ದೆಹಲಿ ಸ್ಫೋಟ ಪ್ರಕರಣದಲ್ಲಿ ಮತ್ತೊಬ್ಬ ಶಂಕಿತ ಉಗ್ರ ಪುಲ್ವಾಮಾದ ತುಫಾಲಿ ನಿಯಾಝ್ ಅರೆಸ್ಟ್, ವೈದ್ಯ ಭಯೋತ್ಪಾದನೆ ನಡುವೆ ಈತನೊಬ್ಬ ಎಲೆಕ್ಟ್ರೀಶಿಯನ್. ಇದರ ಆಳ ಇಲ್ಲಿಗೆ ನಿಲ್ಲುತ್ತಿಲ್ಲ, ಊಹೆಗೂ ನಿಲುಕದ ರೀತಿಯಲ್ಲಿ ಉಗ್ರರು ದೆಹಲಿ ಸ್ಫೋಟ ನಡೆಸಿದ್ದಾರೆ.

ನವದೆಹಲಿ (ನ.11) ಉಗ್ರರು ನಡೆಸಿದ ದೆಹಲಿ ಕಾರು ಸ್ಫೋಟ ಪ್ರಕರಣದ ತನಿಖೆಯಲ್ಲಿ ಸ್ಫೋಟಕ ಮಾಹಿತಿಗಳು ಹೊರಬರುತ್ತಿದೆ. ಭಾರತದಲ್ಲಿ ಉಗ್ರರ ಜಾಲ ಹೇಗೆ ಕಾರ್ಯನಿರ್ವಹಿಸುತ್ತಿದೆ ಅನ್ನೋದರ ಸಣ್ಣ ಝಲಕ್ ದೆಹಲಿ ಸ್ಫೋಟದಿಂದ ಬಯಲಾಗಿದೆ. ವೈದ್ಯರ ಸೋಗಿನಲ್ಲಿ ಉಗ್ರರು ದೆಹಲಿ ಸ್ಫೋಟ ನಡೆಸುತ್ತಾರೆ ಅನ್ನೋದು ಯಾರೂ ಊಹಿಸಿರಲಿಲ್ಲ. ಇದೀಗ ದೆಹಲಿ ಸ್ಫೋಟ ಪ್ರಕರಣ ಸಂಬಂಧ ಮತ್ತೊಬ್ಬ ಶಂಕಿತ ಉಗ್ರನ ಬಂಧಿಸಲಾಗಿದೆ. ಈತ ಪುಲ್ವಾಮಾದಲ್ಲಿ ಎಲೆಕ್ಟ್ರಿಶಿಯನ್ ಆಗಿ ಕಾರ್ಯನಿರ್ವಹಿಸುತ್ತಿರುವ ತುಫಾಲಿ ನಿಯಾಝ್ ಭಟ್.

ಬಾಂಬ್ ತಯಾರಿಕೆ, ಸ್ಫೋಟಕ್ಕೆ ಎಲೆಕ್ಟ್ರಿಕ್ ಸಪೋರ್ಟ್

ಪುಲ್ವಾಮಾದಲ್ಲಿ ಎಲೆಕ್ಟ್ರಿಶಿಯನ್ ಆಗಿ ಕೆಲಸ ಮಾಡುವ ಈತ, ಬೆಳಗ್ಗೆ ಮನೆ, ಕಂಪನಿ ಸೇರಿದಂತೆ ಹಲವೆಡೆ ಎಲೆಕ್ಟ್ರಿಕ್ ಕೆಲಸ ಮಾಡುತ್ತಾರೆ. ವೈಯರಿಂಗ್, ಎಲೆಕ್ಟ್ರಿಕ್ ಉಪಕರಣ ಜೋಡಣೆ ಸೇರಿದಂತೆ ದಿನವಿಡಿ ಬ್ಯೂಸಿ. ಆದರೆ ರಾತ್ರಿಯಾಗುತ್ತಿದ್ದಂತೆ ಉಗ್ರ ವೈದ್ಯರ ಜೊತೆ ಬಾಂಬ್ ತಯಾರಿಕೆಗೆ ಎಲೆಕ್ಟ್ರಿಕ್ ಬೆಂಬಲ ನೀಡುತ್ತಿದ್ದ ಎಂದು ವರದಿಯಾಗಿದೆ. ಇದೀಗ ಜಮ್ಮು ಮತ್ತು ಕಾಶ್ಮೀರ ತನಿಖಾ ತಂಡ (SIA) ತುಫಾಲಿ ನಿಯಾಝ್ ಭಟ್‌ನ ಅರೆಸ್ಟ್ ಮಾಡಿದೆ.

ಸ್ಫೋಟದಲ್ಲಿ ತುಫಾಲಿ ನಿಯಾಝ್ ಪಾತ್ರ

ಶ್ರೀನಗರ ಸಿಐಡಿ ಪೊಲೀಸರ ವರದಿ ಪ್ರಕಾರ, ತುಫಾಲಿ ನಿಯಾಝ್ ದೆಹಲಿ ಬಾಂಬ್ ಸ್ಫೋಟದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾನೆ. ಈತನ ಎಲೆಕ್ಟ್ರಿಕ್ ಸಪೋರ್ಟ್ ಸ್ಫೋಟದಲ್ಲಿ ನೆರವಾಗಿದೆ. ಇದೀಗ ಈತನ ನೆರವು ವೈದ್ಯ ಉಗ್ರರು ಮಾತ್ರವಲ್ಲ, ಹಲವು ಉಗ್ರರು ಪಡೆದುಕೊಂಡಿರುವ ಸಾಧ್ಯತೆ ಇದೆ. ಈ ಕುರಿತು ತನಿಖೆ ನಡಯುತ್ತಿದೆ.

ದೆಹಲಿ ಸ್ಫೋಟ

ದೆಹಲಿಯ ಕೆಂಪು ಕೋಟೆ ಬಳಿ ನವೆಂಬರ್ 10 ರಂದು ಕಾರು ಸ್ಫೋಟಗೊಂಡಿತ್ತು. ಉಗ್ರರು ಕಾರ್ಯಾಚರಣೆ ನಡೆಸಿ ಈ ಸ್ಫೋಟ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ 10 ಮಂದಿ ಮೃತಪಟ್ಟಿದ್ದರು. ಬಳಿಕ ಚಿಕಿತ್ಸೆ ಪೆಡೆಯುತ್ತಿದ್ದ ಮತ್ತಿಬ್ಬರು ಮೃತಪಟ್ಟಿದ್ದರು. ಈ ಮೂಲಕ ಸಾವಿನ ಸಂಖ್ಯೆ 12ಕ್ಕೆ ಏರಿಕೆಯಾಗಿತ್ತು. ಇತ್ತ 25ಕ್ಕೂ ಹಚ್ಚು ಮಂದಿ ಗಾಯಗೊಂಡಿದ್ದರು. ಇದಕ್ಕೂ ಮೊದಲು ಫರೀದಾಬಾದ್‌ನಲ್ಲಿ ಬರೋಬ್ಬರಿ 2900 ಕೆಜಿ ತೂಕದ ಸ್ಫೋಟಗಳು ಪತ್ತೆಯಾಗಿತ್ತು. ತನಿಖಾ ಸಂಸ್ಥೆಗಳು ಉಗ್ರರ ಪ್ಲಾನ್ ವಿಫಲಗೊಳಿಸಿದ ಬೆನ್ನಲ್ಲೇ ವೈದ್ಯರ ಸೋಗಿನಲ್ಲಿದ್ದ ಉಗ್ರರ ತಂಡ ದೆಹಲಿಯಲ್ಲಿ ಸ್ಫೋಟ ನಡೆಸಿತ್ತು. ಈ ಪ್ರಕರಣ ಸಂಬಂಧ ಡಾಕ್ಟರ್ ಮುಜಾಮಿಲ್ ಶಕೀಲ್ ಗನೈ, ವೈದ್ಯ ಆದಿಲ್ ಅಹಮ್ಮದ್, ವೈದ್ಯೆ ಶಾಹೀನ್ ಸಯೀದ್ ಅರೆಸ್ಟ್ ಆಗಿದ್ದರು. ಇದರ ಬೆನ್ನಲ್ಲೇ ಮುಫ್ತಿ ಇರ್ಫಾನ್ ಅಹಮ್ಮದ್ ಕೂಡ ಅರೆಸ್ಟ್ ಆಗಿದ್ದರು. ಇವೆರ್ಲಾ ಫರೀದಾಬಾದ್‌‌ನ ಅಲ್ ಫಲಾಹ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ವೈದ್ಯರು. ಈ ಪೈಕಿ ಮಹಿಳಾ ವೈದ್ಯೆ ಶಾಹೀನ್ ಸಯೀದ್ ಲಖನೌ ಮೂಲದವರಾಗಿದ್ದರೆ, ಇನ್ನುಳಿದ ಉಗ್ರ ವೈದ್ಯರು ಕಾಶ್ಮೀರ ಮೂಲದವರು. ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ನಡೆಸಿ ಹೊರಹಾಕಲ್ಪಟ್ಟಿದ್ದ ವೈದ್ಯರು, ಪ್ರೊಫೆಸರ್ ಸೇರಿದಂತೆ ಹಲವರನ್ನು ರೆಡ್ ಕಾರ್ಪೆಟ್ ನೀಡಿ ಕರೆಯಿಸಿಕೊಳ್ಳುತ್ತಿದ್ದ ಅಲ್ ಫಲಾಹ ವಿಶ್ವವಿದ್ಯಾಲಯ ಇದೀಗ ತನಿಖಾ ಸಂಸ್ಥಯ ರೇಡಾರ್‌ನಲ್ಲಿದೆ.