* ಉದ್ಧವ್‌ ಠಾಕ್ರೆ ಸರ್ಕಾರ ಪತನಗೊಂಡ ಬಳಿಕ ಶಿಂಧೆ ಸಿಎಂ* ಮೋದಿ 2 ಬಾರಿ ಕರೆ ಮಾಡಿದ ಮೇಲೆ ಡಿಸಿಎಂ ಆಗಲು ಒಪ್ಪಿಗೆ* ಸರ್ಕಾರದಲ್ಲಿ ಭಾಗಿಯಾಗದ ನಿರ್ಧಾರ ಬಿಜೆಪಿಯಲ್ಲಿ ಇನ್ನಾರಿಗೂ ಗೊತ್ತಿರಲಿಲ್ಲ

ನವದೆಹಲಿ(ಜು.03): ಉದ್ಧವ್‌ ಠಾಕ್ರೆ ಸರ್ಕಾರ ಪತನಗೊಂಡ ನಂತರ ಮಹಾರಾಷ್ಟ್ರದಲ್ಲಿ ಶಿವಸೇನೆಯ ಬಂಡಾಯ ನಾಯಕ ಏಕನಾಥ್‌ ಶಿಂಧೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಪ್ರಕಟಿಸಿದ ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರು ಪ್ರಧಾನಿ ನರೇಂದ್ರ ಮೋದಿ ಎರಡೆರಡು ಬಾರಿ ಕರೆ ಮಾಡಿದ ಮೇಲೆ ಉಪ ಮುಖ್ಯಮಂತ್ರಿಯಾಗಲು ಒಪ್ಪಿದರು ಎಂದು ಮೂಲಗಳು ಹೇಳಿವೆ.

ಉದ್ಧವ್‌ ರಾಜೀನಾಮೆ ನೀಡಿದ ನಂತರ ಫಡ್ನವೀಸ್‌ ಅವರೇ ಮುಖ್ಯಮಂತ್ರಿಯಾಗುತ್ತಾರೆಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಅವರೇ ಅಚ್ಚರಿಯೆಂಬಂತೆ ಶಿಂಧೆ ಮುಖ್ಯಮಂತ್ರಿಯಾಗುತ್ತಾರೆಂದೂ, ತಾವು ಸರ್ಕಾರದಲ್ಲಿ ಭಾಗಿಯಾಗುವುದಿಲ್ಲವೆಂದೂ ಪ್ರಕಟಿಸಿದ್ದರು. ನಂತರ ಸ್ವತಃ ಪ್ರಧಾನಿ ಮೋದಿ ಅವರು ಫಡ್ನವೀಸ್‌ಗೆ ಎರಡೆರಡು ಬಾರಿ ಕರೆ ಮಾಡಿ ಉಪ ಮುಖ್ಯಮಂತ್ರಿಯಾಗಲು ಸೂಚಿಸಿದರು. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಗೃಹ ಸಚಿವ ಅಮಿತ್‌ ಶಾ ಕೂಡ ಟ್ವೀಟರ್‌ನಲ್ಲಿ ಫಡ್ನವೀಸ್‌ಗೆ ಸರ್ಕಾರದ ಭಾಗವಾಗಲು ಮನವಿ ಮಾಡಿದರು. ನಂತರವಷ್ಟೇ ಅವರು ಉಪ ಮುಖ್ಯಮಂತ್ರಿಯಾಗಲು ಒಪ್ಪಿದರು ಎಂದು ಮೂಲಗಳು ತಿಳಿಸಿವೆ.

‘ಇನ್ನು, ಮಹಾರಾಷ್ಟ್ರದ ಎಲ್ಲಾ ರಾಜಕೀಯ ಬೆಳವಣಿಗೆಗಳೂ ಫಡ್ನವೀಸ್‌ ಅವರಿಗೆ ತಿಳಿದಿತ್ತು. ಅವರಿಲ್ಲದೆ ಉದ್ಧವ್‌ ಸರ್ಕಾರ ಪತನಗೊಳ್ಳುತ್ತಲೇ ಇರಲಿಲ್ಲ. ತಾವು ಸರ್ಕಾರದಲ್ಲಿ ಭಾಗಿಯಾಗುವುದಿಲ್ಲ ಎಂದು ಅವರು ಪ್ರಕಟಿಸುವವರೆಗೂ ಆ ನಿರ್ಧಾರ ಇನ್ನಾರಿಗೂ ತಿಳಿದಿರಲಿಲ್ಲ. ಹಾಗೆ ಪ್ರಕಟಿಸುವಂತೆ ಅವರಿಗೆ ಯಾರೂ ಸೂಚನೆ ನೀಡಿರಲಿಲ್ಲ’ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

‘ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಗಮನ ಹರಿಸುವುದಕ್ಕೆಂದೇ ಅವರು ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಗೆ ತೆರಳಿಲ್ಲ’ ಎಂದು ತಿಳಿದುಬಂದಿದೆ.