ಮೋದಿ ಪ್ರತಿಕೃತಿ ಸುಡಿ, ಸಾರ್ವಜನಿಕ ಆಸ್ತಿಯನ್ನಲ್ಲ: ಪ್ರಧಾನಿ!
ದೆಹಲಿಯಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಬಿಜೆಪಿ ಬೃಹತ್ ಸಮಾವೇಶ| ಪೌರತ್ವ ಕಾಯ್ದೆ ವಿರೋಧಿ ಹೋರಾಟಕ್ಕೆ ಪ್ರಧಾನಿ ಮೋದಿ ತಿರುಗೇಟು| ಪೌರತ್ವ ಕಾಯ್ದೆಯಿಂದ ಜನತೆಯ ಉಜ್ವಲ ಭವಿಷ್ಯಕ್ಕೆ ಮುನ್ನುಡಿ| ದೆಹಲಿಯಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ| ‘ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವ ವಿಪಕ್ಷಗಳಿಂದ ಕೀಳು ರಾಜಕೀಯ’|
ನವದೆಹಲಿ(ಡಿ.22): ಪೌರತ್ವ ತಿದ್ದುಪಡಿ ಕಾಯ್ದೆಯನ್ನು ದೇಶದ ಜನತೆಯ ಉಜ್ವಲ ಭವಿಷ್ಯಕ್ಕಾಗಿ ಜಾರಿಗೆ ತರಲಾಗಿದೆ ಎಂದು ಪ್ರಧಾನಿ ಮೋದಿ ಸಮರ್ಥನೆ ನೀಡಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಸಮಾಜದ ದೀನದಲಿತರು,ಬಡವರು ಮತ್ತು ಶೋಷಣೆಗೊಳಗಾದವರ ಉದ್ಧಾರವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಇಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬಿಜೆಪಿ ಆಯೋಜಿಸಿದ್ದ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ವಿಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ ಅಲ್ಪಸಂಖ್ಯಾತರ ದಾರಿ ತಪ್ಪಿಸುತ್ತಿವೆ ಎಂದು ಹರಿಹಾಯ್ದರು.
ಪೌರತ್ವ ಕಾಯ್ದೆ ಪರ ಜನಜಾಗೃತಿ: ತುಂಬಿ ತುಳುಕಿದ ಟೌನ್ ಹಾಲ್
ಕಳೆದ ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅನುಮೋದಿಸಲಾಗಿದೆ. ಸಂಸತ್ತಿನ ಎರಡೂ ಸದನಗಳಲ್ಲಿ ಅನುಮೋದನೆಯಾಗಿ ಕಾಯ್ದೆಯಾಗಿ ಜಾರಿಗೆ ಬಂದಿದ್ದು, ಜನರ ತೀರ್ಪನ್ನು ಮತ್ತು ಸಂಸತ್ತನ್ನು ಎಲ್ಲರೂ ಗೌರವಿಸಬೇಕು ಎಂದು ಮೋದಿ ಹೇಳಿದರು.
ಕೇಂದ್ರ ಸರ್ಕಾರದ ಯೋಜನೆಗಳನ್ನು ಜಾರಿಗೆ ತರುವಾಗ ಮತ್ತು ಸೌಲಭ್ಯವನ್ನು ಹಂಚುವಾಗ ಜನರಲ್ಲಿ ಜಾತಿ, ಧರ್ಮ ಕೇಳಿದ್ದೇವೆಯೇ? ಎಲ್ಲರ ವಿಕಾಸ ಎಂಬ ಮಂತ್ರದಲ್ಲಿ ನಂಬಿಕೆ ಇಟ್ಟವರು ನಾವು. ಪ್ರಧಾನಿಯಾದ ನಂತರ ನಾನು ಮಾಡಿರುವ ಕೆಲಸಗಳನ್ನು ಪರೀಕ್ಷಿಸಿ ಎಂದು ಪ್ರತಿಪಕ್ಷದವರಿಗೆ ಮೋದಿ ಸವಾಲು ಹಾಕಿದರು.
ನಿಮ್ಮ ಲಾಭಕ್ಕಾಗಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬೇಡಿ ಎಂದು ವಿಪಕ್ಷಗಳಿಗೆ ಪ್ರಧಾನಿ ಮೋದಿ ಮನವಿ ಮಾಡಿದರು. ಅತ್ಯುನ್ನತ ಅಧಿಕಾರದಲ್ಲಿರುವವರು ನಕಲಿ ವಿಡಿಯೊಗಳನ್ನು ಹಂಚಿ ಜನರನ್ನು ಗಲಭೆ ಎಬ್ಬಿಸುವಂತೆ ಪ್ರಚೋದಿಸುತ್ತಿರುವುದು ಖೇದಕರ ಎಂದು ಮೋದಿ ನುಡಿದರು.
ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತೀಯ ನಾಗರಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಭರವಸೆ ನೀಡಿದ ಪ್ರಧಾನಿ ಮೋದಿ, ನನ್ನ ಮೇಲೆ ದ್ವೇಷವಿದ್ದರೆ ವಿರೋಧಪಕ್ಷಗಳು ನನ್ನ ಪ್ರತಿಕೃತಿ ದಹಿಸಲಿ, ಆದರೆ ಸಾರ್ವಜನಿಕರ ಆಸ್ತಿ ಪಾಸ್ತಿ ಮೇಲೆ ದಾಳಿ ಮಾಡುವುದು ಬೇಡ ಎಂದು ಮನವಿ ಮಾಡಿದರು.
ಎದೆ ಬಗೆದರೆ ಎರಡಕ್ಷರ ಇಲ್ಲದವರಿಂದ ಪ್ರತಿಭಟನೆ : ಪೌರತ್ವದ ಕಿಚ್ಚಿಗೆ ತೇಜಸ್ವಿ ತುಪ್ಪ!
ಅಸ್ಸಾಂನಲ್ಲಿ ಬಾಂಗ್ಲಾ ಅಕ್ರಮ ವಲಸಿಗರಿಗಾಗಿ ಬಂಧನ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಸುಳ್ಳು ಪ್ರಚಾರ ನಡೆಸುತ್ತಿದೆ ಎಂದು ಇದೇ ವೇಳೆ ಪ್ರಧಾನಿ ಮೋದಿ ಹರಿಹಾಯ್ದರು.
ಈ ವೇಳೆ ದೆಹಲಿ ಸರ್ಕಾರದ ಮೇಲೂ ಹರಿಹಾಯ್ದ ಪ್ರಧಾನಿ ಮೋದಿ, ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ರಾಜ್ಯ ಸರ್ಕಾರ ಸಾಥ್ ನೀಡುತ್ತಿಲ್ಲ ಎಂದು ಹರಿಹಾಯ್ದರು.
ಡಿಸೆಂಬರ್ 22ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ