ವಿರೋಧಿಗಳ ನೆಲದಲ್ಲಿ ಧೈರ್ಯವಾಗಿ ಸಿಎಎ ಸಮರ್ಥಿಸಿಕೊಂಡ ಧೀರ!

'ಸಿಎಎ ಪೌರತ್ವ ಕಸಿಯುವುದಿಲ್ಲ, ಪೌರತ್ವ ಕೊಡುತ್ತದೆ'| ಪ.ಬಂಗಾಳದಲ್ಲಿ ಪ್ರಧಾನಿ ಮೋದಿ ಘೋಷಣೆ| ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಗೊಂದಲ ಬೇಡ ಎಂದ ಪ್ರಧಾನಿ| ಮಹಾತ್ಮಾ ಗಾಂಧಿಜೀ ಆಶಯದಂತೆ ಸಿಎಎ ಜಾರಿ ಎಂದ ಪ್ರಧಾನಿ| ದೇಶದ ಯುವ ಜನತೆಗೆ ರಾಷ್ಟ್ರೀಯ ಯುವ ದಿನಾಚರಣೆಯ ಶುಭ ಕೋರಿದ ಮೋದಿ| 'ಮುಂದಿನ ಐದು ವರ್ಷಗಳಲ್ಲಿ ಈ ದೇಶವನ್ನು ಯುವ ಸಮುದಾಯ ಮುನ್ನಡೆಸಲಿದೆ'|

PM Modi Defends CAA Says Act Will Not Snatch Citizenship

ಕೋಲ್ಕತ್ತಾ(ಜ.12): ಸಿಎಎ ವಿರೋಧಿಸಿ ಪ.ಬಂಗಾಳದಾದ್ಯಂತ ಪ್ರತಿಭಟನೆಯ ಕಾವು ಜೋರಾಗಿದೆ. ಖುದ್ದು ರಾಜ್ಯ ಸರ್ಕಾರವೇ ಸಿಎಎ ಜಾರಿ ವಿರೋಧಿಸುತ್ತಿರುವುದರಿಂದ ವಿರೋಧ ಪ್ರದರ್ಶನ ತುಸು ಜೋರಾಗಿಯೇ ಅಬ್ಬರಿಸುತ್ತಿದೆ.

ಆದರೆ ಇದ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೇ ಸಿಎಎ ಜಾರಿಗೆ ಪಣ ತೊಟ್ಟಿರುವ ಪ್ರಧಾನಿ ಮೋದಿ, ವಿರೋಧಿಗಳ ನೆಲದಲ್ಲಿ ನಿಂತುಕೊಂಡೇ ಕಾಯ್ದೆಯ ಜಾರಿಯಿಂದಾಗುವ ಪ್ರಯೋಜನಗಳ ಕುರಿತು ದೇಶದ ಜನತೆಗೆ ಮನವರಿಕೆ ಮಾಡಿಕೊಟ್ಟಿರುವುದು ವಿಶೇಷ.

ಪೌರತ್ವ ತಿದ್ದುಪಡಿ ಕಾಯ್ದೆ ಪೌರತ್ವವನ್ನು ಕಿತ್ತುಕೊಳ್ಳುವುದಲ್ಲ, ಬದಲಾಗಿ ಪೌರತ್ವ ನೀಡುತ್ತದೆ ಎಂದು ಮತ್ತೆ ಮತ್ತೆ ಸಾರಿ ಹೇಳುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಕೋಲ್ಕತ್ತಾದ ಬೇಲೂರು ಮಠದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ನಡೆದ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೋದಿ ಮಾತನಾಡಿದರು.

ಕಾಯ್ದೆಯನ್ನು ದಿಢೀರ್ ಆಗಿ ಜಾರಿಗೆ ತಂದಿಲ್ಲ ಎಂದ ಪ್ರಧಾನಿ, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡಿಸಿ ಚರ್ಚೆ ನಡೆಸಿ ಸದಸ್ಯರ ಅಂಗೀಕಾರ ದೊರೆತ ಮೇಲಷ್ಟೇ ಜಾರಿಗೆ ತರಲಾಗಿದೆ ಎಂದು ಹೇಳಿದರು.

CAA ಪರ ಅಭಿಯಾನ: ಬಿಜೆಪಿಗೆ 52 ಲಕ್ಷ ಮಿಸ್ಡ್ ಕಾಲ್!

ರಾಜಕೀಯದ ಆಟ ಆಡುವವರು ಉದ್ದೇಶಪೂರ್ವಕವಾಗಿ ಸಿಎಎ ಬಗ್ಗೆ ತಿಳಿದುಕೊಳ್ಳಲು ಹೋಗುವುದಿಲ್ಲ. ಇದರಿಂದ ನಮ್ಮ ದೇಶದ ನಾಗರಿಕರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ನಾನು ಭರವಸೆ ಕೊಡುತ್ತೇನೆ ಎಂದು ಪ್ರಧಾನಿ ನುಡಿದರು.

ಸ್ವಾತಂತ್ರ್ಯದ ನಂತರ ಮಹಾತ್ಮಾ ಗಾಂಧಿ ಪಾಕಿಸ್ತಾನದಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗರುವ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡಬೇಕೆಂದು ಪ್ರತಿಪಾದಿಸಿದ್ದರು. ಗಾಂಧಿಜೀ ಅವರ ಆಶಯದಂತೆ ನಮ್ಮ ಸಹೋದರರಿಗೆ ಪೌರತ್ವ ನೀಡುತ್ತಿರುವುದಾಗಿ ಮೋದಿ ಸ್ಪಷ್ಟಪಡಿಸಿದರು.

ವಿರೋಧ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಕಾಯ್ದೆಯನ್ನು ವಿರೋಧಿಸುತ್ತಿದ್ದು, ದೇಶದ ಯುವ ಜನತೆ ಇವರ ಮಾತುಗಳಿಗೆ ಮರುಳಾಗುವುದಿಲ್ಲ ಎಂದು ಪ್ರಧಾನಿ ಈ ವೇಳೆ ಭರವಸೆ ವ್ಯಕ್ತಪಡಿಸಿದರು.

ಈ ವೇಳೆ ರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ದೇಶದ ಯುವ ಸಮುದಾಯಕ್ಕೆ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ, ನವ ಭಾರತದ ನಿರ್ಮಾಣದ ಕನಸನ್ನು ಯುವ ಸಮುದಾಯ ಸಾಕಾರಗೊಳಿಸಲು ಸಾಧ್ಯ ಎಂದು ಹೇಳಿದರು.

ಮುಂದಿನ ಐದು ವರ್ಷಗಳಲ್ಲಿ ಈ ದೇಶವನ್ನು ಯುವ ಸಮುದಾಯವೇ ಮುನ್ನಡೆಸಲಿದ್ದು, ಸ್ವಾಮಿ ವಿವೇಕಾನಂದರ ನುಡಿಗಳನ್ನು ಸ್ಮರಿಸುತ್ತಾ ದೇಶ ನಿರ್ಮಾಣ ಕಾರ್ಯದಲ್ಲಿ ನಿರತರಾಗಲಿದ್ದಾರೆ ಎಂಬ ಭರವಸೆ ನನಗಿದೆ ಎಂದು ಮೋದಿ ಹೇಳಿದರು.

Latest Videos
Follow Us:
Download App:
  • android
  • ios