ಫಿಜಿ, ಪಪುವಾ ನ್ಯೂ ಗಿನಿ ದೇಶಗಳ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿ ಪಡೆದ ಪ್ರಧಾನಿ ಮೋದಿ
ಪ್ರಧಾನಿ ಮೋದಿ ಅವರ ಜಾಗತಿಕ ನಾಯಕತ್ವಕ್ಕೆ ಫಿಜಿ ಹಾಗೂ ಪಪುವಾ ನ್ಯೂ ಗಿನಿ ದೇಶಗಳು ತಮ್ಮ ಅತ್ಯುನ್ನತ ಗೌರವ ನೀಡಿದೆ.
ನವದೆಹಲಿ (ಮೇ 22, 2023): ಪ್ರಧಾನಿ ನರೇಂದ್ರ ಮೋದಿ ಅವರಿಗೆ ಫಿಜಿ ಹಾಗೂ ಪಪುವಾ ನ್ಯೂ ಗಿನಿ ದೇಶದ ಅತ್ಯುನ್ನತ ಗೌರವವನ್ನು ನೀಡಲಾಗಿದೆ. ಪ್ರಧಾನಿ ಮೋದಿ ಅವರ ಜಾಗತಿಕ ನಾಯಕತ್ವಕ್ಕೆ ಫಿಜಿ ದೇಶ ಈ ಗೌರವ ನೀಡಿದೆ. ಈ ಹಿಂದೆಯೂ ಅನೇಕ ದೇಶಗಳು ಪ್ರಧಾನಿ ಮೋದಿಗೆ ಸಾಕಷ್ಟು ಗೌರವ ಹಾಗೂ ಪ್ರಶಸ್ತಿ ಪ್ರದಾನ ಮಾಡಿದೆ. ಜಾಗತಿಕ ನಾಯಕತ್ವಕ್ಕಾಗಿ ಫಿಜಿಯ ಸಹವರ್ತಿ ಸಿತಿವೇನಿ ರಬುಕಾ ಅವರು "ದಿ ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಫಿಜಿ" ಪ್ರಶಸ್ತಿಯನ್ನು ನೀಡಲಾಗಿದೆ. ಇದು ಫಿಜಿಯೇತರರಿಗೆ ದೊರೆತ ಅಪರೂಪದ ಗೌರವ ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ.
ಈ ಬಗ್ಗೆ ಪ್ರಧಾನಿ ಕಾರ್ಯಾಲಯ ಟ್ವೀಟ್ ಮಾಡಿದ್ದು "ಭಾರತಕ್ಕೆ ದೊಡ್ಡ ಗೌರವ. ಪ್ರಧಾನಿ ಮೋದಿಯವರಿಗೆ ಫಿಜಿಯ ಪ್ರಧಾನ ಮಂತ್ರಿ, ಫಿಜಿಯ ಅತ್ಯುನ್ನತ ಗೌರವವನ್ನು ಪ್ರದಾನ ಮಾಡಿದ್ದಾರೆ. ಅವರ ಜಾಗತಿಕ ನಾಯಕತ್ವವನ್ನು ಗುರುತಿಸಿ ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಫಿಜಿ ಪ್ರಶಸ್ತಿ ನೀಡಲಾಗಿದೆ’’ ಎಂದು ಮಾಹಿತಿ ನೀಡಿದೆ.
ಇದನ್ನು ಓದಿ: ನಿಮ್ಮ ಬಳಿ ಆಟೋಗ್ರಾಫ್ ತಗೋಬೇಕು: ಪ್ರಧಾನಿ ಮೋದಿ ಬಳಿ ದುಂಬಾಲು ಬಿದ್ದ ವಿಶ್ವದ ದೊಡ್ಡಣ್ಣ ಜೋ ಬೈಡೆನ್!
ಅಲ್ಲದೆ, ಉಭಯ ದೇಶಗಳ ನಡುವಿನ ವಿಶೇಷ ಮತ್ತು ನಿರಂತರ ಬಾಂಧವ್ಯದಲ್ಲಿ ಪ್ರಮುಖ ಪಾತ್ರ ವಹಿಸಿರುವ ಭಾರತದ ಜನರಿಗೆ ಮತ್ತು ಫಿಜಿ-ಭಾರತೀಯ ಸಮುದಾಯದ ಪೀಳಿಗೆಗೆ ಪ್ರಧಾನಿ ಮೋದಿ ಅವರು ಈ ಅತ್ಯುನ್ನತ ಗೌರವವನ್ನು ಸಮರ್ಪಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಈ ಬಗ್ಗೆ ಟ್ವೀಟ್ ಮಾಡಿದೆ.
ಪಪುವಾ ನ್ಯೂಗಿನಿಯಾದಲ್ಲಿ ನಡೆದ ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರದ ವೇದಿಕೆ (ಎಫ್‌ಐಪಿಐಸಿ) ಶೃಂಗಸಭೆಯ ಸಂದರ್ಭದಲ್ಲಿ ಸಹ ಪ್ರಧಾನಿ ಮೋದಿ ಅವರು ಫಿಜಿ ಪ್ರಧಾನ ಮಂತ್ರಿ ರಬುಕಾ ಅವರನ್ನು ಭೇಟಿ ಮಾಡಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ಮೋದಿ, ಫಿಜಿಯ ಪ್ರಧಾನಮಂತ್ರಿ @slrabuka ಅವರನ್ನು ಭೇಟಿ ಮಾಡಲು ಸಂತೋಷವಾಗಿದೆ. ನಾವು ವಿವಿಧ ವಿಷಯಗಳ ಕುರಿತು ಉತ್ತಮ ಸಂವಾದ ನಡೆಸಿದ್ದೇವೆ. ಭಾರತ ಮತ್ತು ಫಿಜಿ ನಡುವಿನ ಸಂಬಂಧಗಳು ಸಮಯದ ಪರೀಕ್ಷೆಯಾಗಿ ನಿಂತಿವೆ. ಮುಂಬರುವ ವರ್ಷಗಳಲ್ಲಿ ಅದನ್ನು ಮತ್ತಷ್ಟು ಗಟ್ಟಿಗೊಳಿಸಲು ನಾವು ಒಟ್ಟಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ" ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.
ಇದನ್ನೂ ಓದಿ: ಕ್ವಾಡ್ ಶೃಂಗಸಭೆ ರದ್ದಾದ್ರೂ ಆಸ್ಪ್ರೇಲಿಯಾಗೆ ಪ್ರಧಾನಿ ಮೋದಿ ಭೇಟಿ; ಜೋ ಬೈಡೆನ್ ಭೇಟಿಯಾಗ್ತಾರಾ ಮೋದಿ?
ಪಪುವಾ ನ್ಯೂಗಿನಿಯಿಂದ್ಲೂ ಗೌರವ
ಇನ್ನೊಂದೆಡೆ, ಫಿಜಿ ತಮ್ಮ ದೇಶದ ಅತ್ಯುನ್ನತ ಗೌರವವನ್ನು ಪ್ರಧಾನಿ ಮೋದಿಗೆ ನೀಡಿದ ಬೆನ್ನಲ್ಲೇ ಪಪುವಾ ನ್ಯೂಗಿನಿ ಸಹ ತಮ್ಮ ಅತ್ಯುನ್ನತ ಪ್ರಶಸ್ತಿಯನ್ನು ಪ್ರಧಾನಿ ಮೋದಿಯವರಿಗೆ ನೀಡಿದೆ. ಈ ಹಿನ್ನೆಲೆ ಭಾರತಕ್ಕೆ ಮತ್ತೊಂದು ಅಭೂತಪೂರ್ವ ಗೌರವ ದೊರೆತಿದೆ.
ಪೆಸಿಫಿಕ್ ದ್ವೀಪ ರಾಷ್ಟ್ರಗಳ ಏಕತೆಯ ಕಾರಣಕ್ಕಾಗಿ ಮತ್ತು Global South Cause ಅನ್ನು ಮುನ್ನಡೆಸಿದ್ದಕ್ಕಾಗಿ ಪಪುವಾ ನ್ಯೂಗಿನಿಯು ಪ್ರಧಾನಿ ಮೋದಿಯವರಿಗೆ ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಲೋಗೋಹುವನ್ನು ನೀಡಿದೆ. ಪಪುವಾ ನ್ಯೂ ಗಿನಿಯ ದೇಶದವರಲ್ಲದ ಕೆಲವರಿಗೆ ಮಾತ್ರ ಈ ಪ್ರಶಸ್ತಿಯು ಸಿಕ್ಕಿದೆ. ಈ ಹಿಂದೆ ಬಿಲ್ ಕ್ಲಿಂಟನ್ ಅವರಿಗೆ ಈ ಗೌರವ ದೊರಕಿತ್ತು. ಫಿಜಿ ಕೂಡ ತಮ್ಮ ಅತ್ಯುನ್ನತ ಪ್ರಶಸ್ತಿಯನ್ನು ಪ್ರಧಾನಿ ಮೋದಿಯವರಿಗೆ ನೀಡಿದ ಕೆಲ ಸಮಯದಲ್ಲೇ ಪಪುವಾ ನ್ಯೂ ಗಿನಿ ಸಹ ಈ ಗೌರವ ನೀಡಿದೆ.
ಇದನ್ನೂ ಓದಿ: ಮೇ 19ರಿಂದ 6 ದಿನ ಮೋದಿ ವಿದೇಶ ಪ್ರವಾಸ: 71 ಸಾವಿರ ಜನರಿಗೆ ಉದ್ಯೋಗ ಪತ್ರ ವಿತರಣೆ
ಪ್ರಧಾನಿ ಮೋದಿಯವರಿಗೆ ಈಗಾಗಲೇ ಹಲವಾರು ರಾಷ್ಟ್ರಗಳು ತನ್ನ ಅತ್ಯುನ್ನತ ನಾಗರಿಕ ಗೌರವವನ್ನು ನೀಡಿ ಗೌರವಿಸಿವೆ. ಈ ಮನ್ನಣೆಗಳು ಪ್ರಧಾನಿ ಮೋದಿಯವರ ನಾಯಕತ್ವ ಮತ್ತು ದೂರದೃಷ್ಟಿಯ ಪ್ರತಿಬಿಂಬವಾಗಿದ್ದು, ಜಾಗತಿಕ ವೇದಿಕೆಯಲ್ಲಿ ಭಾರತದ ಹೊರಹೊಮ್ಮುವಿಕೆಯನ್ನು ಬಲಪಡಿಸಿದೆ. ಇದು ಪ್ರಪಂಚದಾದ್ಯಂತದ ದೇಶಗಳೊಂದಿಗೆ ಭಾರತದ ಬೆಳೆಯುತ್ತಿರುವ ಬಾಂಧವ್ಯವನ್ನು ಪ್ರತಿಬಿಂಬಿಸುತ್ತದೆ.