ಡಿಸೆಂಬರ್ನಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಕ್ಷೇತ್ರ ಮರುವಿಂಗಡಣಾ ವಿಧೇಯಕ ಮಂಡನೆಯಾಗುವ ನಿರೀಕ್ಷೆಯಿದೆ. ಈ ವಿಚಾರವಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಜಿದ್ದಾಜಿದ್ದಿ ಹಾಗೂ ಗದ್ದಲ ಏರ್ಪಡುವ ಸಾಧ್ಯತೆಯಿದೆ.
ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಮುಂದಿನ ತಿಂಗಳ ಮೊದಲ ವಾರದಲ್ಲಿ ಆರಂಭ ಆಗುವ ನಿರೀಕ್ಷೆ ಇದ್ದು, ದಿನಾಂಕ ಅಂತಿಮಗೊಳಿಸುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎಂದು ಹೇಳಲಾಗಿದೆ. ಈ ಅಧಿವೇಶನದಲ್ಲಿ ಕ್ಷೇತ್ರ ಮರುವಿಂಗಡಣಾ ಕಾಯ್ದೆ ಹಾಗೂ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(ಎಸ್ಐಆರ್) ಪ್ರಮುಖವಾಗಿ ಚರ್ಚೆಗೆ ಬರಲಿದ್ದು, ಆಡಳಿತ-ಪ್ರತಿಪಕ್ಷಗಳ ನಡುವೆ ತೀವ್ರ ಜಿದ್ದಾಜಿದ್ದಿ ಏರ್ಪಡುವ ನಿರೀಕ್ಷೆ ಇದೆ.
ಮಹಿಳೆಯರಿಗೆ ಸಂಸತ್ತಿನಲ್ಲಿ ಶೇ.33ರಷ್ಟು ಮೀಸಲಾತಿ
ಕೇಂದ್ರ ಸರ್ಕಾರವು ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು 543ರಿಂದ 850ಕ್ಕೆ ಹೆಚ್ಚಿಸುವ ಕ್ಷೇತ್ರ ಮರು ವಿಂಗಡಣಾ ವಿಧೇಯಕ ಮಂಡಿಸಲು ಶತಾಯಗತಾಯ ಪ್ರಯತ್ನಿಸುತ್ತಿದ್ದು, ಈ ಮೂಲಕ 2029ರ ಲೋಕಸಭಾ ಚುನಾವಣೆ ವೇಳೆಗೂ ಮೊದಲೇ ಮಹಿಳೆಯರಿಗೆ ಸಂಸತ್ತಿನಲ್ಲಿ ಶೇ.33ರಷ್ಟು ಮೀಸಲಾತಿ ಅನುಷ್ಠಾನಕ್ಕೆ ತರಲು ಮುಂದಾಗಿದೆ. ಆದರೆ, ಇದಕ್ಕೆ ಈಗಾಗಲೇ ಕಾಂಗ್ರೆಸ್ ಸೇರಿ ಹಲವು ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.
ಕ್ಷೇತ್ರ ಮರುವಿಂಗಡಣಾ ವಿಧೇಯಕ
ಕ್ಷೇತ್ರ ಮರುವಿಂಗಡಣಾ ವಿಧೇಯಕ ಸಂಸತ್ತಿನ ಅಂಗೀಕಾರ ಪಡೆಯಬೇಕಿದ್ದರೆ ಸಂಸತ್ತಿನ ಮೂರನೇ ಎರಡರಷ್ಟು ಬಹುಮತ ಬೇಕಿದೆ. ಸದ್ಯ ಲೋಕಸಭೆಯಲ್ಲಿ ಎನ್ಡಿಎ ಮೈತ್ರಿಕೂಟವು 320 ಸದಸ್ಯ ಬಲ ಹೊಂದಿದೆ. ಹೀಗಾಗಿ ಕ್ಷೇತ್ರ ಮರುವಿಂಗಡಣಾ ವಿಧೇಯಕಕ್ಕೆ ಅಂಗೀಕಾರ ಸಿಗಬೇಕಿದ್ದರೆ ಕೆಲ ಪ್ರತಿಪಕ್ಷಗಳ ಬೆಂಬಲ ಬೇಕೇ ಬೇಕಿದೆ. ಈ ನಿಟ್ಟಿನಲ್ಲಿ ಕಾರ್ಯತಂತ್ರ ಆರಂಭಿಸಿರುವ ಬಿಜೆಪಿಯು ಅಗತ್ಯ ಸಂಖ್ಯಾಬಲ ಒಗ್ಗೂಡಿಸುವ ಪ್ರಯತ್ನ ಮುಂದುವರೆಸಿದೆ.
ಈ ಸಂವಿಧಾನ ತಿದ್ದುಪಡಿ ವಿಧೇಯಕಕ್ಕೆ ಮತದಾನ ನಡೆಯಬೇಕಿದ್ದರೆ ಲೋಕಸಭೆ ಕಲಾಪವು ಸುಗಮವಾಗಿ ನಡೆಯಬೇಕಿರುವುದು ಮುಖ್ಯ. ಆದರೆ, ಎಸ್ಐಆರ್ ವಿಚಾರ ಮುಂದಿಟ್ಟುಕೊಂಡು ಪ್ರತಿಪಕ್ಷಗಳು ತೀವ್ರ ಗದ್ದಲ ನಡೆಸುವ ಸಾಧ್ಯತೆ ಸರ್ಕಾರದ ಪಾಲಿಗೆ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ.
ವಿಶೇಷ ಅಧಿವೇಶನಕ್ಕೂ ಅವಕಾಶ?
ಈ ಹಿಂದೆ ಆಗಸ್ಟ್ 13ರಂದು ಸಂಸತ್ತಿನ ಮುಂಗಾರು ಅಧಿವೇಶನವನ್ನು ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾಗಿದ್ದರೂ ಅಧಿಕೃತವಾಗಿ ಅಂತ್ಯ (ಪ್ರೋರೋಗ್) ಆಗಿಲ್ಲ. ಹೀಗಾಗಿ ಸಂವಿಧಾನ ತಿದ್ದುಪಡಿ ವಿಧೇಯಕಕ್ಕಾಗಿ ವಿಶೇಷ ಅಧಿವೇಶನ ಕರೆಯುವ ಸಾಧ್ಯತೆಯನ್ನೂ ಸರ್ಕಾರ ಮುಕ್ತವಾಗಿರಿಸಿದೆ ಎನ್ನಲಾಗಿದೆ. ಸಾಮಾನ್ಯವಾಗಿ ಯಾವುದೇ ಅಧಿವೇಶನ ಕರೆಯುವ 14 ದಿನಗಳ ಮೊದಲು ನೋಟಿಸ್ ನೀಡಬೇಕಾಗುತ್ತದೆ. ಆದರೆ, ವಿಶೇಷ ಅಧಿವೇಶನಕ್ಕಾಗಿ ಸರ್ವಪಕ್ಷಗಳಿಗೆ ಎರಡು ದಿನಗಳ ಮೊದಲು ನೋಟಿಸ್ ನೀಡಿದರೂ ಸಾಕು.














