ಮುಂಬೈ(ಏ.08): ಮೊದಲ ಲಾಕ್ಡೌನ್‌ ವೇಳೆ ಇನ್ನಿಲ್ಲದ ಕಷ್ಟಎದುರಿಸಿ 6 ತಿಂಗಳ ಹಿಂದಷ್ಟೇ ಮಹಾನಗರಿ ಮುಂಬೈಗೆ ಮರಳಿದ್ದ ಲಕ್ಷಾಂತರ ಕಾರ್ಮಿಕರು ಇದೀಗ ಮತ್ತೆ ಆತಂಕದಿಂದ ತವರಿನತ್ತ ಮುಖ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ಭಾರೀ ಪ್ರಮಾಣದಲ್ಲಿ ಸೋಂಕು ವ್ಯಾಪಿಸುತ್ತಿರುವುದು, ಕಫä್ರ್ಯ ಸೇರಿದಂತೆ ನಾನಾ ರೀತಿಯ ಕಠಿಣ ನಿರ್ಬಂಧಗಳಿಂದಾಗಿ ಕಾರ್ಮಿಕರಲ್ಲಿ ಉದ್ಯೋಗ ನಷ್ಟದ ಭೀತಿ ಕಾಡತೊಡಗಿದೆ. ಜೊತೆಗೆ ಮತ್ತೇನಾದರೂ ಪೂರ್ಣ ಲಾಕ್ಡೌನ್‌ ಜಾರಿಯಾದಲ್ಲಿ ಸಮಸ್ಯೆ ಎದುರಿಸಬೇಕಾಗಿ ಬರಬಹುದು ಎಂಬ ಆತಂಕದಲ್ಲಿ ಅವರೆಲ್ಲಾ ದೊಡ್ಡ ಪ್ರಮಾಣದಲ್ಲಿ ತವರು ಸೇರಿದರೆ ಸಾಕು ಎಂಬ ಧಾವಂತಕ್ಕೆ ಬಿದ್ದಿದ್ದಾರೆ. ಇದೇ ಕಾರಣಕ್ಕಾಗಿ ಭಾರೀ ಪ್ರಮಾಣದಲ್ಲಿ ಬಸ್‌, ರೈಲು, ಖಾಸಗಿ ವಾಹನ ಏರಿ ತವರು ರಾಜ್ಯಗಳಿಗೆ ಪ್ರಯಾಣ ಆರಂಭಿಸಿದ್ದಾರೆ.

ಹೀಗಾಗಿ ನೆರೆಯ ರಾಜ್ಯಗಳಿಗೆ ಮುಂಬೈ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಿಂದ ಹೊರಡುವ ಬಸ್‌ ಮತ್ತು ರೈಲುಗಳು ಮುಂದಿನ ಹಲವು ದಿನಗಳ ಕಾಲ ಪೂರ್ಣ ಪ್ರಮಾಣದಲ್ಲಿ ಮುಂಗಡ ಕಾದಿರಿಸಲಾಗಿದೆ.

ಮುಂಬೈನಲ್ಲಿ ಕೊರೋನಾ 2ನೇ ಅಲೆ ಅಬ್ಬರಿಸುತ್ತಿದ್ದು, ಸೋಂಕು ನಿಯಂತ್ರಣಕ್ಕಾಗಿ ಮಹಾರಾಷ್ಟ್ರ ಸರ್ಕಾರ ಲಾಕ್‌ಡೌನ್‌ ರೀತಿಯ ನಿರ್ಬಂಧಗಳನ್ನು ಹೇರಿಕೆ ಮಾಡಿದೆ. ಮುಂಬೈನಲ್ಲಿ ಕಾರ್ಯನಿರ್ವಹಿಸುತ್ತಿರುವವರಲ್ಲಿ ಹೆಚ್ಚಿನವರು ಕರ್ನಾಟಕ, ಹರ್ಯಾಣ, ರಾಜಸ್ಥಾನ, ಗುಜರಾತ್‌, ತೆಲಂಗಾಣ, ಉತ್ತರ ಪ್ರದೇಶ, ಬಿಹಾರ, ಛತ್ತೀಸ್‌ಗಢದವರಾಗಿದ್ದಾರೆ. ಹೋಟೆಲ್‌, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ಕಾರ್ಮಿಕರಿಗೆ ಮುಂಬೈನಲ್ಲಿ ಮತ್ತೊಮ್ಮೆ ತಮ್ಮ ಕೆಲಸ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ತಮ್ಮ ಊರುಗಳತ್ತ ವಲಸೆ ಹೊರಟಿದ್ದಾರೆ.

ವಾಣಿಜ್ಯಿಕ ಕೈಗಾರಿಕೆಗಳು ಏ.30ರ ವರೆಗೆ ಬಂದ್‌ ಆಗಿರುವುದರಿಂದ ಮುಂಬೈನ ಲೋಕಮಾನ್ಯ ತಿಲಕ್‌ ರೈಲ್ವೆ ನಿಲ್ದಾಣ ಮತ್ತು ಛತ್ರಪತಿ ಶಿವಾಜಿ ಮಹಾರಾಜ ರೈಲ್ವೆ ನಿಲ್ದಾಣಗಳ ರಿಸರ್ವೇಶನ್‌ ಕೌಂಟರ್‌ಗಳು ವಲಸೆ ಕಾರ್ಮಿಕರಿಂದ ತುಂಬಿ ತುಳುಕುತ್ತಿವೆ. ಉತ್ತರ ಪ್ರದೇಶ, ಬಿಹಾರಗಳತ್ತ ರೈಲುಗಳು ಕ್ಷಣಾರ್ಧದಲ್ಲಿ ಭರ್ತಿ ಆಗುತ್ತಿವೆ.