ನವದೆಹಲಿ(ಅ.06): ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ 15 ವರ್ಷದ ಆಡಳಿತದ ವಿರುದ್ಧ ಉಂಟಾಗಿರುವ ಆಡಳಿತ ವಿರೋಧಿ ಅಲೆ 2005ರಲ್ಲಿ ಲಾಲು ಪ್ರಸಾದ್‌ ಯಾದವ್‌ ಅವರು ಎದುರಿಸಿದ ಆಡಳಿತ ವಿರೋಧಿ ಅಲೆಗಿಂತಲೂ ಬಲವಾಗಿದೆ.

ಬಿಹಾರದ ಜನರು ನಿತೀಶ್‌ ಕುಮಾರ್‌ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಆಗಿ ನೋಡಲು ಬಯಸುವುದಿಲ್ಲ ಎಂದು ಎಲ್‌ಜೆಪಿ ಅಧ್ಯಕ್ಷ ಚಿರಾಗ್‌ ಪಾಸ್ವಾನ್‌ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಒಂದು ವೇಳೆ ಜೆಡಿಯುಗೆ ಮತ ಹಾಕಿದರೆ ಜನರು ವಲಸೆ ಹೋಗುವ ಪರಿಸ್ಥಿತಿ ಎದುರಾಗಬಹುದು ಎಂದು ಹೇಳಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ಪಾಸ್ವಾನ್‌, ಹಾಲಿ ಸರ್ಕಾರವನ್ನು ಮುಂದುವರಿಸಲು ನೆರವಾದ ಅಪರಾಧಿತನ ಕಾಡಬಾರದು ಎಂಬ ಕಾರಣಕ್ಕೆ ಆಡಳಿತ ಪಕ್ಷದ ಜೊತೆಗಿನ ಮೈತ್ರಿಯಿಂದ ಹೊರಬಂದಿದ್ದೇನೆ. ನಿತೀಶ್‌ ಕುಮಾರ್‌ ಅವರ ಆಡಳಿತ ಏನನ್ನೂ ಮಾಡಿಲ್ಲ. ಅವರ ಮೇಲೆ ನನಗೆ ನಂಬಿಕೆ ಇಲ್ಲ. ಚುನಾವಣೆಯ ಬಳಿಕ ತಮ್ಮ ಪಕ್ಷ ಬಿಜೆಪಿ ನೇತೃತ್ವದ ಸರ್ಕಾರವನ್ನು ಬಯಸುತ್ತದೆ ಎಂದು ಹೇಳಿದ್ದಾರೆ.