* ಹೆಚ್ಚು ಕೇಸು, ಕಡಿಮೆ ಲಸಿಕೆ ನೀಡಿದ ರಾಜ್ಯಗಳಿಗೆ ಕೇಂದ್ರ ತಂಡ* ಎಚ್ಚರ ತಪ್ಪಬೇಡಿ, ರಾಜ್ಯಗಳಿಗೆ ಸಕಲ ನೆರವಿಗೆ ಸಿದ್ಧ: ಮೋದಿ

ನವದೆಹಲಿ(ಡಿ.24): ದೇಶಾದ್ಯಂತ ದಿನೇ ದಿನೇ ಒಮಿಕ್ರೋನ್‌ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಹೆಚ್ಚು ಜಾಗರೂಕ ಮತ್ತು ಎಚ್ಚರಿಕೆಯಿಂದ ಇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಅಲ್ಲದೆ ಹೊಸ ವೈರಸ್‌ ನಿರ್ವಹಣೆ ನಿಟ್ಟಿನಲ್ಲಿ ರಾಜ್ಯಗಳಿಗೆ ಎಲ್ಲಾ ರೀತಿಯ ನೆರವು ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಭರವಸೆ ನೀಡಿದ್ದಾರೆ.

ಗುರುವಾರ ಇಲ್ಲಿ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು, ತಜ್ಞರ ಜೊತೆ ಮಹತ್ವದ ಕೋವಿಡ್‌ ಸಭೆ ನಡೆಸಿದ ಪ್ರಧಾನಿ ಮೋದಿ, ದೇಶದಲ್ಲಿ ಕೋವಿಡ್‌ ಪರಿಸ್ಥಿತಿಯ ಪರಾಮರ್ಶೆ ನಡೆಸಿದರು. ಈ ವೇಳೆ ತಜ್ಞರು, ದೇಶದಲ್ಲಿ ಒಟ್ಟಾರೆ ಕೋವಿಡ್‌ ಪ್ರಕರಣಗಳ ಸಂಖ್ಯೆ, ಹೊಸದಾಗಿ ಭೀತಿ ಮೂಡಿಸಿರುವ ಒಮಿಕ್ರೋನ್‌ ವೈರಸ್‌ನಿಂದಾಗಿ ಸೋಂಕಿತರಾದವರ ಸಂಖ್ಯೆ 300 ದಾಟಿರುವ ಬಗ್ಗೆ, ಸೋಂಕು ವ್ಯಾಪಿಸದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ‘ಹೊಸ ರೂಪಾಂತರಿ ಒಮಿಕ್ರೋನ್‌ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ನಾವು ಹಿಂದಿಗಿಂತಲೂ ಹೆಚ್ಚು ಜಾಗರೂಕ ಮತ್ತು ಎಚ್ಚರಿಕೆಯಿಂದ ಇರಬೇಕು. ಸೋಂಕಿತರ ಸಂಪರ್ಕಕ್ಕೆ ಬಂದವರ ತ್ವರಿತ ಪತ್ತೆ, ಕೋವಿಡ್‌ ಪರೀಕ್ಷೆ ಪ್ರಮಾಣ ಹೆಚ್ಚಳ ಮತ್ತು ಲಸಿಕೆ ನೀಡಿಕೆ ಹೆಚ್ಚಳಕ್ಕೆ ಆದ್ಯತೆ ನೀಡಬೇಕು. ಎಲ್ಲಾ ಬೆಳವಣಿಗೆಗಳ ಬಗ್ಗೆ ಕೇಂದ್ರ ಸರ್ಕಾರ ತೀವ್ರ ನಿಗಾ ಇರಿಸಿದೆ. ಪರಿಸ್ಥಿತಿ ನಿರ್ವಹಣೆಗೆ ಅಗತ್ಯವಾದ ಎಲ್ಲಾ ಕ್ರಮಗಳನ್ನೂ ಕೈಗೊಳ್ಳುತ್ತಿದೆ. ಕೋವಿಡ್‌ ವಿರುದ್ಧದ ಈ ಹೋರಾಟದಲ್ಲಿ ಸಂಘಟಿತ ಹೋರಾಟ ಈ ಕ್ಷಣದ ಅಗತ್ಯ. ಹೀಗಾಗಿ ಲಸಿಕೆ ವಿತರಣೆ ಕಡಿಮೆ ಇರುವ, ಕೋವಿಡ್‌ ಪ್ರಕರಣ ಹೆಚ್ಚುತ್ತಿರುವ ಮತ್ತು ಆರೋಗ್ಯ ಮೂಲಸೌಕರ್ಯದ ಕೊರತೆ ಎದುರಿಸುತ್ತಿರುವ ರಾಜ್ಯಗಳಿಗೆ ನೆರವು ನೀಡಲು ಕೇಂದ್ರ ಸರ್ಕಾರ ತಜ್ಞರ ತಂಡವನ್ನು ರವಾನಿಸಲಿದೆ’ ಎಂದು ಭರವಸೆ ನೀಡಿದರು.

ಇದೇ ವೇಳೆ, ಕೋವಿಡ್‌ ವಿರುದ್ಧದ ನಮ್ಮ ಹೋರಾಟ ಇನ್ನೂ ಮುಗಿದಿಲ್ಲ ಎಂದು ಎಚ್ಚರಿಸಿರುವ ಪ್ರಧಾನಿ ಮೋದಿ, ಕೋವಿಡ್‌ನಿಂದ ರಕ್ಷಣೆ ಇರುವ ಮಾರ್ಗಸೂಚಿ ಪಾಲಿಸುವುದು ಇಂದಿಗೂ ಅತ್ಯಂತ ಮಹತ್ವದ್ದಾಗಿದೆ. ಅದೇ ರೀತಿ ರಾಜ್ಯ ಸರ್ಕಾರಗಳು ಲಸಿಕಾಕರಣವನ್ನು ತೀವ್ರಗೊಳಿಸಬೇಕು, ಎಲ್ಲಾ ಅರ್ಹರೂ ಎರಡೂ ಡೋಸ್‌ ಲಸಿಕೆ ಪಡೆದಿರುವುದನ್ನು ಖಾತರಿಪಡಿಸಿಕೊಳ್ಳಬೇಕು, ಆಕ್ಸಿಜನ್‌ ಸರಬರಾಜು ಉಪಕರಣಗಳು ಜೋಡನೆಯಾಗಿ ಕಾರ್ಯನಿರ್ವಹಣೆಯ ಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.