ಕರ್ನಾಟಕ ಹಾಗೂ ತಮಿಳನಾಡು ನಡುವಿನ ಪೆನ್ನಾರ್‌ ನದಿ ನೀರು ಹಂಚಿಕೆ ವಿವಾದದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಡಿಸೆಂಬರ್‌ 14ಕ್ಕೆ ಮುಂದೂಡಿದೆ. ಪೆನ್ನಾರ್‌ ನದಿ ವಲಯದಲ್ಲಿ ಕರ್ನಾಟಕದ ಕಾಮಗಾರಿಗಳಿಗೆ ಆಕ್ಷೇಪಿಸಿ ತಮಿಳುನಾಡು ಸುಪ್ರೀಂ ಕೋರ್ಟ್‌ ಕದ ತಟ್ಟಿತ್ತು. 

ವರದಿ: ಡೆಲ್ಲಿ ಮಂಜು, ಏಷ್ಯಾನೆಟ್‌ ಸುವರ್ಣನ್ಯೂಸ್‌

ನವದೆಹಲಿ (ನ.16): ದಕ್ಷಿಣ ಪಿನಾಕಿನಿ ಅರ್ಥಾತ್ ಪೆನ್ನಾರ್ ನದಿ ವ್ಯಾಜ್ಯದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಡಿಸೆಂಬರ್ 14ಕ್ಕೆ ಮುಂದೂಡಿದೆ. ಪೆನ್ನಾರ (ದಕ್ಷಿಣ ಪಿನಾಕಿನಿ) ನದಿಯ ಕಣಿವೆಯಲ್ಲಿ ಕರ್ನಾಟಕ ರಾಜ್ಯವು ಕೈಗೊಂಡಿರುವ ಮಾರ್ಕಾಂಡೇಯ ನದಿಗೆ ಅಡ್ಡಲಾಗಿ ಚೆಕ್ ಡ್ಯಾಂ, ಯಲ್ಲಮಲ್ಲಪ್ಪ ಚೆಟ್ಟಿ ಕೆರೆಯಿಂದ ಹೊಸಕೋಟೆ ಕೆರೆಯವರೆಗೆ ಕಾಮಗಾರಿ ಚಟುವಟಿಕೆ, ಬ್ಯಾಳಹಳ್ಳಿ ಗ್ರಾಮದ ಹತ್ತಿರ ಪೊನ್ನೆಯಾರ್ ನದಿಯಿಂದ ನೀರು ಹರಿಸುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಯೋಜನೆಗಳು ಕುರಿತು ತಮಿಳುನಾಡು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿತ್ತು. ಬುಧವಾರ ಈ ಪ್ರಕರಣವು ಸರ್ವೋಚ್ಛ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಟ್ ಅವರು ದಕ್ಷಿಣ ಪಿನಾಕಿನಿ ನದಿಯ ಪೆನ್ನಾರ್ ಕಣಿವೆಗೆ ಸಂಬಂಧಪಟ್ಟಂತೆ ಚರ್ಚಿತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಾತುಕತೆಗೆ ಸಮಿತಿಗೆ ಒಪ್ಪಿಸಲಾಗಿದೆ. ನ್ಯಾಯಾಧೀಕರಣ ರಚನೆ ಕುರಿತಂತೆ ಕೇಂದ್ರ ಸರ್ಕಾರವು ಅಂತಿಮ ನಿರ್ಣಯ ಕೈಗೊಳ್ಳಬೇಕಾಗಿರುವುದರಿಂದ ನಾಲ್ಕು ವಾರಗಳ ಕಾಲಾವಕಾಶ ಅಗತ್ಯ ಇದೆ ಎಂದರು. 

Karnataka Politics: ಕಾಂಗ್ರೆಸ್‌ ಕಾವೇರಿ ಪರ ಹೋರಾಟ ಮಾಡಲಿಲ್ಲ: ದೇವೇಗೌಡ ಟೀಕೆ

ಕೇಂದ್ರ ಸರ್ಕಾರದ ನಿಲುವು ಕೇಳಿದ ನ್ಯಾ.ಎಂ.ಆರ್.ಷಾ ನೇತೃತ್ವದ ದ್ವಿಸದಸ್ಯ ಪೀಠ, ಪ್ರಕರಣದ ವಿಚಾರಣೆ ಯನ್ನು ಡಿಸೆಂಬರ್ 14ಕ್ಕೆ ಮುಂದೂಡಿತು. ಈಗಾಗಲೇ ಮಾತುಕತೆಯ ಸಮಿತಿಯು ಎರಡು ಸಭೆಗಳನ್ನು ನಡೆಸಿದ್ದು, ಈ ಪ್ರಕರಣದಲ್ಲಿ ನ್ಯಾಯಾಧೀಕರಣ ರಚನೆಯ ಅವಶ್ಯಕತೆ ಇಲ್ಲವೆಂದು ಈಗಾಗಲೇ ಕೇಂದ್ರ ಸರ್ಕಾರದ ಸಮಿತಿಯ ಮುಂದೆ ಕರ್ನಾಟಕವು ತನ್ನ ನಿಲುವನ್ನು ಪ್ರತಿಪಾದಿಸಿದೆ.