ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಚಾಲನೆ ಮಾಡುತ್ತಿದ್ದ ಜಾಗ್ವಾರ್ ಲ್ಯಾಂಡ್ ರೋವರ್ ದಕ್ಷಿಣ ದೆಹಲಿಯ ಜಿಲ್ಲಾ ಪೊಲೀಸ್ ಆಯುಕ್ತರ ಕಾರಿಗೆ ಡಿಕ್ಕಿ ಹೊಡೆದಿತ್ತು ಎಂದು ಪೋಲಿಸರು ತಿಳಿಸಿದ್ದಾರೆ 

ನವದೆಹಲಿ (ಮಾ. 13): ಪೇಟಿಎಂ ಸಂಸ್ಥಾಪಕ ಹಾಗೂ ಸಿಇಒ ವಿಜಯ್ ಶೇಖರ್ ಶರ್ಮಾ (Vijay Shekar Sharma) ಅವರನ್ನು ಕಳೆದ ತಿಂಗಳು ದೆಹಲಿ ಪೊಲೀಸರು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಪೇಟಿಎಂ ಸಂಸ್ಥಾಪಕರಾದ ವಿಜಯ್ ಜಾಗ್ವಾರ್ ಲ್ಯಾಂಡ್ ರೋವರ್ ಚಾಲನೆ ವೇಳೆ ದಕ್ಷಿಣ ದೆಹಲಿಯ ಜಿಲ್ಲಾ ಪೊಲೀಸ್ ಆಯುಕ್ತರ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೂರಿನ ಪ್ರಕಾರ, ಫೆಬ್ರವರಿ 22 ರಂದು ಮದರ್ ಇಂಟರ್‌ನ್ಯಾಶನಲ್ ಸ್ಕೂಲ್ ಹೊರಗೆ ಡಿಸಿಪಿ ಬೆನಿಟಾ ಮೇರಿ ಜೈಕರ್ (Benita Mary Jaiker) ಅವರ ಕಾರಿಗೆ ವೇಗವಾಗಿ ಬಂದ ಲ್ಯಾಂಡ್ ರೋವರ್ ಡಿಕ್ಕಿ ಹೊಡೆದಿದೆ. ಆದರೆ ಶರ್ಮಾ ವಾಹನ ನಿಲ್ಲಿಸದೆ ಮುಂದೆ ಸಾಗಿದ್ದರು . 

ಡಿಸಿಪಿ ಅವರ ಕಾರನ್ನು ಆಕೆಯ ಚಾಲಕ, ಕಾನ್‌ಸ್ಟೆಬಲ್ ದೀಪಕ್ ಕುಮಾರ್ ಓಡಿಸುತ್ತಿದ್ದರು. ಸಿಇಒ ವಿಜಯ್ ಶೇಖರ್ ಶರ್ಮಾ ಕಾರು ಡಿಕ್ಕಿ ಹೊಡೆದಾಗ ಚಾಲಕ ಕುಮಾರ್ ಅವರು ಲ್ಯಾಂಡ್ ರೋವರ್ ನಂಬರನ್ನು ನಮೂದಿಸಿದರು ಮತ್ತು ತಕ್ಷಣ ಡಿಸಿಪಿಗೆ ಮಾಹಿತಿ ನೀಡಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: 'ಹೊಸ ಗ್ರಾಹಕರನ್ನು ಸೇರಿಸಬೇಡಿ' ಪೇಟಿಎಂ ಪೇಮೆಂಟ್ ಬ್ಯಾಂಕ್ ಮೇಲೆ ನಿಷೇಧ!

ವಿಜಯ್ ಶಂಕರ್ ಶರ್ಮಾ ಕಾರು:  ಪ್ರಾಥಮಿಕ ತನಿಖೆಯ ನಂತರ, ಕಾರನ್ನು ಗುರುಗ್ರಾಮ್‌ನ ಕಂಪನಿ ಹೆಸರಿನಲ್ಲಿ ನೋಂದಾಯಾಗಿರುವುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದರು. ಬಳಿಕ ಕಾರು ದಕ್ಷಿಣ ದೆಹಲಿಯಲ್ಲಿ ನೆಲೆಸಿರುವ ವಿಜಯ್ ಶಂಕರ್ ಶರ್ಮಾ ಅವರ ಬಳಿ ಇದೆ ಎಂದು ಕಂಪನಿಯ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದರು. ದೆಹಲಿ ಪೊಲೀಸ್ ವಕ್ತಾರ ಸುಮನ್ ನಲ್ವಾ, ಪೊಲೀಸರು ವಿಜಯ್ ಶೇಖರ್ ಶರ್ಮಾ ಅವರನ್ನು ಅತಿವೇಗ ಅಥವಾ ನಿರ್ಲಕ್ಷ್ಯದ ಚಾಲನೆ ಪ್ರಕರಣದಲ್ಲಿ ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಖಚಿತಪಡಿಸಿದ್ದಾರೆ. 

ಪೇಟಿಎಂ ಪೇಮೆಂಟ್ ಬ್ಯಾಂಕ್ ಮೇಲೆ ನಿಷೇಧ: ಈ ವಾರದ ಆರಂಭದಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ ವಿಜಯ್ ಶೇಖರ್ ಶರ್ಮಾರ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಮುಂದಿನ ಆದೇಶದವರೆಗೂ ಯಾವುದೇ ಹೊಸ ಗ್ರಾಹಕರನ್ನು ತನ್ನ ಸೇವೆಗೆ ಸೇರಿಸಿಕೊಳ್ಳುವಂತಿಲ್ಲ ಎಂದು ಸೂಚನೆ ನೀಡಿದೆ. "ಬ್ಯಾಂಕಿಂಗ್ ರೆಗ್ಯುಲೇಶನ್ ಆಕ್ಟ್, 1949 ರ ಸೆಕ್ಷನ್ 35 ಎ ಅಡಿಯಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ವಿರುದ್ಧ ಕ್ರಮ" ಎಂದು ತನ್ನ ಸುತ್ತೋಲೆಯ ಲಿಂಕ್ ಅನ್ನು ಹೊಂದಿರುವ ಪ್ರಕಟಣೆಯಲ್ಲಿ ಆರ್ ಬಿಐ ಟ್ವಿಟರ್ ನಲ್ಲಿ ಪ್ರಕಟಿಸಿದೆ.

ಇದನ್ನೂ ಓದಿ:Bengaluru: ಕ್ಯಾಶ್‌ ಬ್ಯಾಕ್‌ ಹೆಸರಲ್ಲಿ ವಂಚಿಸುತ್ತಿದ್ದ Paytm ಮಾಜಿ ನೌಕರನ ಬಂಧನ

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್, 2017ರ ಮೇ 23 ರಂದು ದೇಶದಲ್ಲಿ ತನ್ನ ಕಾರ್ಯಾಚರಣೆಯನ್ನು ಆರಂಭ ಮಾಡಿತ್ತು. ಮಾರ್ಚ್ 9 ರಂದು ಕಂಪನಿ ಸಂಸ್ಥಾಪಕ ವಿಜಯ್ ಶೇಖರ್ ಶರ್ಮ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಜೂನ್ ವೇಳೆಗೆ ಸಣ್ಣ ಹಣಕಾಸು ಬ್ಯಾಂಕ್ (ಎಸ್ಎಫ್ ಬಿ) ಪರವಾನಿಗಿಗಾಗಿ ಆರ್ ಬಿಐಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಅಧ್ಯಕ್ಚ ವಿಜಯ್ ಶೇಖರ್ ವರ್ಮಾ, ಕಂಪನಿಯಲ್ಲಿ ಶೇ. 51ರಷ್ಟು ಪಾಲನ್ನು ಹೊಂದಿದ್ದಾರೆ. 

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವೆಬ್‌ಸೈಟ್ ಪ್ರಕಾರ, ಕಂಪನಿಯು 100 ಮಿಲಿಯನ್ ಕೆವೈಸಿ ಗ್ರಾಹಕರನ್ನು ಹೊಂದಿದೆ ಮತ್ತು ಇದು ಪ್ರತಿ ತಿಂಗಳಿನಲ್ಲಿ 0.4 ಮಿಲಿಯನ್ ಬಳಕೆದಾರರನ್ನು ಸೇರಿಸುತ್ತಿದೆ. "ನಾವು 8 ಮಿಲಿಯನ್‌ಗಿಂತಲೂ ಹೆಚ್ಚು ಫಾಸ್ಟ್‌ಟ್ಯಾಗ್ ಘಟಕಗಳನ್ನು ನೀಡುವುದರೊಂದಿಗೆ ಫಾಸ್ಟ್‌ಟ್ಯಾಗ್‌ನ ಅತಿದೊಡ್ಡ ವಿತರಕರಾಗಿದ್ದೇವೆ" ಎಂದು ವೆಬ್‌ಸೈಟ್ ತಿಳಿಸಿದೆ.