ನವದೆಹಲಿ[ಫೆ.05]: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಹೋರಾಟ ತೀವ್ರಗೊಳಿಸುವ ಸಲುವಾಗಿ ‘ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ’ (ಪಿಎಫ್‌ಐ) ಸಂಘಟನೆ 120 ಕೋಟಿ ರು. ಹಣ ಸಂಗ್ರಹಿಸಿ, ಅದನ್ನು ಪ್ರತಿಭಟನೆಗಳಿಗೆ ವಿನಿಯೋಗಿಸಿತ್ತು ಎಂಬ ಪ್ರಕರಣ, ಸಂಸ್ಥೆಗೆ ಉರುಳುವಾಗುವ ಎಲ್ಲ ಸಾಧ್ಯತೆಗಳು ಕಂಡುಬಂದಿದೆ.

ಹಣಕಾಸು ವ್ಯವಹಾರ ಬಯಲಿಗೆ ಎಳೆದಿದ್ದ ಜಾರಿ ನಿರ್ದೇಶನಾಲಯವು, ಹಣದ ಮೂಲದ ಕುರಿತು ತನಿಖೆ ನಡೆಸಲು ಪಿಎಫ್‌ಐನ ಹಲವು ಮುಖಂಡರನ್ನು ಇತ್ತೀಚೆಗೆ ವಿಚಾರಣೆಗೆ ಗುರಿಪಡಿಸಿತ್ತು. ಆದರೆ ವಿಚಾರಣೆ ವೇಳೆ ಹಣದ ಮೂಲವನ್ನು ವಿವರಿಸಲು ಅವರು ವಿಫಲರಾಗಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಟೀವಿ ವಾಹಿನಿಯೊಂದು ವರದಿ ಮಾಡಿದೆ.

ಹಗರಣದ ಬೆಳಕಿಗೆ ಬಂದಾಗ ಕಾನೂನಿನ ಪ್ರಕಾರವೇ ಹಣ ಸಂಗ್ರಹ ಮಾಡಲಾಗಿದೆ ಎಂದು ಪಿಎಫ್‌ಐ ಹೇಳಿತ್ತು. ಆದರೆ ವಿಚಾರಣೆ ವೇಳೆ ಹಣದ ಮೂಲ ಬಹಿರಂಗಪಡಿಸಲು ವಿಫಲವಾಗಿರುವುದು ಅದಕ್ಕೆ ಸಮಸ್ಯೆ ತಂದೊಡ್ಡುವುದು ಖಚಿತ ಎನ್ನಲಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಪಿಎಫ್‌ಐ ಸಂಘಟನೆಯ ಪದಾಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಸೇರಿದಂತೆ ವಿವಿಧ ಪ್ರಕರಣಗಳಡಿ ತನಿಖೆ ಎದುರಿಸಬೇಕಾಗಿ ಬರಲಿದೆ ಎನ್ನಲಾಗಿದೆ.