ಸ್ವದೇಶಿ ನಿರ್ಮಿತ ಯುದ್ಧ ನೌಕೆ ವಿಕ್ರಾಂತ್ ಸಂಚಾರ ಆರಂಭ; ಐತಿಹಾಸಿಕ ಕ್ಷಣ ಎಂದ ಪ್ರಧಾನಿ ಮೋದಿ!
- ವಿಮಾನ ವಾಹಕ ಯುದ್ಧನೌಕೆ ವಿಕ್ರಾಂತ ಸಂಚಾರ ಆರಂಭ
- ಮೇಡ್ ಇನ್ ಇಂಡಿಯಾಗೆ ಉತ್ತಮ ಉದಾಹರಣೆ
- ಇದು ಐತಿಹಾಸಿಕ ಕ್ಷಣ, ನೌಕಾಪಡೆ, ಕೊಚ್ಚಿ ಶಿಪ್‌ಯಾರ್ಡ್ ಅಭಿನಂದಿಸಿದ ಮೋದಿ
ನವದೆಹಲಿ(ಆ.04): ಮೇಡ್ ಇನ್ ಇಂಡಿಯಾ ವಿಮಾನ ವಾಹಕ ಯುದ್ಧ ನೌಕೆ ವಿಕ್ರಾಂತ್ ಸಂಚಾರ ಆರಂಭಿಸಿದೆ. ಭಾರತೀಯ ನೌಕಾಪಡೆ ಹಾಗೂ ಕೊಚ್ಚಿ ಶಿಪ್‌ಯಾರ್ಡ್ ಜಂಟಿಯಾಗಿ ನಿರ್ಮಾಣ ಮಾಡಿದ ಈ ಯುದ್ಧನೌಕೆ ಇದೀಗ ಪ್ರಯೋಗಾರ್ಥ ಸಂಚಾರ ಆರಂಭಿಸಿದೆ. ಈ ಕ್ಷಣವನ್ನು ಪ್ರಧಾನಿ ಮೋದಿ ಐತಿಹಾಸಿಕ ಎಂದು ಬಣ್ಣಿಸಿದ್ದಾರೆ.
ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನ ವಾಹಕ ನೌಕೆ ವಿಕ್ರಾಂತ್ ಸಂಚಾರ ಆರಂಭ!
ಭಾರತೀಯ ನೌಕಾಪಡೆ ಹಾಗೂ ಕೊಚ್ಚಿನ್ ಶಿಪ್‌ಯಾರ್ಡ್ ಅಭಿವೃದ್ದಿ ಪಡಿಸಿದ ಐಎನ್ಎಸ್ ವಿಕ್ರಾಂತ್ ಯುದ್ದ ನೌಕೆ ಇಂದು ಮೊದಲ ಸಮುದ್ರ ವಿಹಾರ ಆರಂಭಿಸಿದೆ. ಮೇಕ್ ಇನ್ ಇಂಡಿಯಾಗೆ ಇದು ಉತ್ತಮ ಉದಾಹರಣೆಯಾಗಿದೆ. ಭಾರತೀಯ ನೌಕಾಪಡೆ ಹಾಗೂ ಕೊಚ್ಚಿ ಶಿಪ್‌ಯಾರ್ಡ್‌ಗೆ ಆಭಿನಂದನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಭಾರತದಲ್ಲಿ ವಿನ್ಯಾಸಗೊಳಿಸಿ, ಸಂಪೂರ್ಣವಾಗಿ ಭಾರತದಲ್ಲಿ ನಿರ್ಮಾಣಗೊಂಡಿರುವ ಅತೀದೊಡ್ಡ ಹಾಗೂ ಅತ್ಯಂತ ಕ್ಲಿಷ್ಟ ಯುದ್ದನೌಕೆ ಇದಾಗಿದೆ. ಆತ್ಮನಿರ್ಭರ ಭಾರತ ಪರಿಕಲ್ಪನೆಗೆ ಹಿಡಿದ ಕನ್ನಡಿಯಾಗಿದೆ. ಕೇಂದ್ರದ ಮೇಕ್ ಇನ್ ಇಂಡಿಯಾ ಯೋಜನೆ ಅಡಿ ಈ ಯುದ್ಧನೌಕೆ ನಿರ್ಮಾಣ ಮತ್ತಷ್ಟು ವೇಗ ಪಡೆದುಕೊಂಡಿತು. ಇದು ನಮ್ಮ ಹೆಮ್ಮೆಯ ಹಾಗೂ ಐತಿಹಾಸಿಕ ಸಾಧನೆಯಾಗಿದೆ ಎಂದು ಭಾರತೀಯ ನೌಕಾಪಡೆ ಹೇಳಿದೆ.
40,000 ಟನ್ ತೂಕದ ಯುದ್ಧನೌಕೆ ನಿರ್ಮಾಣ ಯೋಜನೆಗೆ ಗ್ರೀನ್ ಸಿಗ್ನಲ್ ಆರಂಭಗೊಂಡಿರುವುದು 2009ರಲ್ಲಿ. ಡಿಸೆಂಬರ್ 2011ರಲ್ಲಿ ನಿರ್ಮಾಣ ಕಾರ್ಯ ಆರಂಭಗೊಂಡಿತು. ನವೆಂಬರ್ 2020ಕ್ಕೆ ನಿರ್ಮಾಣ ಪೂರ್ಣಗೊಂಡಿತು. ಈ ಯುದ್ಧನೌಕೆ ನಿರ್ಮಾಣಕ್ಕೆ ಬರೋಬ್ಬರಿ 23,000 ಕೋಟಿ ರೂಪಾಯಿ ವೆಚ್ಚವಾಗಿದೆ.
ವಿಮಾನ ವಾಹಕ ಯುದ್ಧ ನೌಕೆ ನಿರ್ಮಾಮ ಮಾಡೋ ಮೂಲಕ ಈ ಸಾಮರ್ಥ್ಯ ಹೊಂದಿದೆ ಕೆಲವೇ ಕೆಲವು ದೇಶಗಳ ಸಾಲಿಗೆ ಭಾರತ ಸೇರಿಕೊಂಡಿದೆ.