ನಾನು ಗಂಗಾಮಾತೆಯ ದತ್ತುಪುತ್ರ: ಗಂಗೆ, ವಿಶ್ವನಾಥರೇ ನನ್ನನ್ನು ಆಶೀರ್ವದಿಸಿದ್ದಾರೆ: ಪ್ರಧಾನಿ ಮೋದಿ
ಜನರು ನನ್ನನ್ನು 3ನೇ ಬಾರಿ ಕಾಶಿ ಸಂಸದನಾಗಿ ಆಯ್ಕೆ ಮಾಡಿದ್ದಷ್ಟೇ ಅಲ್ಲ, 3ನೇ ಬಾರಿ ಪ್ರಧಾನಿ ಆಗಿಯೂ ಆಯ್ಕೆ ಮಾಡಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ವಾರಾಣಸಿ (ಜೂ.19): ‘ಗಂಗಾ ಮಾತೆಯೇ ನನ್ನನ್ನು ದತ್ತು ಪಡೆದಂತೆ ತೋರುತ್ತಿದೆ. ಈ ಲೋಕಸಭೆ ಚುನಾವಣೆಯಲ್ಲಿ ಜನರು ನೀಡಿದ ಜನಾದೇಶವು ನಿಜವಾಗಿಯೂ ಅಭೂತಪೂರ್ವವಾಗಿದೆ ಮತ್ತು ಇತಿಹಾಸ ಸೃಷ್ಟಿಸಿದೆ. ಜನರು ನನ್ನನ್ನು 3ನೇ ಬಾರಿ ಕಾಶಿ ಸಂಸದನಾಗಿ ಆಯ್ಕೆ ಮಾಡಿದ್ದಷ್ಟೇ ಅಲ್ಲ, 3ನೇ ಬಾರಿ ಪ್ರಧಾನಿ ಆಗಿಯೂ ಆಯ್ಕೆ ಮಾಡಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. 3ನೇ ಬಾರಿ ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಾರಿ ಸ್ವಕ್ಷೇತ್ರ ವಾರಾಣಸಿಗೆ ಆಗಮಿಸಿ ‘ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನ’ವನ್ನುದ್ದೇಶಿಸಿ ಮಾತನಾಡಿದ ಅವರು, ‘ವಾರಾಣಸಿಯ ಜನರು ನನ್ನನ್ನು ಮೂರನೇ ಬಾರಿಗೆ ಸಂಸದರಾಗಿ ಮಾತ್ರವಲ್ಲದೆ ಪ್ರಧಾನಿಯಾಗಿಯೂ ಆಯ್ಕೆ ಮಾಡಿದ್ದಾರೆ.
ಈ ಲೋಕಸಭಾ ಚುನಾವಣೆಯಲ್ಲಿ ಜನರು ನೀಡಿದ ಜನಾದೇಶವು ನಿಜವಾಗಿಯೂ ಅಭೂತಪೂರ್ವವಾಗಿದೆ ಮತ್ತು ಇತಿಹಾಸವನ್ನು ಸೃಷ್ಟಿಸಿದೆ’ ಎಂದು ಪ್ರಧಾನಿ ಹೇಳಿದರು. ‘ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಸತತ ಮೂರನೇ ಅವಧಿಗೆ ಸರ್ಕಾರಗಳು ಆಯ್ಕೆಯಾಗುವುದು ತೀರಾ ಅಪರೂಪ. ಆದರೆ ಭಾರತದ ಜನರು ಇದನ್ನು ಮಾಡಿದ್ದಾರೆ. 60 ವರ್ಷಗಳ ನಂತರ ಸತತ 3ನೇ ಬಾರಿ ಸರ್ಕಾರವೊಂದು ಅಧಿಕಾರಕ್ಕೆ ಬಂದಿರುವುದು ದಾಖಲೆಯಾಗಿದೆ’ ಎಂದು ಅವರು ಆನಂದತುಂದಿಲರಾಗಿ ನುಡಿದರು. ‘ಇತ್ತೀಚೆಗೆ ನಾನು ಜಿ7 ದೇಶಗಳ ಶೃಂಗಕ್ಕೆ ಹೋಗಿದ್ದೆ. ಆ ದೇಶಗಳ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಹಾಗೂ ಯುರೋಪ್ ಜನಸಂಖ್ಯೆಗೆ ಹೋಲಿಸಿದರೆ ಭಾರತದ ಮತದಾರರ ಸಂಖ್ಯೆಯೇ ಹೆಚ್ಚು.
ತಮಿಳುನಾಡು ಮಾದರಿಯಲ್ಲಿ ರಾಜ್ಯದಲ್ಲಿ ನೀಟ್ ರದ್ದು ಚಿಂತನೆ: ಡಿ.ಕೆ.ಶಿವಕುಮಾರ್ ಸುಳಿವು
ಇಂಥದ್ದರಲ್ಲಿ ನಮ್ಮ ಸರ್ಕಾರ ಸತತ 3ನೇ ಬಾರಿ ಅಧಿಕಾರಕ್ಕೆ ಬಂದಿದೆ ಎಂದರೆ ಅದು ಸಾಧನೆಯೇ ಸರಿ’ ಎಂದು ಬಣ್ಣಿಸಿದರು. ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರದಿಂದ ಪುನರಾಯ್ಕೆಯಾದ ಬಗ್ಗೆ ಉಲ್ಲೇಖಿಸಿದ ಅವರು, ‘ಬಾಬಾ ವಿಶ್ವನಾಥ, ಮಾ ಗಂಗಾ ಅವರ ಆಶೀರ್ವಾದ ಮತ್ತು ಕಾಶಿಯ ಜನರ ಅಪಾರ ಪ್ರೀತಿಯಿಂದ ನಾನು ದೇಶದ ‘ಪ್ರಧಾನ ಸೇವಕ’ ಆಗುವ ಭಾಗ್ಯವನ್ನು 3ನೇ ಬಾರಿ ಪಡೆದಿದ್ದೇನೆ. ‘ಅಬ್ ತೋ ಮಾ ಗಂಗಾ ನೆ ಭೀ ಜೈಸೆ ಮುಝೆ ಗೋದ್ ಲೇ ಲಿಯಾ ಹೈ, ಮೈನ್ ಯಹೀಂ ಕಾ ಹೋ ಗಯಾ ಹೂಂ’ (ಗಂಗಾ ಮಾತೆಯೂ ನನ್ನನ್ನು ದತ್ತು ತೆಗೆದುಕೊಂಡಿದ್ದಾಳೆ.
ನಾನೂ ವಾರಾಣಸಿಯವನೇ ಆಗಿಬಿಟ್ಟಿದ್ದೇನೆ). ಕಾಶಿಯ ಜನರು ನನ್ನನ್ನು ಸತತ ಮೂರನೇ ಬಾರಿಗೆ ತಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡುವ ಮೂಲಕ ಆಶೀರ್ವದಿಸಿದ್ದಾರೆ. ಲೋಕಸಭಾ ಚುನಾವಣೆ ಈ ಗೆಲುವು ಅಪಾರ ಆತ್ಮವಿಶ್ವಾಸವನ್ನು ನೀಡುತ್ತಿದೆ’ ಎಂದರು. ‘ನನ್ನ ಮೇಲಿನ ಜನರ ಈ ನಂಬಿಕೆಯು ಜನಸೇವೆ ಸಲ್ಲಿಸಲು ಮತ್ತು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಿರಂತರವಾಗಿ ಸ್ಫೂರ್ತಿ ನೀಡುತ್ತದೆ. ನಾನು ಹಗಲು-ರಾತ್ರಿ ಈ ರೀತಿ ಶ್ರಮಿಸುತ್ತೇನೆ ಮತ್ತು ನಿಮ್ಮ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಈಡೇರಿಸಲು ನಾನು ಎಲ್ಲ ಪ್ರಯತ್ನಗಳನ್ನು ಮಾಡುತ್ತೇನೆ’ ಎಂದು ಪ್ರಧಾನಿ ಹೇಳಿದರು.
ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಿದ್ದರೆ ದರ್ಶನ್ ಮನೆ ತೆರವು: ಡಿಕೆಶಿ
ಬಡವರಿಗೆ 3 ಕೋಟಿ ಮನೆ: ‘ನಾನು ರೈತರು, ಮಹಿಳೆಯರು, ಯುವಕರು ಮತ್ತು ಬಡವರನ್ನು ‘ವಿಕಸಿತ ಭಾರತ’ದ ಆಧಾರಸ್ತಂಭ ಎಂದು ಪರಿಗಣಿಸುತ್ತೇನೆ. 21ನೇ ಶತಮಾನದ ಭಾರತವನ್ನು ವಿಶ್ವದ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯನ್ನಾಗಿ ಮಾಡುವಲ್ಲಿ ಕೃಷಿಯು ದೊಡ್ಡ ಪಾತ್ರವನ್ನು ವಹಿಸಲಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯನ್ನು ದೇಶಾದ್ಯಂತ ವಿಸ್ತರಿಸಿರುವುದು ಮತ್ತು ಬಡವರಿಗೆ 3 ಕೋಟಿ ಮನೆಗಳನ್ನು ನಿರ್ಮಿಸಿಕೊಡುವ ಯೋಜನೆಯು ದೇಶದ ಅನೇಕ ಜನರಿಗೆ ನೆರವಾಗುತ್ತದೆ ಎಂದು ಪ್ರಧಾನಿ ನುಡಿದರು. ಸಮಾರಂಭದಲ್ಲಿ ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಉಪ ಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ಬೃಜೇಶ್ ಪಾಠಕ್ ಇದ್ದರು.