ಜೈಪುರ(ಏ.10): ಬೆಂಗಳೂರಿನಿಂದ ಜೈಪುರಕ್ಕೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಜನಿಸಿದ ಮಗುವಿನ ಪೋಷಕರು ಇದೀಗ ಆ ಮಗುವಿನ ಜನ್ಮ ಪ್ರಮಾಣ ಪತ್ರವನ್ನು ಪಡೆಯಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸರ್ಕಾರದ ನಿಯಮದ ಪ್ರಕಾರ ಮಗು ಜನಿಸಿದ 21 ದಿನಗಳ ಒಳಗಾಗಿ ಜನ್ಮ ಪ್ರಮಾಣಪತ್ರವನ್ನು ನೀಡಬೇಕು. ಆದರೆ, ಈ ಪ್ರಕರಣದಲ್ಲಿ ಜನ್ಮ ಪ್ರಮಾಣಪತ್ರವನ್ನು ಯಾರು ನೀಡಬೇಕು ಎಂಬ ಗೊಂದಲ ಇನ್ನೂ ಬಗೆಹರಿದಿಲ್ಲ. ಮಾ.17ರಂದು ವಿಮಾನ ಹಾರಾಟದ ಮಧ್ಯೆ ಮಗುವಿನ ಜನನವಾಗಿತ್ತು. ಬಳಿಕ ಬಳಿಕ ತಾಯಿ ಮತ್ತು ಮಗುವನ್ನು ಜೈಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕೆಲ ದಿನಗಳ ಬಳಿಕ ಮಗುವಿಗೆ ಜನ್ಮ ಪ್ರಮಾಣಪತ್ರ ಪಡೆಯಲು ತಂದೆ ಭೈರೊನ್‌ ಸಿಂಗ್‌ ಮುಂದಾದರು. ಆದರೆ, ಕಚೇರಿಯಿಂದ ಕಚೇರಿಗೆ ಅಲೆದಿದ್ದು ಬಿಟ್ಟರೆ ಜನ್ಮ ಪ್ರಮಾಣಪತ್ರ ಲಭ್ಯವಾಗಿಲ್ಲ. ತಾನು ಮೊದಲು ಸುರಾಜ್‌ಪುರ ಗ್ರಾಮ ಪಂಚಾಯತ್‌ ಕಚೇರಿಗೆ ತೆರಳಿದ್ದೆ. ಅಲ್ಲಿ ಜಾವಾಜಾ ಆಸ್ಪತ್ರೆಯಿಂದ ಪ್ರಮಾಣಪತ್ರ ತರುವಂತೆ ಸೂಚಿಸಲಾಯಿತು.

ಆಸ್ಪತ್ರೆಗೆ ತೆರಳಿದರೆ ವಿಮಾನ ನಿಲ್ದಾಣದಿಂದ ಪ್ರಮಾಣಪತ್ರ ತರುವಂತೆ ತಿಳಿಸಲಾಯಿತು. ಆದರೆ, ವಿಮಾನ ನಿಲ್ದಾಣದ ಸಿಬ್ಬಂದಿಯಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಭೈರೋನ್‌ ಸಿಂಗ್‌ ಹೇಳಿದ್ದಾರೆ.