ಪೆಟ್ರೋಲ್ ದರ ಈಗ ಸಾರ್ವಕಾಲಿಕ ಗರಿಷ್ಠ..!
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ | ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ತೈಲ ದರಗಳು
ನವದೆಹಲಿ(ಜ.08): ತೈಲ ಕಂಪನಿಗಳು ಗುರುವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕ್ರಮವಾಗಿ ಲೀ.ಗೆ 23 ಮತ್ತು 26 ಪೈಸೆಯಷ್ಟುಏರಿಸಿವೆ. ಇದರೊಂದಿಗೆ ಎರಡೂ ತೈಲ ದರಗಳು ಸಾರ್ವಕಾಲಿಕ ಗರಿಷ್ಠ ಮಟ್ಟತಲುಪಿದಂತೆ ಆಗಿದೆ.
ಗುರುವಾರದ ಏರಿಕೆ ಬಳಿಕ ಪೆಟ್ರೋಲ್ ದರ ದೆಹಲಿಯಲ್ಲಿ 84.20 ರು.ಗೆ, ಮುಂಬೈನಲ್ಲಿ 90.83 ರು.ಗೆ, ಬೆಂಗಳೂರಿನಲ್ಲಿ 87.04 ರು.ಗೆ ತಲುಪಿದೆ. ಇನ್ನು ಡೀಸೆಲ್ ದರ ದರ ದೆಹಲಿಯಲ್ಲಿ 74.38 ರು.ಗೆ, ಮುಂಬೈನಲ್ಲಿ 81.07 ರು.ಗೆ, ಬೆಂಗಳೂರಿನಲ್ಲಿ 78.87 ರು.ಗೆ ತಲುಪಿದೆ.
ಮಾಲಿನ್ಯದಿಂದ ಭಾರತದಲ್ಲಿ ವಾರ್ಷಿಕ 3 ಲಕ್ಷ ಗರ್ಭಪಾತ
ದೇಶದ ಇತರೆ ನಗರಗಳಲ್ಲಿ ಈಗಾಗಲೇ ತೈಲ ದರ ಗರಿಷ್ಠ ಮಟ್ಟಮುಟ್ಟಿತ್ತಾದರೂ, ತೆರಿಗೆ ದರ ಕಡಿಮೆ ಇರುವ ದೆಹಲಿಯಲ್ಲಿ ಅದು ಸಾರ್ವಕಾಲಿಕ ಗರಿಷ್ಠ ಮಟ್ಟಮುಟ್ಟಿದ್ದು ಗುರುವಾರ. ಉಳಿದ ನಗರಗಳಲ್ಲಿ ಪೆಟ್ರೋಲ್ ದರ ಮತ್ತೊಂದು ಗರಿಷ್ಠ ಮಟ್ಟತಲುಪಿದೆ.
ದರ ಏರಿಕೆಗೆ ಕಾರಣ?
ದಶಕಗಳ ಹಿಂದಿನ ದರಕ್ಕೆ ಹೋಲಿಸಿದರೆ ಈಗಲೂ ಕಚ್ಚಾತೈಲ ದರ ಕಡಿಮೆ ಇದೆ. ಆದರೆ ತನ್ನ ಬೊಕ್ಕಸ ಭರ್ತಿ ಮಾಡಲು ಕೇಂದ್ರ ಸರ್ಕಾರ ತೈಲೋತ್ಪನ್ನಗಳ ಮೇಲಿನ ಅಬಕಾರಿ ಸುಂಕವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದೆ.
2019ರ ಆರಂಭದಲ್ಲಿ ಕೇಂದ್ರ ಸರ್ಕಾರ ಲೀ. ಪೆಟ್ರೋಲ್ ಮೇಲೆ ವಿಧಿಸುತ್ತಿದ್ದ 19.98 ರು. ಅಬಕಾರಿ ಸುಂಕವು ಇದೀಗ 32.98 ರು.ಗೆ ತಲುಪಿದೆ. ಅದೇ ರೀತಿ ಲೀ. ಡೀಸೆಲ್ ಮೇಲೆ ವಿಧಿಸಲಾಗುತ್ತಿದ್ದ 15.38 ರು. ಅಬಕಾರಿ ಸುಂಕ ಈಗ 31.83 ರು.ಗೆ ಮುಟ್ಟಿದೆ.
ಇದರ ಜೊತೆಗೆ ರಾಜ್ಯಗಳೂ ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಮೌಲ್ಯವರ್ಧಿತ ತೆರಿಗೆಗಳನ್ನು ಸಹ ವಿಧಿಸುತ್ತಿವೆ. ಒಟ್ಟಾರೆ ಪೆಟ್ರೋಲ್ ದರದ ಪೈಕಿ ಶೇ.62ರಷ್ಟುಮತ್ತು ಡೀಸೆಲ್ ದರದ ಶೇ.57ರಷ್ಟುಭಾಗ ರಾಜ್ಯ ಮತ್ತು ಕೇಂದ್ರದ ತೆರಿಗೆಗೆಂದೇ ಹೋಗುತ್ತದೆ.