ನವದೆಹಲಿ(ಏ.11): ದೇಶಾದ್ಯಂತ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕೋವಿಡ್‌ ನಿಯಮಾವಳಿಗಳನ್ನು ಉಲ್ಲಂಘಿಸುವ ಅಭ್ಯರ್ಥಿಗಳು ಹಾಗೂ ಸ್ಟಾರ್‌ ಪ್ರಚಾರಕರನ್ನು ಪ್ರಚಾರ ರಾರ‍ಯಲಿಗಳಿಂದಲೇ ನಿಷೇಧಿಸುವುದಾಗಿ ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.

ನಾಲ್ಕು ದಿನಗಳ ಹಿಂದಷ್ಟೇ ಮೂರು ರಾಜ್ಯಗಳ ಚುನಾವಣೆ ಮುಕ್ತಾಯವಾಗಿದ್ದು, ಅಲ್ಲಿ ಕೋವಿಡ್‌ ನಿಯಮ ಮಿತಿಮೀರಿ ಉಲ್ಲಂಘನೆಯಾದ ವರದಿಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಆಯೋಗ ಈ ಎಚ್ಚರಿಕೆಯನ್ನು ನೀಡಿದೆ. ಪಶ್ಚಿಮ ಬಂಗಾಳದಲ್ಲಿ 4 ಹಂತದ ಚುನಾವಣೆಗಳು ಮುಗಿದಿದ್ದು, ಇನ್ನೂ 4 ಹಂತ ಬಾಕಿ ಇವೆ.

ಚುನಾವಣಾ ಸಭೆ/ಪ್ರಚಾರ ವೇಳೆ ಸಾಮಾಜಿಕ ಅಂತರ, ಮಾಸ್ಕ್‌ ಧರಿಸುವಿಕೆಯಂತಹ ಕೋವಿಡ್‌ ನಿಯಮಾವಳಿಗಳನ್ನು ಉಲ್ಲಂಘನೆ ಮಾಡುತ್ತಿರುವುದು ಆಯೋಗದ ಗಮನಕ್ಕೆ ಬಂದಿದೆ. ಸ್ಟಾರ್‌ ಪ್ರಚಾರಕರು/ರಾಜಕೀಯ ನಾಯಕರು/ಅಭ್ಯರ್ಥಿಗಳು ವೇದಿಕೆ ಅಥವಾ ಪ್ರಚಾರ ಸಂದರ್ಭದಲ್ಲಿ ಮಾಸ್ಕ್‌ ಧರಿಸುತ್ತಿಲ್ಲ ಎಂಬುದು ತಿಳಿದುಬಂದಿದೆ. ಇಂತಹ ವರ್ತನೆ ತೋರುವ ಮೂಲಕ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ತಮ್ಮನ್ನು ಮತ್ತು ಸಮಾವೇಶಗಳಿಗೆ ಸೇರುವ ಜನರನ್ನು ಸೋಂಕಿನ ಅಪಾಯಕ್ಕೆ ದೂಡುತ್ತಿದ್ದಾರೆ ಎಂದು ಆಯೋಗದ ನೋಟಿಸ್‌ ತಿಳಿಸಿದೆ.

ಒಂದು ವೇಳೆ ಇಂತಹ ಉಲ್ಲಂಘನೆ ಮುಂದುವರಿದರೆ ನಿಯಮ ಮೀರುವ ಅಭ್ಯರ್ಥಿಗಳು/ಸ್ಟಾರ್‌ ಪ್ರಚಾರಕರು/ ರಾಜಕೀಯ ನಾಯಕರನ್ನು ಯಾವುದೇ ಸೂಚನೆ ಇಲ್ಲದೆ ಅಂತಹ ಸಭೆಗಳಿಂದ ನಿಷೇಧಿಸಬೇಕಾಗುತ್ತದೆ ಎಂದು ಆಯೋಗ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

ದೇಶದಲ್ಲಿ ಕಳೆದ ಎರಡು ತಿಂಗಳಿನಿಂದ ಕೊರೋನಾ ಎರಡನೇ ಅಲೆ ಕಾಣಿಸಿಕೊಂಡಿದ್ದು, ಸೋಂಕಿನ ಪ್ರಮಾಣ 13 ಪಟ್ಟು ಹೆಚ್ಚಳವಾಗಿದೆ.