ಅಂಫಾನ್’ ಚಂಡಮಾರುತಕ್ಕೆ ಪಶ್ಚಿಮ ಬಂಗಾಳ ಹಾಗೂ ಒಡಿಶಾ ರಾಜ್ಯಗಳು ತತ್ತರಿಸಿ ಹೋಗಿವೆ. ಇದರ ಬೆನ್ನಲ್ಲೇ ಪ್ರಧಾನಿ ಎರಡು ರಾಜ್ಯಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ತುರ್ತಾಗಿ ಪರಿಹಾರ ಕ್ರಮಗಳನ್ನು ಕೈಗೆತ್ತಿಕೊಳ್ಳಲು 1500 ಕೋಟಿ ರುಪಾಯಿ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಕೋಲ್ಕತಾ/ಭುವನೇಶ್ವರ(ಮೇ.23): ‘ಅಂಫಾನ್’ ಚಂಡಮಾರುತದಿಂದ ತತ್ತರಿಸಿರುವ ಪಶ್ಚಿಮ ಬಂಗಾಳ ಹಾಗೂ ಒಡಿಶಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿಯ ಪರಾಮರ್ಶೆ ನಡೆಸಿದರು. ಇದೇ ವೇಳೆ, ತುರ್ತಾಗಿ ಪರಿಹಾರ ಕ್ರಮಗಳನ್ನು ಕೈಗೆತ್ತಿಕೊಳ್ಳಲು ಬಂಗಾಳಕ್ಕೆ 1000 ಕೋಟಿ ಹಾಗೂ ಒಡಿಶಾಕ್ಕೆ 500 ಕೋಟಿ ರು. ಮುಂಗಡ ಹಣಕಾಸು ನೆರವನ್ನು ಪ್ರಕಟಿಸಿದರು.
190 ಕಿ.ಮೀ. ವೇಗದಲ್ಲಿ ಬಂದು ಅಪ್ಪಳಿಸಿದ ಚಂಡಮಾರುತದಿಂದ ಬಲಿಯಾದ 80ಕ್ಕೂ ಹೆಚ್ಚು ಜನರ ಕುಟುಂಬ ವರ್ಗಗಳಿಗೆ 2 ಲಕ್ಷ ರು. ಪರಿಹಾರ ಹಾಗೂ ಗಾಯಾಳುಗಳಿಗೆ 50 ಸಾವಿರ ರು. ನೆರವನ್ನು ಘೋಷಿಸಿದರು. ಚಂಡಮಾರುತ ಎದುರಿಸಲು ಮುನ್ನೆಚ್ಚರಿಕೆಯಾಗಿ ಹಲವು ಕ್ರಮಗಳನ್ನು ಕೈಗೊಂಡ ಬಂಗಾಳ ಹಾಗೂ ಒಡಿಶಾ ರಾಜ್ಯ ಸರ್ಕಾರಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ವೈಮಾನಿಕ ಸಮೀಕ್ಷೆ:
ಚಂಡಮಾರುತದಿಂದ ಅತಿ ಹೆಚ್ಚು ಹಾನಿಗೆ ಒಳಗಾಗಿರುವ ಪಶ್ಚಿಮ ಬಂಗಾಳಕ್ಕೆ ಮೊದಲು ಆಗಮಿಸಿದ ಮೋದಿ ಅವರು ಚಂಡಮಾರುತ ಪ್ರದೇಶಗಳಲ್ಲಿ ರಾಜ್ಯಪಾಲ ಜಗದೀಪ್ ಧನಖಡ್ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಡಗೂಡಿ ವೈಮಾನಿಕ ಪರಿಶೀಲನೆ ನಡೆಸಿದರು. ಕೃಷಿ, ವಿದ್ಯುತ್ ಹಾಗೂ ಇನ್ನಿತರೆ ವಲಯ ಮತ್ತು ಮನೆಗಳಿಗೆ ಆಗಿರುವ ಹಾನಿಯ ಕುರಿತು ವಿವರವಾದ ಸಮೀಕ್ಷೆ ನಡೆಸಲಾಗುತ್ತದೆ. ಇದಕ್ಕಾಗಿ ಕೇಂದ್ರ ಸರ್ಕಾರ ತಂಡವೊಂದನ್ನು ನಿಯೋಜಿಸಲಿದೆ. ಈ ಸಂಕಷ್ಟಹಾಗೂ ನಿರಾಶೆಯ ಸಮಯದಲ್ಲಿ ಇಡೀ ದೇಶವೇ ಬಂಗಾಳ ಜನರ ಜತೆ ನಿಲ್ಲುತ್ತದೆ. ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಬಂಗಾಳ ಈ ಬಿಕ್ಕಟ್ಟನ್ನು ಅತ್ಯುತ್ತಮವಾಗಿ ಎದುರಿಸುತ್ತಿದೆ. ಈ ಪ್ರತಿಕೂಲ ಸಮಯದಲ್ಲಿ ನಾವೆಲ್ಲಾ ಪಶ್ಚಿಮ ಬಂಗಾಳದ ಜತೆಗಿದ್ದೇವೆ ಎಂದು ಧೈರ್ಯ ತುಂಬಿದರು.
ನಂತರ ಒಡಿಶಾ ರಾಜ್ಯಪಾಲ ಗಣೇಶಿ ಲಾಲ್ ಹಾಗೂ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಜತೆ ಒಡಿಶಾದ ಬಾಧಿತ ಪ್ರದೇಶಗಳಲ್ಲಿ ವಿಮಾನದಲ್ಲಿ ಸರ್ವೇಕ್ಷಣೆಯನ್ನು ಪ್ರಧಾನಿ ನಡೆಸಿದರು.
