ನವದೆಹಲಿ[ಜ.14]: ‘ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರು ದೇಶದ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ದೇಶದ ಜನರಿಗೆ ಭದ್ರತೆ ನೀಡಲು ಈ ಸರ್ಕಾರದಿಂದ ಆಗದು ಎಂಬುದು ಜಗಜ್ಜಾಹೀರಾಗಿದೆ’ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಸಿಎಎ, ಎನ್‌ಆರ್‌ಸಿ ವಿರುದ್ಧ ವಿಪಕ್ಷಗಳ ಒಗ್ಗಟ್ಟು ಸಾರಲು ಕರೆದಿದ್ದ ಸಭೆಯಲ್ಲಿ ಸೋಮವಾರ ಮಾತನಾಡಿದ ಅವರು, ‘ದೇಶದಲ್ಲಿ ಕಂಡು ಕೇಳರಿಯದಷ್ಟುವಿಪ್ಲವದ ಪರಿಸ್ಥಿತಿ ಇದೆ. ಸರ್ಕಾರವು ಜನರಲ್ಲಿ ದ್ವೇಷ ಹುಟ್ಟು ಹಾಕಿ, ಜಾತಿ ಆಧಾರದಲ್ಲಿ ಜನರನ್ನು ವಿಭಜಿಸಲು ಹೊರಟಿದೆ. ದಬ್ಬಾಳಿಕೆಯ ಮೂಲಕ ಪ್ರತಿಭಟನೆಗಳನ್ನು ಹತ್ತಿಕ್ಕುತ್ತಿದೆ’ ಎಂದು ಆರೋಪಿಸಿದರು.

PK ಟ್ವೀಟ್ ಬೆನ್ನಲ್ಲೇ ಬಿಹಾರ ಸಿಎಂ ಮಹತ್ವದ ಘೋಷಣೆ: ಬಿಜೆಪಿಗೆ ಆಘಾತ!

‘ಬನಾರಸ ಹಿಂದೂ ವಿವಿ, ಅಲಿಗಢ ಮುಸ್ಲಿಂ ವಿವಿ, ಅಲಹಾಬಾದ್‌ ವಿವಿ, ಜಾಮಿಯಾ ಮಿಲಿಯಾ ವಿವಿ ಹಾಗೂ ಜವಾಹರಲಾಲ್‌ ನೆಹರು ವಿವಿ ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬಿಜೆಪಿ ಪ್ರೇರಿತ ಭಯಾನಕ ಹಿಂಸಾಚಾರ ನಡೆದಿದೆ’ ಎಂದು 20 ಪಕ್ಷಗಳ ಮುಖಂಡರು ಪಾಲ್ಗೊಂಡಿದ್ದ ಸಭೆಯಲ್ಲಿ ಆತಂಕ ವ್ಯಕ್ತಪಡಿಸಿದರು.

‘ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆಗಳಿಂದ ಜನರಲ್ಲಿ ಸರ್ಕಾರದ ವಿರುದ್ಧ ಇರುವ ಹತಾಶ ಭಾವನೆಯ ದ್ಯೋತಕ. ಈ ಹತಾಶ ಭಾವನೆ ಈಗ ಸ್ಫೋಟಗೊಳ್ಳುತ್ತಿದೆ. ದಿಲ್ಲಿ ಹಾಗೂ ಉತ್ತರಪ್ರದೇಶಗಳಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ತೋರಿದ ಪ್ರತಿಕ್ರಿಯೆ ಕ್ರೂರವಾದದ್ದು. ದೇಶದ ಜನತೆಗೆ ಈ ಸರ್ಕಾರದಿಂದ ರಕ್ಷಣೆ ನೀಡಲಾಗದು ಎಂಬುದು ಸಾಬೀತಾಗಿದೆ’ ಎಂದರು.

‘ಪ್ರಧಾನಿ ಹಾಗೂ ಗೃಹ ಸಚಿವರು ಜನರನ್ನು ಈ ಕುರಿತು ದಿಕ್ಕು ತಪ್ಪಿಸುತ್ತಿದ್ದಾರೆ. ಇದೇ ವಿಚಾರವಾಗಿ ಇಬ್ಬರೂ ಇತ್ತೀಚೆಗೆ ತದ್ವಿರುದ್ಧ ಹೇಳಿಕೆ ನೀಡಿದ್ದೇ ಇದಕ್ಕೆ ಸಾಕ್ಷಿ. ಪ್ರಚೋದನಕಾರಿ ಹೇಳಿಕೆಗಳನ್ನೂ ನೀಡುತ್ತಿದ್ದಾರೆ’ ಎಂದು ಸೋನಿಯಾ ಉದಾಹರಿಸಿದರು.

‘ಎನ್‌ಆರ್‌ಸಿ ಅಸ್ಸಾಂನಲ್ಲಿ ವಿಫಲವಾಗಿದೆ. ಅದಕ್ಕೆಂದೇ ಈಗ ದೇಶದಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಜಾರಿಗೊಳಿಸಲು ಮೋದಿ ಸರ್ಕಾರ ಮುಂದಾಗಿದೆ. ಆರ್ಥಿಕ ಕುಸಿತ, ನಿರುದ್ಯೋಗದಂತಹ ಜ್ವಲಂತ ಸಮಸ್ಯೆಗಳ ಬಗ್ಗೆ ಮೋದಿ, ಶಾ ಬಳಿ ಉತ್ತರವಿಲ್ಲ. ಅದರ ಬದಲು ಜನರ ಗಮನ ಬೇರೆಡೆ ಸೆಳೆಯಲು ಪೌರತ್ವ ಕಾಯ್ದೆ, ನಾಗರಿಕ ನೋಂದಣಿಯಂತಹ ವಿಭಜಕ ಕಾರ‍್ಯಕ್ರಮ ಜಾರಿಗೆ ತರಲಾಗುತ್ತಿದೆ’ ಎಂದು ಆರೋಪಿಸಿದರು.

ಮಾಜಿ ಪ್ರಧಾನಿ ಮನಮೋಹನ ಸಿಂಗ್‌, ಎನ್‌ಸಿಪಿಯ ಶರದ್‌ ಪವಾರ್‌, ಎಡರಂಗದ ಸೀತಾರಾಂ ಯೆಚೂರಿ ಹಾಗೂ ಡಿ.ರಾಜಾ, ಜೆಎಂಎಂನ ಹೇಮಂತ್‌ ಸೊರೇನ್‌, ಎಲ್‌ಜೆಡಿಯ ಶರದ್‌ ಯಾದವ್‌, ಆರ್‌ಎಲ್‌ಎಸ್‌ಪಿಯ ಉಪೇಂದ್ರ ಕುಶ್ವಾಹಾ, ಆರ್‌ಜೆಡಿಯ ಮನೋಜ್‌ ಝಾ, ನ್ಯಾಷನಲ್‌ ಕಾನ್ಫರೆನ್ಸ್‌ನ ಹಸ್ನೇನ್‌ ಮಸೂದಿ, ಕಾಂಗ್ರೆಸ್‌ನ ರಾಹುಲ್‌ ಗಾಂಧಿ, ಗುಲಾಂ ನಬಿ ಆಜಾದ್‌, ಅಹ್ಮದ್‌ ಪಟೇಲ್‌ ಅವರು ಸಭೆಯಲ್ಲಿದ್ದರು.

ಮೋದಿ ಸಭೆಗೆ ಹೋಗದ ದೀದಿ: ಕೋಲ್ಕತ್ತಾ ಫೋರ್ಟ್ ಟ್ರಸ್ಟ್‌ಗೆ ಶಾಮಾ ಪ್ರಸಾದ್ ಹೆಸರು!