* ಕರಾವಳಿ ಮತ್ತು ಮಲೆನಾಡಿನಲ್ಲಿ ಜನಪ್ರಿಯವಾಗಿರುವ ಕೆಸುವಿನ ಎಲೆಗಳಿಂದ ತಯಾರಿಸುವ ಸ್ವಾದಿಷ್ಟ ಪತ್ರೊಡೆ* ಆಯುಷ್‌ ಸಾಂಪ್ರದಾಯಿಕ ಖಾದ್ಯ ಪಟ್ಟಿಯಲ್ಲಿ ಪತ್ರೊಡೆ* 26 ಸಾಂಪ್ರದಾಯಿಕ ಪಾಕವಿಧಾನಗಳಲ್ಲಿ ಈ ಪತ್ರೊಡೆ ಕೂಡ ಒಂದಾಗಿದೆ

ಮಂಗಳೂರು(ಜು.02): ಕರಾವಳಿ ಮತ್ತು ಮಲೆನಾಡಿನಲ್ಲಿ ಜನಪ್ರಿಯವಾಗಿರುವ ಕೆಸುವಿನ ಎಲೆಗಳಿಂದ ತಯಾರಿಸುವ ಸ್ವಾದಿಷ್ಟಪತ್ರೊಡೆ ತಿನಿಸನ್ನು ಕೇಂದ್ರ ಆಯುಷ್‌ ಸಚಿವಾಲಯವು ‘ಆಯುಷ್‌ ಮೆಡಿಸಿನ್‌ ಪ್ರಕಾರದ ಸಾಂಪ್ರದಾಯಿಕ ಆಹಾರ’ ಎಂಬುದಾಗಿ ಗುರುತಿಸಿದೆ.

ಕಿರುಪುಸ್ತಕವನ್ನು ಸಿದ್ಧಪಡಿಸುವಾಗ ಸಚಿವಾಲಯವು ಆಯ್ಕೆ ಮಾಡಿದ 26 ಸಾಂಪ್ರದಾಯಿಕ ಪಾಕವಿಧಾನಗಳಲ್ಲಿ ಈ ಪತ್ರೊಡೆ ಕೂಡ ಒಂದಾಗಿದೆ. ಈ ಪುಸ್ತಕವೀಗ ಇಲಾಖೆಯ ವೆಬ್‌ಸೈಟ್‌ನಲ್ಲೂ ಲಭ್ಯ. ಅದರಲ್ಲಿ ಪ್ರತಿ ಭಕ್ಷ್ಯದ ಛಾಯಾಚಿತ್ರಗಳೊಂದಿಗೆ ಅವುಗಳ ತಯಾರಿಕೆಯ ವಿಧಾನ, ಆರೋಗ್ಯ ಪ್ರಯೋಜನಗಳನ್ನೂ ವಿವರಿಸಲಾಗಿದೆ.

ಪತ್ರೊಡೆಯನ್ನು ಕರಾವಳಿ ಮಾತ್ರವಲ್ಲ, ಕೇರಳ, ಮಹಾರಾಷ್ಟ್ರ, ಗೋವಾ, ಹಿಮಾಚಲ ಪ್ರದೇಶ, ಗುಜರಾತ್‌ ಮತ್ತು ಈಶಾನ್ಯ ಪ್ರದೇಶದ ಭಾಗಗಳಲ್ಲಿಯೂ ತಯಾರಿಸಲಾಗುತ್ತದೆ.

ಕೆಸುವಿನ ಎಲೆಗಳಲ್ಲಿ ಕಬ್ಬಿಣ ಸಮೃದ್ಧವಾಗಿದ್ದು, ಹಿಮೋಗ್ಲೋಬಿನ್‌ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸಂ​ಧಿವಾತದಂತಹ ದೀರ್ಘಕಾಲದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಎಲೆಗಳಲ್ಲಿ ಗಮನಾರ್ಹ ಪ್ರಮಾಣದ ವಿಟಮಿನ್‌ ಸಿ ಮತ್ತು ಬೀಟಾ ಕ್ಯಾರೋಟಿನ್‌ ಇದೆ ಎಂದು ಸಚಿವಾಲಯ ತಿಳಿಸಿದೆ.

ಪಟ್ಟಿಯಲ್ಲಿದೆ ಕರ್ನಾಟಕದ ಹಲವು ರೆಸಿಪಿ

ನವದೆಹಲಿ: ಕೇಂದ್ರ ಆಯುಷ್‌ ಇಲಾಖೆ ಬಿಡುಗಡೆ ಮಾಡಿರುವ ಆರೋಗ್ಯಕರವಾದ ಮತ್ತು ಔಷಧೀಯ ಗುಣ ಉಳ್ಳ ಸಾಂಪ್ರಾದಾಯಿಕ ಅಡುಗೆ ರೆಸಿಪಿಗಳ ಪಟ್ಟಿಯಲ್ಲಿ ಕರ್ನಾಟಕದಲ್ಲಿ ಹೆಚ್ಚಾಗಿ ಬಳಸುವ ಹಲವು ಅಡುಗೆಗಳೂ ಸೇರಿವೆ. ಅವುಗಳೆಂದರೆ

* ಪತ್ರೊಡೆ, ರಾಗಿ ಮತ್ತು ಬಾಳೆ ಹಣ್ಣಿನ ಜ್ಯೂಸ್‌

* ಕೆಂಪಕ್ಕಿಯ ಗಂಜಿ, ಬೀಟ್ರೂಟ್‌ ಹಲ್ವಾ

* ತಿಳಿ ಮಜ್ಜಿಗೆ, ಗೆಣಸಲೆ (ರೈಸ್‌ ಪಾನ್‌ ಕೇಕ್‌)

* ಸೋರೆಕಾಯಿ ಕಡುಬು, ಮೆಣಸಿಕಾಯಿ ಚಟ್ನಿ

* ನವಣೆ ನುಗ್ಗೆ ಸೊಪ್ಪಿನ ದೋಸೆ