* ತೆಂಡುಲ್ಕರ್‌, ಕಿರಣ್‌ ಶಾ ಪತಿ, ಅನಿಲ್‌ ಅಂಬಾನಿ ವ್ಯವಹಾರ ಪರಿಶೀಲನೆಗೆ ಕೇಂದ್ರ ನಿರ್ಧಾರ* 300 ಗಣ್ಯರ ವಿರುದ್ಧ ‘ಪಂಡೋರಾ’ ತನಿಖೆ* ಕೇಂದ್ರೀಯ ನೇರ ತೆರಿಗೆ ಮಂಡಳಿ ಅಧ್ಯಕ್ಷರ ನೇತೃತ್ವ* ‘ಪಂಡೋರಾ ಪೇಪ​ರ್‍ಸ್’ ಬಿಡುಗಡೆಯಿಂದ ಸಂಚಲನ

ನವದೆಹಲಿ(ಸೆ.05): ತೆರಿಗೆ ವಂಚಕರ ಕುರಿತು 2016ರಲ್ಲಿ ಬಿಡುಗಡೆಯಾಗಿದ್ದ ಪನಾಮಾ ಪೇಪ​ರ್‍ಸ್(Panama Papers) ರೀತಿಯಲ್ಲಿ ಇದೀಗ 1.2 ಕೋಟಿ ಫೈಲ್‌ಗಳನ್ನು ಒಳಗೊಂಡ ‘ಪಂಡೋರಾ ಪೇಪ​ರ್‍ಸ್’(Pandora Papers) ಎಂಬ ರಹಸ್ಯ ಹಣಕಾಸು ಮಾಹಿತಿ ಬಿಡುಗಡೆಯಾಗಿದೆ. ಇದರಲ್ಲಿ 300 ಭಾರತೀಯರೂ ಸೇರಿದಂತೆ ವಿಶ್ವದಾದ್ಯಂತ ಸಾವಿರಾರು ಶ್ರೀಮಂತರು ‘ತೆರಿಗೆ ವಂಚ​ಕರ ಸ್ವರ್ಗ’ ಎನ್ನಿಸಿಕೊಂಡ ದೇಶಗಳಲ್ಲಿ ಹೇಗೆ ಕಂಪನಿಗಳನ್ನು ಆರಂಭಿಸಿ ತೆರಿಗೆ(Tax) ವಂಚನೆ ಮಾಡುತ್ತಿದ್ದಾರೆ ಎಂಬ ಬಗ್ಗೆ ಬೆಳಕು ಚೆಲ್ಲಲಾ​ಗಿ​ದೆ.

ಈ ವಿಚಾರವು ಭಾರತವು ಸೇರಿದಂತೆ ವಿಶ್ವಾದ್ಯಂತ ಸಂಚಲನ ಮೂಡಿಸಿದೆ. ಹೀಗಾಗಿ ಇದ​ನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಈ ಪ್ರಕರಣಗಳ ತನಿಖೆ ನಡೆ​ಸಲು ನಿರ್ಧ​ರಿಸಿದೆ. ಕೇಂದ್ರೀಯ ನೇರ ತೆರಿಗೆ ಮಂಡಳಿ (CBDI) ಅಧ್ಯ​ಕ್ಷರ ನೇತೃ​ತ್ವದ ‘ಬಹು ಸಂಸ್ಥೆ​ಗಳ ಸಮೂ​ಹ​’ವು ತನಿಖೆ ಕೈಗೊ​ಳ್ಳ​ಲಿ​ದೆ.

ಬಯೋ​ಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಶಾ(Kiran Mazumdar Shaw) ಅವರ ಪತಿ, ಕ್ರಿಕೆ​ಟಿಗ ಸಚಿನ್‌ ತೆಂಡು​ಲ್ಕರ್‌(Sachin Tendulkar), ನಟ ಜಾಕಿ ಶ್ರಾಫ್‌ ಕುಟುಂಬ, ಉದ್ಯಮಿ ಅನಿಲ್‌ ಅಂಬಾ​ನಿ(Anil Ambani), 2ಜಿ ಹಗ​ರಣ ಖ್ಯಾತಿಯ ನೀರಾ ರಾಡಿಯಾ, ಗಾಂಧಿ ಕುಟುಂಬದ ಆಪ್ತ ಕಾಂಗ್ರೆಸ್‌ ನಾಯಕ ಕ್ಯಾ| ಸತೀಶ್‌ ಶರ್ಮಾ, ಪಾತಕಿ ದಾವೂದ್‌ ಇಬ್ರಾಹಿಂ ಬಂಟ ಇಕ್ಬಾಲ್‌ ಮಿರ್ಚಿ ಅವರು ತೆರಿಗೆ ವಂಚ​ಕರ ಸ್ವರ್ಗ ಎಂದು ಬಿಂಬಿ​ತ​ವಾ​ಗಿ​ರುವ ದೇಶ​ಗ​ಳ​ಲ್ಲಿ ಇಂಥ ಹೂಡಿಕೆ ಮಾಡಿ​ದ್ದಾರೆ ಎಂದು ಪಂಡೋರಾ ಪೇಪ​ರ್‌​ಗ​ಳ​ಲ್ಲಿ​ದೆ. ಆದರೆ ಆರೋ​ಪ​ಗ​ಳ​ನ್ನು ಶಾ ಹಾಗೂ ತೆಂಡೂ​ಲ್ಕರ್‌ ನಿರಾ​ಕ​ರಿ​ಸಿ​ದ್ದಾ​ರೆ.

ಪಂಡೋರಾ ಪೇಪ​ರ್‍ಸ್ನಲ್ಲಿ ಯಾರ್ಯಾರ ಬಗ್ಗೆ ಏನಿದೆ ಮಾಹಿತಿ?

1. ಅನಿಲ್‌ ಅಂಬಾನಿ

ಬ್ಯಾಂಕ್‌ ಸಾಲ ತೀರಿಸಲು ಹಣ ಇಲ್ಲ ಎಂದಿದ್ದರು. ಆದರೆ 3 ದೇಶಗಳಲ್ಲಿ 18 ಕಂಪನಿ ಸ್ಥಾಪಿಸಿ, 9600 ಕೋಟಿ ರು. ಹೂಡಿದ್ದಾರೆ

2. ಸಚಿನ್‌ ತೆಂಡುಲ್ಕರ್‌

ಕುಟುಂಬ ಸದಸ್ಯರ ಜತೆಗೂಡಿ ಬ್ರಿಟಿಷ್‌ ವರ್ಜಿನ್‌ ಐಲ್ಯಾಂಡ್‌ನಲ್ಲಿ ಹೂಡಿಕೆ. ಪತ್ನಿ ಅಂಜಲಿ, ಮಾವನಿಂದಲೂ ಹಣ ಹೂಡಿಕೆ

3. ಕಿರಣ್‌ ಶಾ ಗಂಡ

ಜಾನ್‌ ಮೆಕಲಂ ಮಾರ್ಷಲ್‌ ಶಾರಿಂದ 2015ರಲ್ಲಿ ನ್ಯೂಜಿಲೆಂಡ್‌ನಲ್ಲಿ ಕಂಪನಿ ಸ್ಥಾಪನೆ. ಸೆಬಿ ನಿಷೇಧಿತ ವ್ಯಕ್ತಿಗೆ ಕಂಪನಿ ಹೊಣೆ

4. ಜಾಕಿ ಶ್ರಾಫ್‌

ಅತ್ತೆಯ ಹೆಸರಲ್ಲಿ ನ್ಯೂಜಿಲೆಂಡ್‌ನಲ್ಲಿ ಸ್ಥಾಪಿಸಿದ ಟ್ರಸ್ಟ್‌ನ ಪ್ರಧಾನ ಫಲಾನುಭವಿ. ಸ್ವಿಸ್‌ ಬ್ಯಾಂಕಲ್ಲಿ ಖಾತೆ ಹೊಂದಿದೆ ಈ ಟ್ರಸ್ಟ್‌

5. ನೀರವ್‌ ಸೋದರಿ

ನೀರವ್‌ ಮೋದಿ ದೇಶ ತೊರೆಯುವುದಕ್ಕೂ ಮುನ್ನ ಪೂರ್ವಿ ಮೋದಿಯಿಂದ ಬ್ರಿಟಿಷ್‌ ವರ್ಜಿನ್‌ ಐಲ್ಯಾಂಡ್‌ನಲ್ಲಿ ಕಂಪನಿ ಸ್ಥಾಪನೆ

6. ದಾವೂದ್‌ ಆಪ್ತ

2013ರಲ್ಲೇ ಸಾವನ್ನಪ್ಪಿರುವ ಇಕ್ಬಾಲ್‌ ಮಿರ್ಚಿ. ಆತನ ಕುಟುಂಬ ಸದಸ್ಯರಿಂದ ತೆರಿಗೆ ಸ್ವರ್ಗ ದೇಶಗಳಲ್ಲಿ ಕೋಟ್ಯಂತರ ರು. ಹೂಡಿಕೆ

7. ನೀರಾ ರಾಡಿಯಾ

ಬ್ರಿಟಿಷ್‌ ವರ್ಜಿನ್‌ ಐಲ್ಯಾಂಡ್‌ನ ಡಜನ್‌ ಕಂಪನಿಗಳ ಜತೆ ವಹಿವಾಟು. ಯಾವುದೇ ಕಾರಣಕ್ಕೂ ತಮ್ಮನ್ನು ಸಂಪರ್ಕಿಸದಂತೆ ತಾಕೀತು

ಪಂಡೋರಾ ಪೇಪ​ರ್ಸ್‌: ಏನಿದು ಹಗರಣ?

ವಿಶ್ವದ ಶ್ರೀಮಂತರು ‘ತೆರಿಗೆ ವಂಚಕರ ಸ್ವರ್ಗ’ದಂತಿರುವ ದೇಶಗಳಲ್ಲಿ ಕಂಪನಿಗಳನ್ನು ಸ್ಥಾಪಿಸಿ ಅಥವಾ ಹೂಡಿಕೆ ಮಾಡಿ ಸರ್ಕಾರಗಳಿಗೆ ಹೇಗೆ ತೆರಿಗೆ ವಂಚಿಸುತ್ತಾರೆ ಎಂಬುದನ್ನು ಬಯಲಿಗೆಳೆದಿರುವ ವರದಿ. ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ ಇದನ್ನು ಬಿಡುಗಡೆ ಮಾಡಿದೆ. 2016ರಲ್ಲಿ ಪನಾಮಾ ಪೇಪರ್ಸ್‌ ಹೆಸರಿನಲ್ಲಿ ಇದೇ ಒಕ್ಕೂಟ ದಾಖಲೆ ಬಿಡುಗಡೆ ಮಾಡಿ ಸಂಚಲನ ಸೃಷ್ಟಿಸಿತ್ತು. ಈಗ ಬಿಡುಗಡೆಯಾಗಿರುವುದು 2016ರ ಮುಂದುವರಿದ ಭಾಗ.