ಪಿಎಂ ಕೇರ್ಸ್‌ ಫಂಡ್‌ ಸರ್ಕಾರಿ ನಿಧಿ ಅಲ್ಲ, RTIನಡಿ ಬರಲ್ಲ: ಕೇಂದ್ರ!

* ಕೊರೋನಾ ವೈರಸ್‌ನಿಂದ ಬಾಧಿತರಾದವರಿಗೆ ನೆರವು ನೀಡಲು ಸ್ಥಾಪಿಸಿದ್ದ ಫಂಡ್

* ಪಿಎಂ ಕೇರ್ಸ್‌ ಫಂಡ್‌ ಸರ್ಕಾರಿ ನಿಧಿ ಅಲ್ಲ, RTIನಡಿ ಬರಲ್ಲ: ಕೇಂದ್ರ

* ದೆಹಲಿ ಹೈಕೋರ್ಟ್‌ಗೆ ಪಿಎಂಒ ಅಧಿಕಾರಿ ಮಾಹಿತಿ

PM CARES not a fund of Government of India can not be brought under RTI Centre to Delhi HC pod

ನವದೆಹಲಿ(ಸೆ.24): ಕೊರೋನಾ ವೈರಸ್‌ನಿಂದ(Coronavirus) ಬಾಧಿತರಾದವರಿಗೆ ನೆರವು ನೀಡಲೆಂದು ಕೇಂದ್ರ ಸರ್ಕಾರ ಕಳೆದ ವರ್ಷ ಸ್ಥಾಪಿಸಿದ್ದ ‘ಪಿಎಂ ಕೇರ್ಸ್‌ ಫಂಡ್‌’ ಸರ್ಕಾರಿ ಫಂಡ್‌(PM CARES Fund) ಅಲ್ಲ. ಇದರಡಿ ಸಂಗ್ರಹಿಸಿ ಹಣ ಭಾರತ ಸರ್ಕಾರದ ಸಂಚಿತ ನಿಧಿಗೆ ಹೋಗುವುದಿಲ್ಲ ಎಂದು ದೆಹಲಿ ಹೈಕೋರ್ಟ್‌ಗೆ(Delhi High Court) ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಪಿಎಂ ಕೇರ್ಸ್‌ ಟ್ರಸ್ಟ್‌ ಅಡಿ ಈ ನಿಧಿ ಕಾರ್ಯನಿರ್ವಹಿಸುತ್ತಿದ್ದು, ಇದರ ಎಲ್ಲಾ ಹಣಕಾಸು ವ್ಯವಹಾರಗಳು ಅತ್ಯಂತ ಪಾರದರ್ಶಕವಾಗಿರುತ್ತವೆ ಎಂದೂ ತಿಳಿಸಿದೆ.

ಪಿಎಂ ಕೇರ್ಸ್‌ ಫಂಡ್‌ ಅನ್ನು ಪ್ರಧಾನ ಮಂತ್ರಿಗಳು ಸ್ಥಾಪಿಸಿರುವುದರಿಂದ ಅದು ಸರ್ಕಾರದ ನಿಧಿಯಾಗುತ್ತದೆ. ಒಂದು ವೇಳೆ ಅದು ಸರ್ಕಾರದ ನಿಧಿಯಲ್ಲ ಅಂತಾದರೆ ವೆಬ್‌ಸೈಟ್‌ನ ಹೆಸರಿನಲ್ಲಿ ’gov’ ಬಳಸಿಕೊಂಡಿರುವುದು ಹಾಗೂ ಪ್ರಧಾನಿಯ ಭಾವಚಿತ್ರ ಮತ್ತು ಸರ್ಕಾರದ ಲಾಂಛನ ಹಾಕಿರುವುದು ಏಕೆ ಎಂದು ಪ್ರಶ್ನಿಸಿ ಸಮ್ಯಕ್‌ ಗಂಗ್ವಾಲ್‌ ಎಂಬುವರು ದೆಹಲಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು.

ಗುರುವಾರ ಅದರ ವಿಚಾರಣೆ ವೇಳೆ ಪಿಎಂ ಕೇರ್ಸ್‌ ಟ್ರಸ್ಟ್‌ನ ಗೌರವ ಉಸ್ತುವಾರಿಯೂ ಆಗಿರುವ ಪ್ರಧಾನಿ ಕಾರ್ಯಾಯಲದ ಅಧೀನ ಕಾರ್ಯದರ್ಶಿ ಪ್ರದೀಪ್‌ ಕುಮಾರ್‌ ಶ್ರೀವಾಸ್ತವ ಅಫಿಡವಿಟ್‌ ಸಲ್ಲಿಸಿ, ‘ಇದು ಸರ್ಕಾರದ ನಿಧಿ ಅಲ್ಲ. ಆದರೆ ಇದಕ್ಕೆ ಬರುವ ದೇಣಿಗೆ ಹಾಗೂ ಈ ನಿಧಿಯಿಂದ ಮಾಡುವ ಖರ್ಚಿನ ಬಗ್ಗೆ ಕೇಂದ್ರ ಸರ್ಕಾರದ ಸಿಎಜಿ ಅವರು ನೇಮಿಸಿರುವ ಚಾರ್ಟರ್ಡ್‌ ಅಕೌಂಟೆಂಟ್‌ಗಳಿಂದ ಆಡಿಟ್‌ ಮಾಡಿಸಲಾಗುತ್ತದೆ.

ಪಾರದರ್ಶಕತೆ ಕಾಯ್ದುಕೊಳ್ಳಲು ಅದರ ಎಲ್ಲಾ ವಿವರಗಳನ್ನೂ ಸರ್ಕಾರದ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗುತ್ತದೆ. ದೇಶದ ಬೇರೆಲ್ಲಾ ಟ್ರಸ್ಟ್‌ಗಳಿಗೆ ಅನ್ವಯಿಸುವ ನಿಯಮಗಳೇ ಈ ಟ್ರಸ್ಟ್‌ಗೂ ಅನ್ವಯಿಸುತ್ತವೆ. ಸಂವಿಧಾನಬದ್ಧವಾಗಿ ಇದು ಸ್ಥಾಪಿತವಾಗಿದೆ’ ಎಂದು ತಿಳಿಸಿದರು.

ವಿಚಾರಣೆಯನ್ನು ಕೋರ್ಟ್‌ ಸೆ.27ಕ್ಕೆ ಮುಂದೂಡಿತು.

Latest Videos
Follow Us:
Download App:
  • android
  • ios