ತೇಜಸ್‌ ಯುದ್ಧವಿಮಾನ ಪತನವಾಗಿ ದುರಂತ ಸಾವಿಗೀಡಾದ ಪೈಲಟ್‌ ವಿಂಗ್ ಕಮಾಂಡರ್‌ ನಮಾಂಶ್‌ ಸ್ಯಾಲ್‌ ಅವರ ತವರಿನಲ್ಲಿ ದುಃಖ ಮಡುಗಟ್ಟಿದೆ. ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆ ನಗರೋಟಾ ಬಗವಾನ್‌ನಲ್ಲಿರುವ ಅವರ ಮನೆಯಲ್ಲಿ ಕುಟುಂಬಸ್ಥರು ಹಾಗೂ ಊರವರು ತಮ್ಮ ‘ರಿಯಲ್‌ ಹೀರೋ’ವನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ.

ಧರ್ಮಶಾಲಾ/ಹಮೀರ್‌ಪುರ : ಶುಕ್ರವಾರ ದುಬೈ ವೈಮಾನಿಕ ಪ್ರದರ್ಶನದ ವೇಳೆ ತೇಜಸ್‌ ಯುದ್ಧವಿಮಾನ ಪತನವಾಗಿ ದುರಂತ ಸಾವಿಗೀಡಾದ ಪೈಲಟ್‌ ವಿಂಗ್ ಕಮಾಂಡರ್‌ ನಮಾಂಶ್‌ ಸ್ಯಾಲ್‌ ಅವರ ತವರಿನಲ್ಲಿ ದುಃಖ ಮಡುಗಟ್ಟಿದೆ. ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ನಗರೋಟಾ ಬಗವಾನ್‌ನಲ್ಲಿರುವ ಅವರ ಮನೆಯಲ್ಲಿ ಕುಟುಂಬಸ್ಥರು ಹಾಗೂ ಊರವರು ತಮ್ಮ ‘ರಿಯಲ್‌ ಹೀರೋ’ವನ್ನು ಕಳೆದುಕೊಂಡ ದುಃಖದಲ್ಲಿ ಕಣ್ಣೀರಿಡುತ್ತಿದ್ದಾರೆ. ಈ ನಡುವೆ ದುಬೈನಿಂದ ಅವರ ಮೃತಶರೀರದ ಅವಶೇಷಗಳನ್ನು ಕರೆತರುವ ಕೆಲಸವಾಗುತ್ತಿದ್ದು, ಭಾನುವಾರ ಕಂಗ್ರಾದ ಗಗ್ಗಲ್‌ ವಿಮಾನ ನಿಲ್ದಾಣಕ್ಕೆ ಅವಶೇಷಗಳು ತಲುಪಲಿವೆ. ಭಾನುವಾರ ಮಧ್ಯಾಹ್ನ 2 ಗಂಟೆ ಬಳಿಕ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಪತ್ನಿಯೂ ವಾಯುಪಡೆಯಲ್ಲಿ ಸೇವೆ

ನಮಾಂಶ್‌ ಸ್ಯಾಲ್‌ ಅವರ ಪತ್ನಿ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಂದೆ ಜಗನ್ನಾಥ್‌ ಅವರು ಈ ಹಿಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ದಂಪತಿಗೆ 6 ವರ್ಷದ ಪುತ್ರಿಯಿದ್ದಾಳೆ

ಪಾಕ್‌ ರಕ್ಷಣಾ ಸಚಿವ ಸಂತಾಪ

ತೇಜಸ್‌ ಪತನದ ವೇಳೆ ಸಾವಿಗೀಡಾದ ಪೈಲಟ್‌ ನಮಾಂಶ್‌ ಸ್ಯಾಲ್‌ ಅವರ ಕುಟುಂಬಕ್ಕೆ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್‌ ಶುಕ್ರವಾರ ಸಂತಾಪ ಸೂಚಿಸಿದ್ದಾರೆ. ‘ದುಬೈ ಏರ್ ಶೋನಲ್ಲಿ ಮೃತಪಟ್ಟ ಪೈಲಟ್‌ ನಮಾಂಶ್‌ ಅವರ ಕುಟುಂಬಕ್ಕೆ ಇಡೀ ರಾಷ್ಟ್ರದ ಪರವಾಗಿ ಪಾಕಿಸ್ತಾನ ಸಂತಾಪ ವ್ಯಕ್ತಪಡಿಸುತ್ತದೆ’ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.