ವಾಷಿಂಗ್ಟನ್(ಜ.07): ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಬೆಂಬಲಿಗರಿಂದ ನಡೆಯುತ್ತಿರುವ ಪ್ರತಿಭಟನೆ ಮತ್ತು ಹಿಂಸಾಚಾರದ ಬಗ್ಗೆ ಪಿಎಂ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಂಘರ್ಷವನ್ನು ಖಂಡಿಸಿರುವ ಮೋದಿ ಕಾನೂನು ಬಾಹಿರ ಚಟುವಟಿಕೆಗಳ ಮೂಲಕ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ಕೆಡಿಸಲು ಅವಕಾಶ ನೀಡಬಾರದು ಎಂದು ಟ್ವೀಟ್ ಮಾಡಿದ್ದಾರೆ.

ಅಮೆರಿಕದ ಸಂಸತ್ ಭವನದಲ್ಲಿ ಹಿಂಸಾಚಾರ ನಡೆದಿದ್ದು, ಟ್ರಂಪ್ ಬೆಂಬಲಿಗರು ಮತ್ತು ಪೊಲೀಸರ ನಡುವೆ ಸಂಘರ್ಷದ ಬೆನ್ನಲ್ಲೇ ಈ ಘಟನೆಯನ್ನು ಖಂಡಿಸಿ ಟ್ವೀಟ್ ಮಾಡಿರುವ ಪಿಎಂ ಮೋದಿ ‘ವಾಷಿಂಗ್ಟನ್ ಡಿಸಿಯಲ್ಲಿ ಗಲಭೆ ಮತ್ತು ಹಿಂಸಾಚಾರದ ಸುದ್ದಿಯನ್ನು ನೋಡಿ ದುಃಖಿತವಾಗಿದೆ. ಅಧಿಕಾರ ಹಸ್ತಾಂತರವನ್ನು ಸುವ್ಯವಸ್ಥಿತ ಮತ್ತು ಶಾಂತಿಯುತವಾಗಿ ಮುಂದುವರಿಸಬೇಕು. ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಕಾನೂನು ಬಾಹಿರ ಪ್ರತಿಭಟನೆಗಳ ಮೂಲಕ ಬುಡಮೇಲು ಮಾಡಲು ಅವಕಾಶ ನೀಡಬಾರದು’ ಎಂದಿದ್ದಾರೆ.

ಅಮೆರಿಕದ ವಾಷಿಂಗ್ಟನ್ ಡಿಸಿಯ ಸಂಸತ್ ನಲ್ಲಿ ಎಲೆಕ್ಟೋರಲ್ ಮತಗಳನ್ನು ಎಣಿಸುವ ಮತ್ತು ಪ್ರಮಾಣೀಕರಿಸುವ ಪ್ರಕ್ರಿಯೆ ಸಾಗುತ್ತಿರುವ ಮಧ್ಯೆ ಭದ್ರತೆಯನ್ನು ಉಲ್ಲಂಘಿಸಿ ಕ್ಯಾಪಿಟೋಲ್ ಕಟ್ಟಡಕ್ಕೆ ನುಗ್ಗಿದ ನೂರಾರು ಪ್ರತಿಭಟನಾಕಾರರು ಧಾಂದಲೆ ನಡೆಸಿದ್ದರು. ಇವರನ್ನು ತಡೆಯಲು ಮುಂದಾದ ಪೊಲೀಸರ ಜೊತೆ ಸಂಘರ್ಷವೇರ್ಪಟ್ಟಿದ್ದು, ಘಟನೆಯಲ್ಲಿ ಮಹಿಳೆಯೋರ್ವರು ಮೃತಪಟ್ಟಿದ್ದಾರೆ ಹಾಗೂ ಹಲವರು ಗಾಯಗೊಂಡಿದ್ದಾರೆ.