* ಹಿಂದಿ ಹೇರಿಕೆ ವಿರುದ್ಧ ಸಚಿವ ಪೊನ್‌ಮುಡಿ ಆಕ್ರೋಶ* ಹಿಂದಿ ಮಾತಾಡೋರು ಪಾನಿಪುರಿ ಮಾರ್ತಾರೆ: ತಮಿಳ್ನಾಡು ಸಚಿವ

ಚೆನ್ನೈ(ಮೇ.14): ‘ಹಿಂದಿ ಮಾತನಾಡುವವರು ಕೊಯಮತ್ತೂರಿನಲ್ಲಿ ಪಾನಿಪುರಿ ಮಾರುತ್ತಾರೆ’ ಎಂದ ತಮಿಳುನಾಡಿನ ಶಿಕ್ಷಣ ಸಚಿವ ಕೆ. ಪೊನ್‌ಮುಡಿ ಹಿಂದಿ ಹೇರಿಕೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಯಮತ್ತೂರಿನ ಭಾರತೀಯಾರ್‌ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ‘ತಮಿಳುನಾಡಿನಲ್ಲಿ ಈಗಾಗಲೇ ದ್ವಿಭಾಷಾ ಪದ್ಧತಿ ಜಾರಿಯಲ್ಲಿದೆ. ಇಂಗ್ಲೀಷ್‌ ಅಂತಾರಾಷ್ಟ್ರೀಯ ಭಾಷೆಯಾದರೆ ತಮಿಳು ಸ್ಥಳೀಯ ಭಾಷೆಯಾಗಿದೆ. ಇಲ್ಲಿ ಹಿಂದಿ ಕಲಿಕೆಯ ಅಗತ್ಯವೇನಿದೆ?’ ಎಂದು ಅವರು ಪ್ರಶ್ನಿಸಿದ್ದಾರೆ.

‘ಹಿಂದಿ ಕಲಿತರೆ ಹೆಚ್ಚಿನ ಉದ್ಯೋಗಾವಕಾಶಗಳು ಸಿಗುತ್ತವೆಂದು ಹೇಳುತ್ತಾರೆ. ಹೋಗಿ ಕೊಯಮತ್ತೂರಿನಲ್ಲಿ ಒಮ್ಮೆ ನೋಡಿ. ಹಿಂದಿ ಮಾತನಾಡುವವರು ಇಲ್ಲಿ ಪಾನಿಪುರಿ ಮಾರುತ್ತಾರೆ’ ಎಂದು ವ್ಯಂಗ್ಯವಾಡಿದ್ದಾರೆ.

‘ತಮಿಳುನಾಡಿನ ವಿದ್ಯಾರ್ಥಿಗಳು ಯಾವುದೇ ಭಾಷೆಯನ್ನು ಕಲಿಯಲೂ ಸಿದ್ಧರಾಗಿದ್ದಾರೆ. ಹೀಗಾಗಿ ಹಿಂದಿಯನ್ನು ಐಚ್ಛಿಕ ಭಾಷೆಯಾಗಿ ಅಧ್ಯಯನಕ್ಕೆ ಅವಕಾಶ ನೀಡಬೇಕೆ ಹೊರತು ಕಡ್ಡಾಯಗೊಳಿಸಬಾರದು’ ಎಂದು ಸಚಿವರು ಆಗ್ರಹಿಸಿದ್ದಾರೆ.

ಹಿಂದಿ ಹೇರಿಕೆಯಿಂದ ದೇಶದಲ್ಲಿ ಬಿರುಕು: ಸೋನು ನಿಗಮ್‌

ಹಿಂದಿಯೇತರ ರಾಷ್ಟ್ರಗಳ ಮೇಲೆ ಹಿಂದಿ ಭಾಷೆ ಹೇರಿಕೆ ವಿವಾದದಲ್ಲಿ ಗಾಯಕ ಸೋನು ನಿಗಮ್‌ ಕೂಡಾ ಧುಮುಕಿದ್ದಾರೆ. ‘ಹಿಂದಿ ಭಾರತದ ರಾಷ್ಟ್ರೀಯ ಭಾಷೆಯಲ್ಲ. ಹಿಂದಿಯೇತರ ನಾಗರಿಕರ ಮೇಲೆ ಒತ್ತಾಯಪೂರ್ವಕವಾಗಿ ಹಿಂದಿ ಕಲಿಯುವಂತೆ ಒತ್ತಡ ಹೇರಿದರೆ ದೇಶದಲ್ಲೇ ಆಂತರಿಕವಾಗಿ ಬಿರುಕು ಮೂಡಲಿದೆ’ ಎಂದಿದ್ದಾರೆ.

ಇತ್ತೀಚೆಗೆ ಬಾಲಿವುಡ್‌ ನಟ ಅಜಯ ದೇವಗನ್‌ ಹಿಂದಿ ರಾಷ್ಟ್ರೀಯ ಭಾಷೆ ಎಂದು ಟ್ವೀಟ್‌ ಮಾಡಿದ್ದರು, ಇದಕ್ಕೆ ಕನ್ನಡ ನಟ ಸುದೀಪ್‌ ‘ಹಿಂದಿ ರಾಷ್ಟ್ರ ಭಾಷೆಯಲ್ಲ’ ಎಂದು ತಿರುಗೇಟು ನೀಡಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

ಈ ಹಿನ್ನೆಲೆಯಲ್ಲಿ ಸೋಮವಾರ ಮಾತನಾಡಿದ ಸೋನು, ‘ಸಂವಿಧಾನದಲ್ಲಿ ಎಲ್ಲಿಯೂ ಹಿಂದಿ ರಾಷ್ಟ್ರೀಯ ಭಾಷೆ ಎಂದು ಘೋಷಿಸಿಲ್ಲ. ಸಂವಿಧಾನದಲ್ಲಿ ಪಟ್ಟಿಮಾಡಲಾದ 22 ಭಾಷೆಗಳಲ್ಲಿ ಹಿಂದಿಯೂ ಒಂದಾಗಿದೆ. ಇದು ಬಹಳಷ್ಟುಜನರು ಮಾತನಾಡುವ ಭಾಷೆಯಾಗಿರಬಹುದು. ಆದರೂ ಎಲ್ಲರ ಮೇಲೆ ಹಿಂದಿ ಹೇರಿಕೆ ಮಾಡುವುದು ತಪ್ಪು. ಜನರಿಗೆ ಬೇಕಾದ ಭಾಷೆಯಲ್ಲಿ ಅವರು ಮಾತನಾಡಿಕೊಳ್ಳಲಿ. ನೀವ್ಯಾಕೆ ಇಡೀ ದೇಶ ಒಂದೇ ಭಾಷೆಯನ್ನು ಮಾತನಾಡಬೇಕೆಂದು ಒತ್ತಡ ಹೇರುತ್ತೀರಿ?’ ಎಂದು ಕಿಡಿಕಾರಿದರು. ‘ಭಾಷಾ ವೈವಿಧ್ಯತೆ ಗೌರವಿಸದಿದ್ದರೆ, ದೇಶದಲ್ಲಿ ಆಂತರಿಕವಾಗಿ ಬಿರುಕು ಮೂಡಲಿದೆ’ ಎಂದರು.

ವಿದ್ಯಾರ್ಥಿಯ ಪಾನಿಪುರಿ ಆಸೆ ಈಡೇರಿಸಿದ ಸುಬುಧೇಂದ್ರ ಶ್ರೀ

 ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಗುರು ಸಾರ್ವ​ಭೌಮ ವಿದ್ಯಾಪೀಠದಲ್ಲಿ ಓದುತ್ತಿರುವ ವಿದ್ಯಾರ್ಥಿಯೊಬ್ಬನ ವಿಶಿಷ್ಟಆಸೆಯನ್ನು ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಈಡೇರಿಸುವುದರ ಮೂಲಕ ಆತನ ಮುಖದಲ್ಲಿ ಸಂತಸ ಮೂಡಿಸಿದ್ದಾರೆ.

ಮಠದ ಸಂಸ್ಕೃತ ವಿದ್ಯಾಪೀಠದಲ್ಲಿ ವಿದ್ಯಾರ್ಥಿಗಳು ಸಾಲಾಗಿ ಕುಳಿತು ಊಟ ಮಾಡುತ್ತಿದ್ದ ಸಮದಯಲ್ಲಿ ಸುಬುಧೇಂದ್ರ ತೀರ್ಥರು ಪರಾಮರ್ಶಿಸಲು ತೆರಳಿದ್ದರು. ಈ ವೇಳೆ ಸಾಲಿನ ಕೊನೆಯಲ್ಲಿ ಕುಳಿತ್ತಿದ್ದ ಹೈದರಾಬಾದ್‌ ಮೂಲದ ವಿದ್ಯಾರ್ಥಿಯೊಬ್ಬ ನನಗೆ ಪಾನಿ ಪೂರಿ ತಿನ್ನುವ ಆಸೆಯಾಗಿದೆ ಎಂದು ತನ್ನ ಇಂಗಿತವನ್ನು ವ್ಯಕ್ತಪಡಿಸಿದ್ದ. ತಕ್ಷಣ ಇದಕ್ಕೆ ಸ್ಪಂದಿಸಿದ ಶ್ರೀಗಳು, ಆತನ ಜೊತೆಗೆ ಇತರೆ ವಿದ್ಯಾರ್ಥಿಗಳಿಗೂ ಮಠದ ಭೋಜನ ಶಾಲೆಯಿಂದ ಪಾನಿಪೂರಿ ಮಾಡಿಸಿ ತಿನ್ನಿಸಿದ್ದಾರೆ. ವಿದ್ಯಾರ್ಥಿ ಸ್ವಾಮೀಜಿಗಳ ಮುಂದೆ ತನ್ನ ಆಸೆ ಹೇಳಿಕೊಳ್ಳುತ್ತಿರುವುದು ಹಾಗೂ 200 ವಿದ್ಯಾರ್ಥಿಗಳು ಪಾನಿಪೂರಿ ತಿನ್ನುತ್ತಿರುವ ವಿಡಿಯೋ ವೈರಲ್‌ ಆಗಿದೆ.