ಪಕ್ಷ ಸೇರಲು ನಮಗೆ ಬಿಜೆಪಿ 100 ಕೋಟಿ ರು. ಲಂಚದ ಆಮಿಷವೊಡ್ಡಿತ್ತು ಎಂದು ಆರೋಪಿಸಿದ್ದ ಟಿಆರ್‌ಎಸ್‌ ಶಾಸಕ, ಕರಣದ ತನಿಖೆಗೆ ಎಸ್‌ಐಟಿ ರಚಿಸಿದ್ದ ತೆಲಂಗಾಣ ಸರ್ಕಾರ 

ಹೈದರಾಬಾದ್‌(ಡಿ.07): ತೆಲಂಗಾಣ ರಾಷ್ಟ್ರೀಯ ಸಮಿತಿಯ (ಟಿಆರ್‌ಎಸ್‌) ಶಾಸಕರನ್ನು ಖರೀದಿಸುವ ಸಂಚು ನಡೆಸಿದ ಪ್ರಕರಣದಲ್ಲಿ ಬಿಜೆಪಿಯ ಹಿರಿಯ ನಾಯಕ ಬಿ.ಎಲ್‌.ಸಂತೋಷ್‌ ಹಾಗೂ ಇತರೆ ಮೂವರನ್ನು ಆರೋಪಿಗಳನ್ನಾಗಿ ಮಾಡಬೇಕು ಎಂದು ವಿಶೇಷ ತನಿಖಾ ದಳ (ಎಸ್‌ಐಟಿ) ಕೋರಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಲಯವೊಂದು ಮಂಗಳವಾರ ವಜಾಗೊಳಿಸಿದೆ.

ಪ್ರಕರಣದ ವಿಚಾರಣೆ ನಡೆಸುತ್ತಿರುವ ಎಸ್‌ಐಟಿ ನವೆಂಬರ್‌ನಲ್ಲಿ ಕೋರ್ಚ್‌ನಲ್ಲಿ ಮೆಮೋ ದಾಖಲಿಸಿದ್ದು, ಲಂಚ ನೀಡಿ ಶಾಸಕರನ್ನು ಖರೀದಿಸಲು ಪ್ರಯತ್ನಿಸಿದ ಆರೋಪ ಹೊರಿಸಿ ಸಂತೋಷ್‌ ಹಾಗೂ ಕೇರಳದ ತುಷಾರ್‌ ವೆಲ್ಲಾಪ್ಪಳ್ಳಿ ಹಾಗೂ ಜಗ್ಗು ಸ್ವಾಮಿ ಮತ್ತು ವಕೀಲ ಬಿ.ಶ್ರೀನಿವಾಸ್‌ ಎಂಬುವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ (ಪಿಸಿ ಆ್ಯಕ್ಟ್) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿ ಕೋರಿತ್ತು.

ಟಿಆರ್‌ಎಸ್ ತೀವ್ರ ಹಿನ್ನಡೆ, ಬಿಎಲ್ ಸಂತೋಷ್‌ಗೆ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್ ತಡೆಯಾಜ್ಞೆ!

ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸುತ್ತಿರುವ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ವಿಶೇಷ ನ್ಯಾಯಾಲಯವು, ‘ಪೊಲೀಸರಿಗೆ ಅಥವಾ ಎಸ್‌ಐಟಿಗೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುವ ಅಧಿಕಾರವಿಲ್ಲ. ಕೇವಲ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಮಾತ್ರ ಇಂತಹ ಪ್ರಕರಣಗಳ ತನಿಖೆ ನಡೆಸುವ ಅಧಿಕಾರವಿದೆ’ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಕೋರಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ಏನಿದು ಪ್ರಕರಣ?:

ಟಿಆರ್‌ಎಸ್‌ ಶಾಸಕ ರೋಹಿತ್‌ ರೆಡ್ಡಿ, ‘ಕೆಲವು ಬಿಜೆಪಿ ಏಜೆಂಟರು ನನಗೆ 100 ಕೋಟಿ ರು. ನೀಡಿ, ಪಕ್ಷ ಬಿಟ್ಟು ಬಿಜೆಪಿ ಸೇರುವಂತೆ ಹೇಳಿದ್ದರು’ ಎಂದು ಆರೋಪಿಸಿದ್ದರು. ಅಲ್ಲದೇ ಟಿಆರ್‌ಎಸ್‌ನಿಂದ ಇನ್ನಷ್ಟುಶಾಸಕರನ್ನು ಬಿಜೆಪಿಗೆ ಕರೆತಂದರೆ ಪ್ರತಿ ಶಾಸಕಗೆ 50 ಕೋಟಿ ರು. ನೀಡುವುದಾಗಿ ಹೇಳಿದ್ದರು ಎಂದು ದೂರಿದ್ದರು. ಬಳಿಕ ಆಮಿಷ ಒಡ್ಡಿದ್ದರು ಎನ್ನಲಾದ ಮೂವರನ್ನು ಬಂಧಿಸಲಾಗಿತ್ತು. ಬಳಿಕ ಪ್ರಕರಣದಲ್ಲಿ ಸಂತೋಷ್‌ ಹೆಸರು ಕೇಳಿಬಂದಿತ್ತು. ತೆಲಂಗಾಣದ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದ ಹಿನ್ನೆಲೆಯಲ್ಲಿ ಇದು ಭಾರೀ ಸುದ್ದಿಯಾಗಿತ್ತು. ಇದರ ತನಿಖೆಯನ್ನು ಎಸ್‌ಐಟಿ ನಡೆಸುತ್ತಿದೆ.