ನವ​ದೆ​ಹ​ಲಿ(ಮಾ.06): ಇನ್ನೇನು ವಿಮಾನ ಪ್ರಯಾಣ ಆರಂಭಿ​ಸ​ಬೇಕು ಎನ್ನುವ ಹಂತದಲ್ಲಿ ಪ್ರಯಾಣಿಕನೊಬ್ಬ ತನಗೆ ಕೊರೋನಾ ಸೋಂಕು ತಗುಲಿದೆ ಎಂದು ಹೇಳಿರುವ ವಿಚಿತ್ರ ಘಟನೆ ಶುಕ್ರವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಇಂಡಿಗೋ ಸಂಸ್ಥೆಗೆ ಸೇರಿದ ವಿಮಾನ ಶುಕ್ರವಾರ ಮಧ್ಯಾಹ್ನ ಪುಣೆಗೆ ಹೊರಡಲು ಅಣಿಯಾಗಿದ್ದ ವೇಳೆ ತನಗೆ ಕೊರೋನಾ ಸೋಂಕು ತಗುಲಿದೆ ಎಂದು ಹೇಳಿ, ಅದಕ್ಕೆ ಪೂರಕವಾದ ದಾಖಲೆಗಳನ್ನು ವಿಮಾನದ ಸಿಬ್ಬಂದಿಗೆ ತೋರಿಸಿದ್ದ. ಇದರಿಂದ ಒಮ್ಮೆಲೆ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರೂ ಆತಂಕಕ್ಕೆ ಒಳಗಾದರು. ಕೂಡಲೇ ಪೈಲಟ್‌ ವಿಮಾನವನ್ನು ರನ್‌ವೇದಿಂದ ಮರಳಿ ಪಾರ್ಕಿಂಗ್‌ ಜಾಗಕ್ಕೆ ತಂದು ನಿಲ್ಲಿಸಿದರು. ಬಳಿಕ ಸೋಂಕಿತ ವ್ಯಕ್ತಿಯನ್ನು ಕೆಳಗಿಳಿಸಿ ಆತನನ್ನು ಆ್ಯಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.

ಅಲ್ಲದೆ ಸೋಂಕಿತ ವ್ಯಕ್ತಿ ಕುಳಿತಿದ್ದು ಸಾಲು ಮತ್ತು ಅದರ ಹಿಂದು ಹಾಗೂ ಮುಂದಿನ ಸಾಲಿನ ಪ್ರಯಾಣಿಕರನ್ನು ತೆರವುಗೊಳಿಸಿ ಸೀಟುಗಳನ್ನು ಸ್ಯಾನಿಟೈಸ್‌ ಮಾಡಲಾಯಿತು. ಅಲ್ಲದೆ ಸೋಂಕಿನ ಅಕ್ಕಪಕ್ಕ ಕುಳಿತ್ತಿದ್ದ ಪ್ರಯಾಣಿಕರಿಗೂ ಪಿಪಿಪಿ ಕಿಟ್‌ ನೀಡಿ, ಪ್ರಯಾಣ ಮುಕ್ತಾಯ ಆಗುವವರೆಗೂ ಅದನ್ನು ಧರಿಸಿರುವಂತೆ ಸೂಚಿಸಲಾಯ್ತು. ಹೀಗಾಗಿ ವಿಮಾನ ವಿಳಂಬವಾಗಿ ಸಂಚಾರ ಆರಂಭಿಸಿತು.