ಜೋಧ್‌ಪುರದಿಂದ ಬೆಂಗಳೂರಿಗೆ ಹೊರಟ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನೊರ್ವ ತುರ್ತು ನಿರ್ಗಮನ ದ್ವಾರ ತೆರೆದ ಘಟನೆ ನಡೆದಿದೆ. ಪ್ರಯಾಣಿಕನನ್ನು ವಶಕ್ಕೆ ಪಡೆದು ಭದ್ರತಾ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಈ ಘಟನೆಯಿಂದಾಗಿ ವಿಮಾನ ಟೇಕ್ ಆಫ್ ಆಗಲು 20 ನಿಮಿಷ ವಿಳಂಬವಾಗಿದೆ.

ಇಂಡಿಗೋ ವಿಮಾನ ಟೇಕಾಫ್ ಆಗುವ ಮೊದಲು ಪ್ರಯಾಣಿಕನೋರ್ವ ವಿಮಾನದ ತುರ್ತು ನಿರ್ಗಮನ ದ್ವಾರವನ್ನು ತೆರೆದ ಆಘಾತಕಾರಿ ಘಟನೆ ನಡೆದಿದೆ. ಇದರಿಂದ ವಿಮಾನದಲ್ಲಿ ಕೋಲಾಹಲ ಉಂಟಾಗಿದ್ದು, ಕೂಡಲೇ ಪೈಲಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿ ಮತ್ತೆ ಪ್ರಮಾಣಿತ ವಿಮಾನ ಕಾರ್ಯಾಚರಣಾ ಪ್ರೋಟೋಕಾಲ್‌ಗಳನ್ನು ಆರಂಭಿಸುವಂತೆ ಮಾಡಿತ್ತು. ಜೊತೆಗೆ ವಿಮಾನದ ತುರ್ತು ನಿರ್ಗಮನ ದ್ವಾರವನ್ನು ತೆಗೆದ ವ್ಯಕ್ತಿಯನ್ನು ಕೂಡಲೇ ವಿಮಾನದ ಸಿಬ್ಬಂದಿ ವಶಕ್ಕೆ ಪಡೆದು ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ ಹಸ್ತಾಂತರಿಸಿದರು.

ಈ ಇಂಡಿಗೋ ವಿಮಾನ ರಾಜಸ್ಥಾನದ ಜೋಧ್‌ಪುರದಿಂದ ಬೆಂಗಳೂರಿಗೆ ಹೊರಡಲು ಸಿದ್ಧವಾಗಿತ್ತು. ಎಲ್ಲಾ ಪ್ರಯಾಣಿಕರು ವಿಮಾನ ಏರಿದ್ದರು. ಮತ್ತು ಕ್ಯಾಬಿನ್ ಸಿಬ್ಬಂದಿ ವಿಮಾನ ಸುರಕ್ಷತಾ ಕ್ರಮಗಳನ್ನು ಆರಂಭಿಸಿದ್ದರು. ಈ ವಿಮಾನ ಬೆಳಗ್ಗೆ 10.10ಕ್ಕೆ ಟೆಕಾಫ್‌ ಆಗಲು ಸಮಯ ನಿಗದಿಯಾಗಿತ್ತು. ಆದರೆ ಅಷ್ಟರಲ್ಲಿ , ಒಬ್ಬ ಪ್ರಯಾಣಿಕ ಫ್ಲಾಪ್ ಅನ್ನು ಎಳೆದು ತುರ್ತು ನಿರ್ಗಮನ ಬಾಗಿಲನ್ನು ತೆರೆದಿದ್ದಾನೆ. ಇದರಿಂದ ವಿಮಾನದಲ್ಲಿ ಗೊಂದಲ ಸೃಷ್ಟಿಯಾಗಿದ್ದು, ಕೂಡಲೇ ಪೈಲಟ್ ಹಾಗೂ ಕ್ಯಾಬಿನ್ ಸಿಬ್ಬಂದಿ ಬಂದು ಆತನನ್ನು ವಶಕ್ಕೆ ಪಡೆದು ನಂತರ ಪ್ರಮಾಣಿತ ಕಾರ್ಯಾಚರಣಾ ಶಿಷ್ಟಾಚಾರಗಳನ್ನು (standard operating protocols)ಆರಂಭಿಸಿದರು. 

ಹೀಗೆ ವಿಮಾನದ ತುರ್ತು ನಿರ್ಗಮನ ಬಾಗಿಲನ್ನು ತೆರೆದವರನ್ನು ಸಿರಾಜ್ ಕಿದ್ವಾಯಿ ಎಂದು ಗುರುತಿಸಲಾಗಿದೆ. ಇವರು ಆಕ್ಸಿಸ್ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದು, ಅಚಾನಕ್ ಆಗಿ ಫ್ಲಾಪ್ ಎಳೆದಿದ್ದಾಗಿ ಹೇಳಿದ್ದಾರೆ. ಎಮರ್ಜೆನ್ಸಿ ಬಾಗಿಲು ತೆರೆದ ಕೂಡಲೇ ಪೈಲಟ್‌ಗೆ ನೇರ ಸಂದೇಶ ಹೋಗಿದ್ದು, ನಂತರ ಅವರು ಭದ್ರತಾ ಅಧಿಕಾರಿಗಳು ಈ ಪ್ರಯಾಣಿಕನನ್ನು ವಿಮಾನದಿಂದ ಕೆಳಗಿಳಿಸಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂಡಿಗೋ ವಿಮಾನ ಪ್ರಕಟಣೆ ಹೊರಡಿಸಿದ್ದು, 'ಇಂದು, ಜೋಧ್‌ಪುರದಿಂದ ಬೆಂಗಳೂರಿಗೆ ವಿಮಾನ 6E 6033 ಹೊರಡುವ ಮೊದಲು ಸುರಕ್ಷತಾ ಬ್ರೀಫಿಂಗ್ ಸಮಯದಲ್ಲಿ, ಒಬ್ಬ ಪ್ರಯಾಣಿಕ ತುರ್ತು ನಿರ್ಗಮನ ದ್ವಾರವನ್ನು ತೆರೆದಿದ್ದಾನೆ. ತಕ್ಷಣವೇ ವಿಮಾನದ ಸಿಬ್ಬಂದಿ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು ಅನುಸರಿಸಿದರು. ನಂತರ ಪ್ರಯಾಣಿಕನನ್ನು ಕೆಳಗಿಳಿಸಿ ತನಿಖೆಗಾಗಿ ಕಾನೂನು ಜಾರಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು' ಎಂದು ಇಂಡಿಗೋ ಹೇಳಿದೆ.

ಈ ಘಟನೆಯಿಂದ ವಿಮಾನದಲ್ಲಿದ್ದ ಇತರ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ ಮತ್ತು ನಮ್ಮ ಎಲ್ಲಾ ಕಾರ್ಯಾಚರಣೆಗಳಲ್ಲಿ ಸುರಕ್ಷತೆ ಮತ್ತು ಭದ್ರತೆಯ ಅತ್ಯುನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ' ಎಂದು ಅವರು ಹೇಳಿದ್ದಾರೆ. ಘಟನೆಯ ನಂತರ ಜೋಧ್‌ಪುರದ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಸಿಐಎಸ್‌ಎಫ್ ಸಿಬ್ಬಂದಿ ಪ್ರಯಾಣಿಕನನ್ನು ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆಯಿಂದಾಗಿ ವಿಮಾನ ಟೇಕ್ ಆಫ್ ಆಗಲು 20 ನಿಮಿಷ ವಿಳಂಬವಾಗಿದ್ದು, ವಿಮಾನದಲ್ಲಿ ಗದ್ದಲ ಉಂಟಾಯಿತು ಎಂದು ವರದಿಯಾಗಿದೆ.