ಉತ್ತರ ಪ್ರದೇಶದ ಮಹರಾಜ್‌ಗಂಜ್‌ ಪ್ರದೇಶದ ಪೊಲೀಸ್‌ ಠಾಣೆಯ ಕಾನ್ಸ್‌ಸ್ಟೇಬಲ್‌ ತಮ್ಮ ಎಸ್‌ಪಿಗೆ ಬರೆದ ಪತ್ರ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ರಜೆ ಇಲ್ಲದೆ ಇರೋ ಕಾರಣ ತನ್ನ ಪತ್ನಿ ಸಿಟ್ಟಾಗಿದ್ದಾಳೆ ಅದಕ್ಕಾಗಿ ರಜೆ ಬೇಕು ಎಂದು ಅವರು ಈ ಪತ್ರದಲ್ಲಿ ಬರೆದಿದ್ದಾರೆ. 

ನವದೆಹಲಿ (ಜ.10): ನವವಿವಾಹಿತ ದಂಪತಿಗಳು ಒಟ್ಟಿಗೆ ಹೆಚ್ಚು ಸಮಯ ಕಳೆಯಲು ಬಯಸುವುದು ಸಹಜ. ಆದರೆ, ಇಬ್ಬರೂ ಉದ್ಯೋಗಿಗಳಾಗಿದ್ದರೆ ಈ ಬೇಡಿಕೆಗಳನ್ನು ತಕ್ಷಣವೇ ಸಾಧಿಸೋದು ಕಷ್ಟವಾಗಬಹುದು. ಕೆಲವೊಂದು ಕೆಲಸಗಳಲ್ಲಿ ರಜೆಗಳು ಸರಾಗವಾಗಿ ಸಿಕ್ಕರೆ, ಇನ್ನೂ ಕೆಲವು ಉದ್ಯೋಗಗಳಲ್ಲಿ ರಜೆ ಅನ್ನೋದೇ ಕನಸಿನ ಮಾತಾಗಿ ಇರುತ್ತದೆ. ಇದರಲ್ಲಿ ಪೊಲೀಸ್‌ ಕೆಲಸ ಕೂಡ ಒಂದು. ಪೊಲೀಸ್‌ ಕೆಲಸದಲ್ಲಿ ಕೆಲವು ನಿರ್ದಿಷ್ಟವಾದ ರಜೆಗಳು ಇರುತ್ತದೆ. ಆದರೆ, ಅದಕ್ಕಿಂತ ಹೆಚ್ಚಿನ ರಜೆ ಬೇಕಾದಲ್ಲಿ ತೆಗೆದುಕೊಳ್ಳುವುದು ಬಹಳ ಕಷ್ಟ. ಉತ್ತರ ಪ್ರದೇಶದ ಪೊಲೀಸ್ ಪೇದೆಯೊಬ್ಬರು ಇದೇ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ನಲ್ಲಿ ಕಾನ್‌ಸ್ಟೆಬಲ್‌ಯೊಬ್ಬರು ಎಸ್‌ಪಿಗೆ ಸಲ್ಲಿಸಿದ ರಜೆ ಕೋರಿಕೆ ಆನ್‌ಲೈನ್‌ನಲ್ಲಿ ದೊಡ್ಡಮಟ್ಟದಲ್ಲಿ ವೈರಲ್ ಆಗುತ್ತಿದೆ. ಪೊಲೀಸ್‌ ವರಿಷ್ಠಾಧಿಕಾರಿಗೆ ಭಾವನಾತ್ಮಕವಾಗಿ ಅವರು ಪತ್ರ ಬರೆದಿದ್ದು, ರಜೆ ಇಲ್ಲದೇ ಇರುವ ಕಾರಣ ಪತ್ನಿ ಬಹಳ ಕೋಪಗೊಂಡಿದ್ದಾಳೆ. ಸ್ವಲ್ಪ ಸಮಯ ಆಕೆಯೊಂದಿಗೆ ದಿನ ಕಳೆಯಬೇಕು ಹಾಗಾಗಿ ತಮಗೆ ರಜೆಯ ಅಗತ್ಯವಿದೆ ಎಂದು ಅವರು ತಮ್ಮ ಪತ್ರದಲ್ಲಿ ಬರೆದಿದ್ದಾರೆ. ಈ ಪತ್ರವೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ತನಗೆ ಯಾವುದೇ ರಜೆ ಸಿಗದ ಕಾರಣ ಕೋಪಗೊಂಡಿರುವ ಪತ್ನಿ ತನ್ನೊಂದಿಗೆ ಫೋನ್‌ನಲ್ಲಿ ಕೂಡ ಮಾತನಾಡುತ್ತಿಲ್ಲ ಎಂದು ಅವರು ತಮ್ಮ ಅರ್ಜಿಯಲ್ಲಿ ಬರೆದುಕೊಂಡಿದ್ದಾರೆ. ಪ್ರತಿ ಬಾರಿ ನಾನು ಆಕೆಯೊಂದಿಗೆ ಮಾತನಾಡಲು ಫೋನ್‌ ಮಾಡಿದಾಗ ಆಕೆ ಫೋನ್‌ಅನ್ನು ಆಕೆಯ ತಾಯಿಗೆ ನೀಡುತ್ತಿದ್ದಳು. ಎಷ್ಟು ಬಾರಿ ಪ್ರಯತ್ನಪಟ್ಟರೂ ಆಕೆಯೊಂದಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಕಳೆದ ತಿಂಗಳಷ್ಟೇ ಮದುವೆಯಾಗಿರುವ ಕಾನ್ಸ್‌ಸ್ಟೇಬಲ್‌ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ರಜೆ ಕೋರಿ ಎಸ್ಪಿಗೆ ನೀಡಿರುವ ಅರ್ಜಿ ಪತ್ರದಲ್ಲಿ ಕಳೆದ ತಿಂಗಳಷ್ಟೇ ಮದುವೆಯಾಗಿರುವುದಾಗಿ ಕಾನ್ಸ್‌ಸ್ಟೇಬಲ್‌ ಬರೆದಿದ್ದರು. ಮದುವೆಯ ಬಳಿಕ ಪತ್ನಿಯನ್ನು ಮನೆಯಲ್ಲಿ ಬಿಟ್ಟು ನೌತನ್ವಾ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. ಮದುವೆಯ ನಂತರವೂ ಜೊತೆಯಾಗಿ ಸಮಯ ಕಳೆಯಲು ರಜೆ ಹಾಕದೇ ಇರುವುದು ಪತ್ನಿಯ ಸಿಟ್ಟಿಗೆ ಕಾರಣವಾಗಿದೆ.

ಮದುವೆಯಾದ ಒಂದು ತಿಂಗಳಿಗೆ ಬಿಟ್ಟುಹೋದ ವಧು, ಡೈವೋರ್ಸ್‌ ಜೊತೆ ಮನಿ ರೀಫಂಡ್‌ ಕೇಳಿದ ವರ!

ಹಲವು ಬಾರಿ ಕರೆ ಮಾಡಿದರೂ ಆಕೆ ತನ್ನೊಂದಿಗೆ ಮಾತನಾಡುತ್ತಿಲ್ಲ ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. "ನನ್ನ ಸೋದರಳಿಯನ ಹುಟ್ಟುಹಬ್ಬದಂದು ನಾನು ಮನೆಗೆ ಬರುತ್ತೇನೆ ಎಂದು ನಾನು ನನ್ನ ಹೆಂಡತಿಗೆ ಭರವಸೆ ನೀಡಿದ್ದೇನೆ. ದಯವಿಟ್ಟು ನನಗೆ ಏಳು ದಿನಗಳ ಕ್ಯಾಶುಯಲ್ ರಜೆಯನ್ನು ನೀಡಿ, ಅಂದರೆ, ಜನವರಿ 10 ರಿಂದ ಸಿಎಲ್‌ ನೀಡಿದರೆ ನಾನು ನಿಮಗೆ ಕೃತಜ್ಞರಾಗಿರುತ್ತೇನೆ' ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.

ಪೊಲೀಸ್‌ ಅಧಿಕಾರಿ ಖಾತೆಗೆ ಬಂತು 10 ಕೋಟಿ!; ಹಣ ತೆಗೆಯೋದ್ರೊಳಗೆ ಅಕೌಂಟ್‌ ಫ್ರೀಜ್‌ ಮಾಡಿದ ಬ್ಯಾಂಕ್‌

ಈ ರಜೆ ಅರ್ಜಿಯನ್ನು ಓದಿದ ನಂತರ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕಾನ್ಸ್‌ಟೇಬಲ್‌ಗೆ ಐದು ದಿನಗಳ ಕ್ಯಾಶುಯಲ್ ರಜೆಯನ್ನು ಅನುಮೋದನೆ ಮಾಡಿದ್ದಾರೆ. ಹೆಚ್ಚುವರಿ ಎಸ್ಪಿ ಅತೀಶ್ ಕುಮಾರ್ ಸಿಂಗ್ ಈ ಕುರಿತಾಗಿ ಮಾತನಾಡಿದ್ದು, ಕರ್ತವ್ಯದಲ್ಲಿರುವ ಪೊಲೀಸ್ ಅಧಿಕಾರಿಗಳಿಗೆ ಅವರ ಅಗತ್ಯಕ್ಕೆ ಅನುಗುಣವಾಗಿ ರಜೆ ನೀಡಲಾಗುತ್ತದೆ. ಎಲ್ಲರ ಲಭ್ಯತೆ ನೋಡಿಕೊಂಡು ಅಗತ್ಯ ಇದ್ದವರಿಗೆ ರಜೆ ನೀಡಲಾಗುತ್ತದೆ. ಸಿಬ್ಬಂದಿಯಲ್ಲಿ ಎಲ್ಲರೂ ಏಕಕಾಲದಲ್ಲಿ ಅಲಭ್ಯರಾಗಬಾರದು ಎನ್ನುವ ಎಚ್ಚರಿಕೆಯನ್ನು ಈ ವೇಳೆ ನೋಡುತ್ತೇವೆ ಎಂದು ಹೇಳಿದ್ದಾರೆ.