ಹರಿದ್ವಾರ(ಜೂ.23): ಯೋಗ ಗುರು ರಾಮ್‌ ದೇವ್ ಅವರ ಪತಂಜಲಿ ಆಯುರ್ವೇದ ಕಂಪನಿಯು ಕೊರೋನಾ ವೈರಸ್ ಸೋಂಕಿತರಿಗೆ ಚಿಕಿತ್ಸೆಗೆ ನೆರವಾಗುವ ಕೊರೋನಿಲ್ ಔಷಧವನ್ನು ಇಂದು ಬಿಡುಗಡೆ ಮಾಡಲಿದೆ.

ಪತಂಜಲಿ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆಚಾರ್ಯ ಬಾಲಕೃಷ್ಣ ಕೊರೋನಾ ವೈರಸ್ ನಿರ್ಮೂಲನೆ ಔಷಧವನ್ನು ಕಂಪನಿ ಕಂಡುಹಿಡಿದಿರುವುದಾಗಿ ತಿಳಿಸಿದ್ದರು. ಅಶ್ವಗಂಧ, ತುಳಸಿ, ಗಿಲೋಯ್ ಸೇರಿಸಿ ಮಾಡುವ ಮಿಶ್ರಣದಿಂದ ಕೊರೋನಿಲ್ ತಯಾರಿಸಿದ್ದು, ಶೇ 100ರಷ್ಟು ಗುಣಮುಖರಾಗುವ ಸಾಧ್ಯತೆ ಇದೆ ಎಂದು ರಾಮ್‌ದೇವ್ ತಿಳಿಸಿದ್ದಾರೆ.

ಕೊರೋನಾಗೆ ಪತಂಜಲಿಯಿಂದ ಔಷಧ!

ಕೊರೋನಾ ವೈರಸ್‌ಗೆ ಆಯುರ್ವೇದದಲ್ಲಿ ಮೊದಲ ಔಷಧ ಬಿಡುಗಡೆ ಮಾಡಲು ಹೆಮ್ಮೆಯಾಗುತ್ತಿದೆ. ಮಂಗಳವಾರ ಮರಧ್ಯಾಹ್ನ ಈ ಔಷಧ ಬಿಡುಗಡೆಗೊಳಿಸಲಾಗುತ್ತದೆ ಎಂದು ಬಾಲಕೃಷ್ಣ ಅವರು ಟ್ವೀಟ್ ಮಾಡಿದ್ದಾರೆ.

ಈ ಔಷಧಿ 5-14 ದಿನಗಳಲ್ಲಿ ಕೊರೋನಾ ಬಾಧಿತರನ್ನು ಗುಣಮುಖ ಮಾಡಲಿದೆ. ಕೊರೋನಾ ವೈರಸ್‌ ಕಾಣಿಸಿಕೊಂಡಾಗ ನಾವು ವಿಜ್ಞಾನಿಗಳ ಒಂದು ತಂಡವನ್ನು ರಚಿಸಿದ್ದೆವು.

ಮೊದಲು ವೈರಸ್‌ ವಿರುದ್ಧ ಹೋರಾಡುವ ಮತ್ತು, ಅದು ದೇಹದಲ್ಲಿ ಹರಡದಂತೆ ತಡೆಯುವ ಸಾಧ್ಯತೆಯನ್ನು ನೋಡಲಾಯಿತು. ನಂತರ ನೂರಕ್ಕೂ ಹೆಚ್ಚು ಕೊರೋನಾ ಪ್ರಕರಣಗಳನ್ನು ಅಧ್ಯಯನ ಮಾಡಿ ಶೇ 100ರಷ್ಟು ಪಾಸಿಟಿವ್ ಪ್ರತಿಕ್ರಿಯೆ ಲಭ್ಯವಾಗಿದೆ ಎಂದಿದ್ದಾರೆ.

ಪತಂಜಲಿ ಆಸ್ಪತ್ರೆಯಲ್ಲಿದ್ದ ಇಬ್ಬರು ಕೊರೋನಾ ಸೋಂಕಿತರು ಬಹುತೇಕ ಗುಣಮುಖ

ಔಷಧವನ್ನು ತೆಗೆದುಕೊಂಡ ರೋಗಿಗಳು 4ರಿಂದ 15ದಿನದಲ್ಲಿ ಗುಣಮುಖರಾಗಿದ್ದು, ಪರೀಕ್ಷೆಯಲ್ಲೂ ಕೊರೋನಾ ನೆಗೆಟಿವ್ ಬಂದಿದೆ. ಹೀಗಾಗಿ ಆಯುರ್ವೇದ ಔಷಧದ ಮೂಲಕ ಕೊರೋನಾ ಚಿಕಿತ್ಸೆ ಸಾಧ್ಯ ಎಂದು ನಾವು ಹೇಳುತ್ತೇವೆ. ಮುಂದಿನ ನಾಲ್ಕೈದು ದಿನಗಳಲ್ಲಿ ಈ ಸಂಬಂಧ ಡಾಟಾ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ.