* ಸಪ್ತಋುಷಿ, ಸಪ್ತ ಸ್ವರ, ಸಪ್ತಬಣ್ಣಗಳ ರೀತಿ ಸಪ್ತಹಂತವೂ ಅದೃಷ್ಟಶಾಲಿ* ಉ.ಪ್ರ: 7 ಹಂತದ ಚುನಾವಣೆಯಿಂದ ಅದೃಷ್ಟ!* 7 ಎಂಬ ಸಂಖ್ಯೆಯೇ ಪವಿತ್ರ: ರಾಜಕೀಯ ಪಕ್ಷಗಳ ಕಲ್ಪನೆ

ಲಖನೌ(ಜ.17): ಉತ್ತರಪ್ರದೇಶ ವಿಧಾನಸಭಾ ಚುನಾವಣೆಯು 7 ಹಂತಗಳಲ್ಲಿ ನಡೆಯಲಿದೆ. ಸಂಖ್ಯೆ 7 ಪವಿತ್ರವಾದುದು. ಇದರಿಂದ ಜಯಶಾಲಿ ಆಗಬಹುದು ಎಂದು ರಾಜ್ಯದ ರಾಜಕೀಯ ಪಕ್ಷಗಳು ಭಾವಿಸುತ್ತಿವೆ. ಸಪ್ತ ಋುಷಿಯಿಂದ ಹಿಡಿದು ಭಾರತೀಯ ಶಾಸ್ತ್ರೀಯ ಸಂಗೀತದ ಮೂಲ ಸ್ವರಗಳು ಏಳು (ಸಪ್ತಸ್ವರ). ಹೀಗಾಗಿ ಈ ಬಾರಿ ವಿಜಯ ನಮ್ಮದೇ ಎಂದು ರಾಜಕೀಯ ಪಕ್ಷಗಳು ವಿಭಿನ್ನ ಕಾರಣ ಮತ್ತು ತರ್ಕವನ್ನು ಮುಂದಿಡುತ್ತಿದ್ದಾರೆ.

Add Asianetnews Kannada as a Preferred SourcegooglePreferred

ಬಿಜೆಪಿ ಹ್ಯಾಟ್ರಿಕ್‌ ವಿಜಯದ ಭರವಸೆಯಲ್ಲಿದ್ದರೆ, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ ಸಹ ಚುನಾವಣೆಯಲ್ಲಿ ಅದೃಷ್ಟತಮ್ಮ ಪರ ಇದೆ ಎಂಬ ವಿಶ್ವಾಸದಲ್ಲಿವೆ. ಬಿಜೆಪಿ ರಾಜ್ಯಸಭಾ ಸಂಸದ ಸಂಜಯ್‌ ಸೇಠ್‌, ‘ಸಂಖ್ಯೆ 7 ಎಂಬುದು ಪವಿತ್ರವಾದುದು. ಕಾಮನಬಿಲ್ಲಿನ ಬಣ್ಣ ಏಳು, ಸಪ್ತ ಋುಷಿ, ಸಂಗೀತರ ಮೂಲ ಸ್ವರಗಳು 7. 2017ರ ವಿಧಾನಸಭಾ ಚುನಾವಣೆ, 2019ರ ಲೋಕಸಭಾ ಚುನಾವಣೆಯೂ 7 ಹಂತದಲ್ಲಿ ನಡೆದಿದ್ದವು. ಎರಡರಲ್ಲೂ ಬಿಜೆಪಿ ಅಭೂತಪೂರ್ವ ಜಯ ಗಳಿಸಿತ್ತು. ಈ ಬಾರಿಯೂ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಬಿಜಿಪಿ 300ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಜಯಗಳಿಸಲಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಇತ್ತ ಸಮಾಜವಾದಿ ಪಕ್ಷದ ಉಪಾಧ್ಯಕ್ಷ ಸುರೇಂದ್ರ ಶ್ರೀವಾಸ್ತವ, ‘7 ಹಂತದ ಚುನಾವಣೆಗೆ ಸಮಾಜವಾದಿ ಪಕ್ಷಕ್ಕೆ ಅದೃಷ್ಟತರಲಿದೆ ಎಂಬುದು ಈ ಬಾರಿ ಸಾಬೀತಾಗಲಿದೆ’ ಎಂದು ಹೇಳಿದ್ದಾರೆ. ಇನ್ನು ಕಾಂಗ್ರೆಸ್‌ ವಕ್ತಾರ ಅಶೋಕ್‌ ಸಿಂಗ್‌, ‘ಬಿಜೆಪಿ ನಾಯಕರು ವಾರದಲ್ಲಿ ಏಳು ದಿನವೂ ಸುಳ್ಳು ಹೇಳುವ ಅಭ್ಯಾಸವನ್ನು ಹೊಂದಿದ್ದಾರೆ. ಹಾಗಾಗಿ ಸೂರ್ಯ ದೇವರ ರಥದ ಏಳು ಕುದುರೆಗಳಿಂದ ಯಾವುದೇ ಆಶೀರ್ವಾದ ಅವರಿಗೆ ಲಭ್ಯವಾಗುವುದಿಲ್ಲ. ‘ಸಪ್ತಋುಷಿಗಳು’ ಈ ಬಾರಿ ಕಾಂಗ್ರೆಸ್‌ಗೆ ಆಶೀರ್ವಾದ ಮಾಡಲಿದ್ದಾರೆ’ ಎಂದು ಹೇಳಿದ್ದಾರೆ.

ಚುನಾವಣಾ ಆಯೋಗ ಉತ್ತರ ಪ್ರದೇಶದಲ್ಲಿ ಫೆ.10ರಿಂದ ಮಾ.7ರ ವರೆಗೆ 7 ಹಂತದಲ್ಲಿ ಚುನಾವಣೆ ನಡೆಸುವುದಾಗಿ ಘೋಷಿಸಿದೆ.