.

9 ದಿನದ ಪಯಣ

ಮಾ.1: ರಷ್ಯಾ ಬಾಂಬ್‌ ದಾಳಿಗೆ ಸಿಲುಕಿ ನವೀನ್‌ ಸಾವು, ಸ್ಥಳೀಯ ಶವಾಗಾರದಲ್ಲಿ ದೇಹ ಸಂರಕ್ಷಣೆ

ಮಾ.12: ಯುದ್ಧದ ಕಾರಣ ಖಾರ್ಕೀವ್‌ನಿಂದ ರಸ್ತೆ ಮೂಲಕ ದಕ್ಷಿಣ ಭಾಗದ ಡ್ನಿಪ್ರೋಗೆ ರವಾನೆ

ಮಾ.14: ಅಲ್ಲಿಂದ ಪಶ್ಚಿಮ ಉಕ್ರೇನ್‌ನ ವಿನ್ನಿಟ್ಸಿಯಾಗೆ ರಸ್ತೆ ಮಾರ್ಗವಾಗಿಯೇ ದೇಹ ಸ್ಥಳಾಂತರ

ಮಾ.18: ಸತತ ರಾಜತಾಂತ್ರಿಕ ಸಮನ್ವಯ ಸಾಧಿಸಿದ ಬಳಿಕ ಪೋಲೆಂಡ್‌ ಗಡಿಗೆ ರಸ್ತೆಯಲ್ಲೇ ರವಾನೆ

ಮಾ.19: ಅಗತ್ಯ ದಾಖಲೆ, ಪ್ರಕ್ರಿಯೆ ಪೂರೈಸಿದ ಬಳಿಕ ಪೋಲೆಂಡ್‌ನ ವಾರ್ಸೋವ್‌ನಿಂದ ತವರಿಗೆ

ಮಾ.21: 9 ದಿನಗಳ ಯಾತ್ರೆ ಬಳಿಕ ತಾಯ್ನಾಡಿಗೆ ತಲುಪಿದ ನವೀನ್‌ ದೇಹ. ಪೋಷಕರ ನಿಟ್ಟುಸಿರು