ಪಂಚಾಯತ್‌ರಾಜ್ ದಿನ ಅಂಗವಾಗಿ ಮೋದಿ ಸಾಂಬಾ ಜಿಲ್ಲೆಗೆ ಭೇಟಿ ರಾಜ್ಯದಾದ್ಯಂತ ಬಹುಹಂತದ ಭದ್ರತಾ ವ್ಯವಸ್ಥೆ, ಚೆಕ್‌ಪೋಸ್ಟ್ ನಿರ್ಮಾಣ 20,000 ಕೋಟಿ ಮೊತ್ತದ ವಿವಿಧ ಕಾಮಗಾರಿಗೆ ಪ್ರಧಾನಿ ಶಂಕು, ಚಾಲನೆ
ಜಮ್ಮು(ಏ.24): ಆತ್ಮಾಹುತಿ ದಾಳಿಕೋರರ ಭೀತಿಯ ನಡುವೆಯೇ ಒಂದು ದಿನದ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜಮ್ಮುವಿಗೆ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಣಿವೆ ರಾಜ್ಯದಾದ್ಯಂತ ಬಹುಸ್ತರದ ಭದ್ರತೆ ಏರ್ಪಡಿಸಲಾಗಿದ್ದು, ಯಾವುದೇ ಅನಾಹುತಕಾರಿ ಘಟನೆ ತಡೆಯಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ.
ಶುಕ್ರವಾರವಷ್ಟೇ ಪಾಕಿಸ್ತಾನ ಮೂಲದ ಜೈಷ್ ಎ ಮೊಹ್ಮಮದ್ ಸಂಘಟನೆಯ ಓರ್ವ ಆತ್ಮಾಹುತಿ ದಾಳಿಕೋರನನ್ನು ಜಮ್ಮುವಿನ ಸಂಜ್ವಾನ್‌ನಲ್ಲಿ ಭದ್ರತಾ ಪಡೆಗಳು ಗುಂಡಿಕ್ಕಿ ಹತ್ಯೆ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಪ್ರಧಾನಿಯ ಸುರಕ್ಷತೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರ ವಹಿಸಲು ರಾಷ್ಟ್ರೀಯ ತನಿಖಾ ಏಜೆನ್ಸಿಯ ಮುಖ್ಯಸ್ಥ ಹಾಗೂ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಮಹಾ ನಿರ್ದೇಶಕರಾದ ಕುಲದೀಪ್ ಸಿಂಗ್ ಶನಿವಾರ ಜಮ್ಮುವಿಗೆ ಭೇಟಿ ನೀಡಿದ್ದಾರೆ.
ತೇಘ್ ಬಹದ್ದೂರ್ 400ನೇ ಜಯಂತಿ, ಕೆಂಪು ಕೋಟೆ ಮೇಲೆ ಪ್ರಧಾನಿ ಮೋದಿ ಭಾಷಣ!
ವಿವಿಧ ಕಾರ್ಯಕ್ರಮ:
ರಾಷ್ಟ್ರೀಯ ಪಂಚಾಯಿತಿ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸಾಂಬಾ ಜಿಲ್ಲೆಯ ಪಾಲ್ಲಿ ಪಂಚಾಯತಿ ವ್ಯಾಪ್ತಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ದೇಶಾದ್ಯಂತ ಇರುವ ಪಂಚಾಯಿತಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ 1 ಲಕ್ಷ ಜನರು ಭಾಗಿಯಾಗುವ ನಿರೀಕ್ಷೆ ಇದೆ. 2019ರ ಅಗಸ್ಟ್‌ನಲ್ಲಿ ಜಮ್ಮು ಹಾಗೂ ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆದ ನಂತರ ಮೊದಲನೇ ಬಾರಿ ಮೋದಿ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ.
20000 ಕೋಟಿ ಕಾಮಗಾರಿಗೆ ಶಂಕು, ಚಾಲನೆ
ಜಮ್ಮವಿನಲ್ಲಿ ಪ್ರಧಾನಿ ಮೋದಿ ಭಾನುವಾರ 20,000 ಕೋಟಿ ರು. ಮೊತ್ತದ ಅಭಿವೃದ್ಧಿ ಕಾಮಗಾರಿಯ ಶಂಕು ಸ್ಥಾಪನೆ ನೆರವೇರಿಸಲಿದ್ದು, ಕೆಲವು ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಇದರಲ್ಲಿ ಜಮ್ಮು ಹಾಗೂ ಕಾಶ್ಮೀರದ ನಡುವೆ ಎಲ್ಲ ಹವಾಮಾನದಲ್ಲೂ ಸಂಪರ್ಕ ಕಲ್ಪಿಸುವಂತಹ 3100 ಕೋಟಿ ವೆಚ್ಚದ 8.45 ಕಿಮೀ ಉದ್ದದ ಬನಿಹಾಲ್-ಖ್ವಾಜಿಗುಂಡ್ ರಸ್ತೆ ಸುರಂಗ ಮಾರ್ಗದ ಉದ್ಘಾಟನೆ ಮಾಡಲಿದ್ದಾರೆ. ಇದಲ್ಲದೇ ದೆಹಲಿ-ಅಮೃತಸರ್-ಕರ್ತಾ ಎಕ್ಸ್‌ಪ್ರೆಸ್ ವೇ, ರಾಟ್ಲೇ ಹಾಗೂ ಕ್ವಾರ್ ಹೈಡ್ರೋಎಲೆಕ್ಟ್ರಿಕ್ ಯೋಜನೆಯ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಜಮ್ಮು ಕಾಶ್ಮೀರದಲ್ಲಿ 100 ಜನೌಷಧಿ ಕೇಂದ್ರಗಳನ್ನು ಉದ್ಘಾಟಿಸಲಿದ್ದಾರೆ. æ ಪಾಲ್ಲಿಯಲ್ಲಿ 500 ಕಿಲೋವ್ಯಾಟ್ ಸೌರಶಕ್ತಿ ಘಟಕ ಉದ್ಘಾಟನೆ ಮಾಡಲಿದ್ದಾರೆ. ಈ ಮೂಲಕ ಪಾಲ್ಲಿ ದೇಶದಲ್ಲೇ ಮೊದಲ ಕಾರ್ಬನ್ ತಟಸ್ಥ ಪಂಚಾಯಿತಿ ಎನಿಸಲಿದೆ. ಇದಲ್ಲದೇ ಜಮ್ಮು ಕಾಶ್ಮೀರದ ನಾಗರಿಕರಿಗೆ ಸ್ವಾಮಿತ್ವ ಕಾರ್ಡ್‌ನ್ನು ಮೋದಿ ಹಸ್ತಾಂತರ ಮಾಡಲಿದ್ದಾರೆ.
ಹಾಲು ಉತ್ಪಾದನೆಯಲ್ಲಿ ವಿಶ್ವದಲ್ಲೇ ಭಾರತ ನಂ.1, ಪ್ರಧಾನಿ ಮೋದಿ
ಶಿವಮೊಗ್ಗದಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮ
ಈ ಮೊದಲು ಪಂಚಾಯತ್ ರಾಜ್ ದಿವಸ ಕಾರ್ಯಕ್ರಮಕ್ಕೆ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಹೊಳಲೂರು ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಮೋದಿ ಸ್ವಾಗತಕ್ಕೆ ಸಿದ್ಧತೆಯನ್ನು ನಡೆಸಲಾಗಿತ್ತು. ಆದರೆ ಹಂತಿಮದಲ್ಲಿ ಕಾರ್ಯಕ್ರಮದ ಸ್ಥಳ ಬದಲಾಯಿಸಲಾಗಿತ್ತು.
ಮತ್ತೆ ಇಬ್ಬರು ಜೈಷ್ ಉಗ್ರರ ಹತ್ಯೆ
ಕಾಶ್ಮೀರದಲ್ಲಿ ಮತ್ತೆ ಪಾಕಿಸ್ತಾನ ಮೂಲದ ಜೈಷ್-ಇ- ಮೊಹಮ್ಮದ್ ಸಂಘಟನೆಗೆ ಸೇರಿದ ಇಬ್ಬರು ಉಗ್ರರು ಶನಿವಾರ ಭದ್ರತಾ ಪಡೆಗಳ ಗುಂಡೇಟಿಗೆ ಬಲಿಯಾಗಿದ್ದಾರೆ. ಈ ಮೊದಲು ಗುರುವಾರ 3 ಉಗ್ರರು ಹಾಗೂ ಶುಕ್ರವಾರ ಇಬ್ಬರು ಆತ್ಮಾಹುತಿ ದಾಳಿಕೋರರು ಸೇನೆಯ ಗುಂಡೇಟಿಗೆ ಬಲಿಯಾಗಿದ್ದರು. ಭಾನುವಾರ ಜಮ್ಮುವಿಗೆ ಪ್ರಧಾನಿ ಮೋದಿ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ದಕ್ಷಿಣ ಕಾಶ್ಮೀರದ ಕುಲಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಉಗ್ರರ ಹುಡುಕಾಟಕ್ಕಾಗಿ ಕಾರ್ಯಾಚರಣೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸೇನಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮತ್ತೆ ಇಬ್ಬರು ಉಗ್ರರು ಬಲಿಯಾಗಿದ್ದಾರೆ.
