ನವದೆಹಲಿ(ಜ.24): ಶತ್ರು ಆಸ್ತಿ ಕಾಯ್ದೆಯಡಿಯಲ್ಲಿ ದೇಶದಲ್ಲಿರುವ ಸುಮಾರು 9,400 ಶತ್ರು ಆಸ್ತಿಗಳ ಮೇಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಮಿತಿ ನಿಗಾ ಇರಿಸಿದೆ.

ಅಮಿತ್ ಶಾ ನೇತೃತ್ವದ ಸಚಿವರ ಸಮಿತಿ ದೇಶಾದ್ಯಂತ ಇರುವ ಶತ್ರು ಆಸ್ತಿಗಳ ಕುರಿತು ಪರಿಶೀಲನೆ ನಡೆಸಿದ್ದು, ಇವುಗಳ ಜಪ್ತಿ ಕಾರ್ಯವನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ 9,400 ಆಸ್ತಿಗಳ ಒಟ್ಟು ಮೌಲ್ಯ ಸುಮಾರು 1 ಲಕ್ಷ ಕೋಟಿ ರೂ.ಗಿಂತ ಅಧಿಕವಾಗಿದೆ ಎಂದು ಹೇಳಲಾಗಿದೆ. ಇವುಗಳ ಮೇಲೆ ಗೃಹ ಸಚಿವಾಲಯ, ಹಣಕಾಸು ಸಚಿವಾಲಯ ಸೇರಿದಂತೆ ಹಲವು ಸಚಿವಾಲಯಗಳು ನಿಗಾ ಇರಿಸಿವೆ.

ಇವುಗಳ ಪೈಕಿ 9,280 ಆಸ್ತಿಗಳು ಪಾಕಿಸ್ತಾನಕ್ಕೆ ಹೋದವರ ಆಸ್ತಿ ಇದ್ದರೆ, 126 ಚೀನಾಗೆ ಹೋದವರ ಆಸ್ತಿಗಳಿವೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಶತ್ರು ಆಸ್ತಿ ಮಸೂದೆ ತಿದ್ದುಪಡಿಗೆ ಲೋಕಸಭೆಯಲ್ಲಿಂದು ಅನುಮೋದನೆ

ಏನಿದು ಶತ್ರು ಆಸ್ತಿ ಕಾಯ್ದೆ?:

ಶತ್ರು ಆಸ್ತಿ ಎಂದರೆ ದೇಶ ವಿಭಜನೆ ಸಂದರ್ಭದಲ್ಲಿ ಪಾಕಿಸ್ತಾನ/ ಚೀನಾಗೆ ವಲಸೆ ಹೋದವರು ಬಿಟ್ಟು ಹೋದ ಆಸ್ತಿ ಆಗಿದೆ.

ಈ ಕಾಯ್ದೆ ಪ್ರಕಾರ ಶತ್ರುಗಳ ಸಂಬಂಧಿಕರು ಅಥವಾ ಅವರ ಪರವಾಗಿ ಆಸ್ತಿಯನ್ನು ನೋಡಿಕೊಳ್ಳುತ್ತಿರುವವರಿಗೆ ಈ ಆಸ್ತಿಯ ಮೇಲೆ ಯಾವುದೇ ಹಕ್ಕಿರುವುದಿಲ್ಲ.

ಶತ್ರು ಆಸ್ತಿಯನ್ನು ಕೇಂದ್ರ ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತದೆ. ಅಲ್ಲದೇ ಈ ಪ್ರಕ್ರಿಯೆಗಾಗಿ ಕೇಂದ್ರ ಸರ್ಕಾರದ ಅಡಿಯಲ್ಲಿ ಒಂದು ಸಂಸ್ಥೆಯನ್ನು ಕೂಡ ಸ್ಥಾಪಿಸಲಾಗಿದೆ.