ಗೋಡ್ಸೆ, ಮೋದಿ ಸಿದ್ಧಾಂತ ಒಂದೇ: ರಾಹುಲ್ ವಾಗ್ದಾಳಿ!
ಮೋದಿ ಗೋಡ್ಸೆ ಸಿದ್ಧಾಂತದ ಪ್ರತಿಪಾದಕ ಎಂದ ರಾಹುಲ್ ಗಾಂಧಿ| 'ಪ್ರಧಾನಿ ಮೋದಿ ಗಾಂಧಿಯನ್ನು ಕೊಂದ ನಾಥೂರಾಮ್ ಗೋಡ್ಸೆ ಅನುಯಾಯಿ'| 'ಗೋಡ್ಸೆಯನ್ನು ನಂಬುವುದಾಗಿ ಹೇಳುವ ಧೈರ್ಯ ಪ್ರಧಾನಿ ಮೋದಿಗೆ ಇಲ್ಲ'| 'ನಾನು ಭಾರತೀಯನೋ ಅಥವಾ ಅಲ್ಲವೋ ಎಂದು ನಿರ್ಧರಿಸಲು ಮೋದಿ ಯಾರು'?| 'ಎನ್‌ಆರ್‌ಸಿ ಹಾಗೂ ಸಿಎಎ ಜಾರಿಯಿಂದ ಜನರಿಗೆ ಉದ್ಯೋಗ ಸಿಗುವುದಿಲ್ಲ'|
ವಯನಾಡ್(ಜ.30): ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಕೊಂದ ನಾಥೂರಾಮ್ ಗೋಡ್ಸೆ ಮತ್ತು ಪ್ರಧಾನಿ ಮೋದಿ ಇಬ್ಬರ ಸಿದ್ಧಾಂತ ಒಂದೇ ಆಗಿದ್ದು, ಇದನ್ನು ಬಹಿರಂಗವಾಗಿ ಹೇಳುವ ಧೈರ್ಯ ಪ್ರಧಾನಿಗೆ ಇಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಕೇರಳದ ವಯನಾಡ್‌ನಲ್ಲಿ ನಡೆದ ಸಿಎಎ ವಿರೋಧಿ ರ‍್ಯಾಲಿಯಲ್ಲಿ ಮಾತನಾಡಿರುವ ರಾಹುಲ್, ತಾವು ಗೋಡ್ಸೆಯನ್ನು ನಂಬುವುದಾಗಿ ಹೇಳುವ ಧೈರ್ಯ ಪ್ರಧಾನಿ ಮೋದಿಗೆ ಇಲ್ಲ ಎಂದು ಲೇವಡಿ ಮಾಡಿದರು.
"
ಗಾಂಧಿ ಅವರನ್ನು ಕೊಂದ ಗೋಡ್ಸೆ ನಂಬುತ್ತಿದ್ದ ಸಿದ್ಧಾಂತವನ್ನೇ ಪ್ರಧಾನಿ ಮೋದಿ ಪಾಲಿಸುತ್ತಿದ್ದು, ಭಾರತವನ್ನು ಅಸಹಿಷ್ಣು ರಾಷ್ಟ್ರವನ್ನಾಗಿ ಪರಿವರ್ತಿಸಲು ಹೊರಟಿದ್ದಾರೆ ಎಂದು ಈ ವೇಳೆ ರಾಹುಲ್ ಕಿಡಿಕಾರಿದರು.
ಸಿಎಎ ಜಾರಿ ಮೂಲಕ ಭಾರತೀಯರು ತಾವು ಭಾರತೀಯರೆಂದು ಸಾಬೀತುಪಡಿಸುವಂತೆ ಮಾಡಲಾಗುತ್ತಿದೆ. ನಾನು ಭಾರತೀಯನೋ ಅಥವಾ ಅಲ್ಲವೋ ಎಂದು ನಿರ್ಧರಿಸಲು ನರೇಂದ್ರ ಮೋದಿ ಯಾರು? ಎಂದು ರಾಹುಲ್ ಹರಿಹಾಯ್ದರು.
ಶಹೀದ್ ದಿವಸ್: ಗಾಂಧಿ ಸಮಾಧಿಗೆ ಪ್ರಧಾನಿ ಮೋದಿ ನಮನ
ಜನತೆ ನಿರುದ್ಯೋಗ ಪ್ರಶ್ನಿಸಿದರೆ ಗಮನವನ್ನು ಬೇರೆಡೆ ಸೆಳೆಯಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತದೆ. ಎನ್‌ಆರ್‌ಸಿ ಹಾಗೂ ಸಿಎಎ ಜಾರಿಯಿಂದ ಜನರಿಗೆ ಉದ್ಯೋಗ ಸಿಗುವುದಿಲ್ಲ. ಕಾಶ್ಮೀರ ಮತ್ತು ಅಸ್ಸಾಂ ರಾಜ್ಯಗಳನ್ನು ಸುಡುವುದರಿಂದ ಉದ್ಯೋಗ ಸಿಗುವುದಿಲ್ಲ ಎಂದು ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದರು.