ನವದೆಹಲಿ(ಜ.06): ಪ್ರಧಾನಿ ನರೇಂದ್ರ ಮೋದಿ ಅವರು 500 ರು. ಹಾಗೂ 1000 ರು. ನೋಟು ರದ್ದತಿ ಮಾಡುವ ವಿಷಯವು ತಮಗೂ ಗೊತ್ತಿರಲಿಲ್ಲ ಎಂದು ತಮ್ಮ ಜೀವನ ಚರಿತ್ರೆಯಲ್ಲಿ ಮಾಜಿ ರಾಷ್ಟ್ರಪತಿ ದಿವಂಗತ ಪ್ರಣಬ್‌ ಮುಖರ್ಜಿ ಬರೆದಿದ್ದಾರೆ.

‘ಮೋದಿ ಅವರು 2016ರ ನ.18ರಂದು ನೋಟು ರದ್ದತಿ ಮಾಡಿದ್ದು ಅವರು ಘೋಷಣೆ ಮಾಡಿದ ಬಳಿಕವೇ ತಿಳಿಯಿತು. ಇದಕ್ಕೆ ವಿಪಕ್ಷಗಳು ಟೀಕೆಯನ್ನೂ ಮಾಡಿದವು. ಆದರೆ ಇಂಥ ಮಹತ್ವದ ಕ್ರಮಗಳನ್ನು ಅಚ್ಚರಿಯ ಘೋಷಣೆ ಮಾಡುವುದು ಅಗತ್ಯ. ಮೊದಲೇ ವಿಪಕ್ಷಗಳೊಂದಿಗೆ ಈ ಬಗ್ಗೆ ಚರ್ಚಿಸಿದ್ದರೆ ಘೋಷಣೆಗೆ ಯಾವುದೇ ಮಹತ್ವ ಇರುತ್ತಿರಲಿಲ್ಲ. ಹಾಗಾಗಿ ಮೋದಿ ನನ್ನೊಂದಿಗೆ ಚರ್ಚಿಸಲಿಲ್ಲ ಎಂಬುದು ನನಗೆ ಅಚ್ಚರಿ ತರಲಿಲ್ಲ. ಮೋದಿ ಶೈಲಿಗೆ ತಕ್ಕದಾದ ಘೋಷಣೆ ಅದಾಗಿತ್ತು. ಮಾಜಿ ಹಣಕಾಸು ಸಚಿವನಾಗಿ ನಾನು ಕೂಡಾ ಅವರ ನಿರ್ಧಾರವನ್ನು ಬೆಂಬಲಿಸಿದ್ದೆ’ ಎಂದು ‘ಪ್ರಸಿಡೆನ್ಷಿಯಲ್‌ ಇಯರ್ಸ್‌’ ಪುಸ್ತಕದಲ್ಲಿ ಪ್ರಣಬ್‌ ಬರೆದಿದ್ದಾರೆ.

‘ಇನ್ನು 2014ರಲ್ಲಿ ಕಾಂಗ್ರೆಸ್‌ ಪಕ್ಷವು ತನ್ನಲ್ಲಿ ಯಾವುದೇ ವರ್ಚಸ್ವಿ ನಾಯಕ ಇಲ್ಲ ಎಂಬುದನ್ನು ಅರಿಯಲು ವಿಫಲವಾಯಿತು. ಇದು ಆಗ ಪಕ್ಷದ ಸೋಲಿಗೆ ಕಾರಣವಾಯಿತು. ನಾನು ಒಮ್ಮೆ ಇದ್ದ ಪಕ್ಷ ಕೇವಲ 44 ಸ್ಥಾನ ಪಡೆದಿದ್ದು ಬೇಸರ ತರಿಸಿತು’ ಎಂದಿದ್ದಾರೆ.