Vaccination: ದೇಶದ 44 ಕೋಟಿ ಮಕ್ಕಳಿಗೆ ಲಸಿಕೆ ನೀಡುವ ಯೋಜನೆ ಸಿದ್ಧ!
* 2 ವಾರದಲ್ಲಿ ಬೂಸ್ಟರ್, ಹೆಚ್ಚುವರಿ ಡೋಸ್ ಬಗ್ಗೆ ನಿರ್ಣಯ
* ದೇಶದ 44 ಕೋಟಿ ಮಕ್ಕಳಿಗೆ ಲಸಿಕೆ ನೀಡುವ ಯೋಜನೆ ಸಿದ್ಧ
* ಕೋವಿಡ್ ಕಾರ್ಯಪಡೆ ಅಧ್ಯಕ್ಷ ಎನ್.ಕೆ ಅರೋರಾ ಮಾಹಿತಿ
ನವದೆಹಲಿ(ನ.30): ಕೊರೋನಾ ಮಹಾಮಾರಿಯಿಂದ ಮಕ್ಕಳನ್ನು ರಕ್ಷಿಸಲು ದೇಶದ 44 ಕೋಟಿ ಮಕ್ಕಳಿಗೆ ಲಸಿಕೆ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ಸಿದ್ಧವಾಗಿಟ್ಟುಕೊಂಡಿದೆ. ಅಲ್ಲದೆ ಹೊಸ ರೂಪಾಂತರಿ ಪ್ರಭೇದ ಒಮಿಕ್ರೋನ್ (Omicron) ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಬೂಸ್ಟರ್ ಡೋಸ್ (Booster Dose) ಮತ್ತು ಹೆಚ್ಚುವರಿ ಡೋಸ್ ನೀಡುವ ಕುರಿತು ಇನ್ನೆರಡು ವಾರಗಳಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಕೋವಿಡ್ ಕಾರ್ಯಪಡೆ ಅಧ್ಯಕ್ಷ ಡಾ. ಎನ್.ಕೆ ಅರೋರಾ ಹೇಳಿದ್ದಾರೆ.
ಸೋಮವಾರ ಈ ಬಗ್ಗೆ ಮಾತನಾಡಿದ ಅವರು, ‘ಇಂದಿನ ಮಕ್ಕಳು ನಮ್ಮ ಬಹುಮುಖ್ಯವಾದ ಆಸ್ತಿಯಾಗಿದ್ದಾರೆ. 18 ವರ್ಷದೊಳಗಿನ 44 ಕೋಟಿ ಮಕ್ಕಳಿಗೆ ಲಸಿಕೆ ನೀಡಲು ಯೋಜನೆ ರೂಪಿಸಲಾಗಿದ್ದು, ಅದನ್ನು ಶೀಘ್ರ ಬಹಿರಂಗಪಡಿಸಲಾಗುತ್ತದೆ. ಈಗಾಗಲೇ ನಮ್ಮಲ್ಲಿ ಮಕ್ಕಳಿಗಾಗಿ ಝೈಕೋವ್-ಡಿ, ಕೋವ್ಯಾಕ್ಸಿನ್ (Covaxin) ಮತ್ತು ಎಂಆರ್‌ಎನ್‌ಎ ಲಸಿಕೆಗಳು ಲಭ್ಯ ಇವೆ. ಕಾಯಿಲೆಗಳಿಂದ ಬಳಲುತ್ತಿರುವ ಮತ್ತು ಇತರ ಮಕ್ಕಳಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತದೆ’ ಎಂದಿದ್ದಾರೆ.
ಎರಡೂ ಡೋಸ್ ಲಸಿಕೆ ಪಡೆದವರಿಗೆ ಇಂತಿಷ್ಟುದಿನಗಳಾದ ಮೇಲೆ ನೀಡಲಾಗುವ ಡೋಸ್ ಅನ್ನು ಬೂಸ್ಟರ್ ಡೋಸ್ ಎನ್ನಲಾಗುತ್ತದೆ. ಆದರೆ ಲಸಿಕೆ ಪಡೆದ ಹೊರತಾಗಿಯೂ, ರೋಗ ನಿರೋಧಕ ಶಕ್ತಿ ಹೆಚ್ಚದವರಿಗೆ ನೀಡಲಾಗುವ ಡೋಸ್ ಅನ್ನು ಹೆಚ್ಚುವರಿ ಲಸಿಕೆ ಎನ್ನಲಾಗುತ್ತದೆ ಎಂದು ಅವರು ವಿವರಣೆ ನೀಡಿದರು.
ಲಸಿಕೆ ನೀಡುವ ನೆಪದಲ್ಲಿ ಮನೆಗೆ ನುಗ್ಗಿದವರು ಮಾಡಿದ್ದೇ ಬೇರೆ : ಎಚ್ಚರ!
ಕೊರೋನಾ ಲಸಿಕೆ (Covid vaccine) ಹಾಕುವ ವೈದ್ಯ ಸಿಬ್ಬಂದಿ ಸೋಗಿನಲ್ಲಿ ಮನೆ ಪ್ರವೇಶಿಸಿ, ಬಳಿಕ ಮನೆಯ ಸದಸ್ಯರಿಗೆ ಪಿಸ್ತೂಲ್ (Gun) ತೋರಿಸಿ 50 ಗ್ರಾಂ ತೂಕದ ಚಿನ್ನದ ಸರ (Gold chain) ದೋಚಿ ಪರಾರಿಯಾಗಿರುವ ಸಿನಿಮೀಯ ಘಟನೆ ಯಶವಂತಪುರ ಪೊಲೀಸ್ ಠಾಣೆ (Yashavanthapura Police station) ವ್ಯಾಪ್ತಿಯಲ್ಲಿ ಹಾಡಹಗಲೇ ನಡೆದಿದೆ. ಯಶವಂತಪುರದ ಎಸ್‌ಬಿಎಂ ಕಾಲೋನಿ (SBM Colony) ನಿವಾಸಿ ಸಂಪತ್ ಸಿಂಗ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ.
ಸೋಮವಾರ ಬೆಳಗ್ಗೆ 11.30ರ ಸುಮಾರಿಗೆ ಸಂಪತ್ ಸಿಂಗ್ ತಾಯಿ ಮತ್ತು ಪತ್ನಿ ಇಬ್ಬರು ಮಾತ್ರ ಮನೆಯಲ್ಲಿದ್ದರು. ಈ ವೇಳೆ ಕಾರು (Car) ಹಾಗೂ ದ್ವಿಚಕ್ರ ವಾಹನದಲ್ಲಿ ಬಂದಿರುವ ನಾಲ್ವರು ದುಷ್ಕರ್ಮಿಗಳು, ತಾವು ಕೊರೋನಾ ಲಸಿಕೆ ನೀಡಲು ಬಂದಿದ್ದೇವೆ ಎಂದು ಮನೆ ಪ್ರವೇಶಿಸಿದ್ದಾರೆ. ಬಳಿಕ ಏಕಾಏಕಿ ಪಿಸ್ತೂಲ್ ತೆಗೆದು ಇಬ್ಬರು ಮಹಿಳೆಯರನ್ನು ಹೆದರಿಸಿ, ಬೀರುವಿನಲ್ಲಿರಿಸಿದ್ದ 50 ಗ್ರಾಂ ತೂಕದ ಚಿನ್ನದ ಸರ ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು (Police) ತಿಳಿಸಿದ್ದಾರೆ.
ಘಟನೆ ಸಂಬಂಧ ಸಂಪತ್ ಸಿಂಗ್ ಅವರು ದೂರು ನೀಡಿದ ದೂರಿನ (Complaont) ಮೇರೆಗೆ ದುಷ್ಕರ್ಮಿಗಳ ಪತ್ತೆಗೆ ಮುಂದಾಗಿರುವ ಪೊಲೀಸರು, ಘಟನಾ ಸ್ಥಳದ ಸಮೀಪದ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿ ಪರಿಶೀಲಿಸಿದ್ದಾರೆ. ಆರೋಪಿಗಳ ಸುಳಿವು ಸಿಕ್ಕಿದ್ದು ಶೀಘ್ರದಲ್ಲೇ ಬಂಧಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.