ವಿಮಾನಗಳಲ್ಲಿ ಶಾಸ್ತ್ರೀಯ ಸಂಗೀತ ಪ್ರಸಾರ ಮಾಡಿ: ವಿಮಾನಯಾನ ಸಚಿವಾಲಯ ಏರ್ಪೋರ್ಟ್‌ನಲ್ಲಿಯೂ ಸುಮಧುರ ಸಂಗೀತ ಗಾನಸುಧೆ
ನವದೆಹಲಿ(ಡಿ.29): ಎಲ್ಲಾ ವಿಮಾನಗಳು ಮತ್ತು ಟರ್ಮಿನಲ್‌ಗಳಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತವನ್ನು ಪ್ರಸಾರ ಮಾಡುವಂತೆ ಎಲ್ಲ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳಿಗೆ ಮಂಗಳವಾರ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. ಇಂಡಿಯನ್ ಕೌನ್ಸಿಲ್ ಆಫ್ ಕಲ್ಚರಲ್ ರಿಲೇಶನ್ ಡಿ.23ರಂದು ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಭೇಟಿ ಮಾಡಿ ಭಾರತೀಯ ವಿಮಾನಯಾನ ಸಂಸ್ಥೆಗಳ ಮೂಲಕ ಭಾರತದ ಸಂಗೀತ (ಶಾಸ್ತ್ರೀಯ ಸಂಗೀತ, ಜನಪದ, ವಾದ್ಯ ಸಂಗೀತ ಇತ್ಯಾದಿ)ಕ್ಕೆ ಉತ್ತೇಜನ ನೀಡಬೇಕೆಂದು ಕೋರಿತ್ತು. ಈ ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆಗಳಿಗೆ ಪತ್ರ ಬರೆದು, ಶ್ರೀಮಂತ ಪಾರಂಪರಿಕ ಇತಿಹಾಸ ಹೊಂದಿರುವ ಭಾರತೀಯ ಸಂಗೀತ ಪ್ರಸಾರ ಮಾಡಬೇಕು ಎಂದು ನಿರ್ದೇಶನ ನೀಡಿದೆ.
ಈ ಹಿಂದೆ ವಾಹನಗಳ ಹಾರ್ನ್ ಬದಲು ಸಂಗೀತದ ಧ್ವನಿ ಹೊರಡಿಸುವ ಬಗ್ಗೆ ಸುದ್ದಿಯಾಗಿತ್ತು. ವಾಹನಗಳ ಹಾರ್ನ್ ಮಾಡಿದಾಗ ಅದರಿಂದ ಹೊರಹೊಮ್ಮುವ ಕರ್ಕಶ ಧ್ವನಿಗೆ ಬೇಸರ ಪಡುವವರೇ ಹೆಚ್ಚು. ಆದರೆ ಮುಂದಿನ ದಿನಗಳಲ್ಲಿ ಇಂಥ ಕರ್ಣಕಠೋರ ಶಬ್ದಕ್ಕೆ ಬದಲಾಗಿ ಭಾರತೀಯ ಸಂಗೀತದ ವಾದ್ಯಗಳು ಕೇಳಿಬರುವ ಸಾಧ್ಯತೆ ಇದೆ! ಅಂದರೆ ತಬಲಾ, ಪಿಟೀಲು, ಕೊಳಲು ಸೇರಿದಂತೆ ನಾನಾ ವಾದ್ಯಗಳ ಮಧುರ ಧ್ವನಿ ಕೇಳಿಬರಲಿದೆ ಎನ್ನಲಾಗಿತ್ತು.
ವಾಹನಗಳಿಗೆ ಶೀಘ್ರ ತಬಲಾ, ಕೊಳಲು, ಪಿಟೀಲು ಹಾರ್ನ್: ಕರ್ಕಶ ಧ್ವನಿ ತಪ್ಪಿಸಲು ಗಡ್ಕರಿ ಪ್ಲಾನ್!
ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ರಸ್ತೆ ಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ, ‘ನಾನು ನಾಗಪುರದಲ್ಲಿರುವ ಕಟ್ಟಡದಲ್ಲಿ 11ನೇ ಅಂತಸ್ತಿನಲ್ಲಿ ವಾಸಿಸುತ್ತಿದ್ದೇನೆ. ಆದರೂ ಮುಂಜಾನೆ ಪ್ರಾಣಾಯಾಮ ಮಾಡುವಾಗ ವಾಹನಗಳ ಹಾರ್ನ್ ಏಕಾಗ್ರತೆ ಹಾಳು ಮಾಡುತ್ತದೆ. ಈ ವೇಳೆ ಇಂಥ ಕರ್ಕಶ ಧ್ವನಿಗಳನ್ನು ಸರಿಪಡಿಸುವ ಅಗತ್ಯ ಅರಿವಾಯ್ತು. ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ವೇಳೆ ಸಂಗೀತ ವಾದ್ಯಗಳ ಧ್ವನಿ ಅಳವಡಿಕೆ ಬಗ್ಗೆ ಪ್ರಸ್ತಾಪ ಬಂತು. ಅದನ್ನು ಜಾರಿ ಮಾಡುವ ಹಾದಿಯಲ್ಲಿ ಇದೀಗ ಅಧಿಕಾರಿಗಳು ತೊಡಗಿಸಿಕೊಂಡಿದ್ದಾರೆ. ಈ ಸಂಬಂಧ ನಾವು ಹೊಸ ಕಾಯ್ದೆ ಜಾರಿ ಮಾಡಲಿದ್ದೇವೆ ಎಂದು ಹೇಳಿದ್ದರು.
