ಪಾಕ್ ಉಗ್ರರಿಂದ ಆಧಾರ್ ಕಾರ್ಡು ದುರ್ಬಳಕೆ!
* ಮೃತ ಪಾಕ್ ಉಗ್ರರ ಬಳಿ ಆಧಾರ್ ಕಾರ್ಡು ಜಪ್ತಿ
* ಮೂಲ ಆಧಾರ್ ಕಾರ್ಡಲ್ಲೇ ಫೋಟೋ ಸೂಪರ್ ಇಂಪೋಸ್
* ಉಗ್ರರ ಈ ಕುತಂತ್ರ ನೋಡಿ ಪೊಲೀಸರಿಗೆ ಕಳವಳ
* ದುರ್ಬಳಕೆ ತಡೆಗೆ ತಂತ್ರಜ್ಞಾನ: ಆಧಾರ್ ಪ್ರಾಧಿಕಾರಕ್ಕೆ ಪೊಲೀಸರ ಕೋರಿಕೆ
ಶ್ರೀನಗರ(ಏ/.19): ಪಾಕಿಸ್ತಾನ ಮೂಲದ ಉಗ್ರರು ಕಾಶ್ಮೀರಕ್ಕೆ ಆಗಮಿಸಿ ಭಾರತದಲ್ಲಿನ ಆಧಾರ್ ಕಾರ್ಡುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಹೀಗಾಗಿ ಇಂಥ ದುರ್ಬಳಕೆಯನ್ನು ಪತ್ತೆ ಮಾಡಲು ಆ ಕ್ಷಣದಲ್ಲಿ ದುರ್ಬಳಕೆ ಮಾಹಿತಿ ಲಭ್ಯವಾಗುವ ತಂತ್ರಜ್ಞಾನ ರೂಪಿಸುವಂತೆ ಆಧಾರ್ ಪ್ರಾಧಿಕಾರಕ್ಕೆ ಪತ್ರ ಬರೆಯಲು ಜಮ್ಮು-ಕಾಶ್ಮೀರ ಪೊಲೀಸರು ನಿರ್ಧರಿಸಿದ್ದಾರೆ.
ಇತ್ತೀಚೆಗೆ ಸಿಆರ್‌ಪಿಎಫ್ ಯೋಧರ ಮೇಲೆ ದಾಳಿ ಮಾಡಿದ್ದ ಪಾಕಿಸ್ತಾನ ಮೂಲದ ಇಬ್ಬರು ಉಗ್ರರನ್ನು ಶ್ರೀನಗರದಲ್ಲಿ ಹತ್ಯೆ ಮಾಡಲಾಗಿತ್ತು. ಅವರ ಬಳಿ ಆಗ ಆಧಾರ್ ಕಾರ್ಡುಗಳು ಪತ್ತೆಯಾಗಿದ್ದವು. ಜಮ್ಮು ವಿಳಾಸದ ಮೂಲ ಆಧಾರ್ ನಂಬರ್ ಇದ್ದ ಆಧಾರ್ ಕಾರ್ಡಿನಲ್ಲಿ ಫೋಟೋವನ್ನು ಮಾತ್ರ ಈ ಉಗ್ರರು ‘ಸೂಪರ್ ಇಂಪೋಸ್’ ಮಾಡಿಕೊಂಡಿದ್ದರು. ಇದು ಭದ್ರತಾ ಪಡೆಗಳ ಕಳವಳಕ್ಕೆ ಕಾರಣವಾಗಿದೆ.
ಹೀಗಾಗಿ ಆಧಾರ್ ದುರ್ಬಳಕೆ ಆಗುತ್ತಿದ್ದರೆ, ಆ ಕ್ಷಣವೇ ಸಂಬಂಧಿಸಿದ ಇಲಾಖೆಗೆ ಮಾಹಿತಿ ಲಭಿಸುವ ತಂತ್ರಜ್ಞಾನ ರೂಪಿಸಬೇಕು ಎಂದು ಆಧಾರ್ ಪ್ರಾಧಿಕಾರಕ್ಕೆ ಪತ್ರ ಬರೆಯಲು ಕಾಶ್ಮೀರ ಪೊಲೀಸರು ನಿರ್ಧರಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಉಗ್ರರಿಂದ ಬಿಜೆಪಿ ಬೆಂಬಲಿಗ ಗ್ರಾ.ಪಂ ಅಧ್ಯಕ್ಷನ ಹತ್ಯೆ
ಗ್ರಾಮ ಪಂಚಾಯ್ತಿ ಅಧ್ಯಕ್ಷರೊಬ್ಬರನ್ನು ಉಗ್ರರು ಗುಂಡಿಟ್ಟು ಹತ್ಯೆ ನಡೆಸಿದ ಘಟನೆ ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಪಟ್ಟಾನ್ ಪ್ರದೇಶದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಹತ್ಯೆಯಾದವರನ್ನು ಮನ್ಸೂರ್ ಅಹ್ಮದ್ ಎಂದು ಗುರುತಿಸಲಾಗಿದೆ. ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿದ್ದರು ಎಂದು ಹೇಳಲಾಗುತ್ತಿದ್ದರೂ ಅಧಿಕೃತವಾಗಿ ಅವರು ಯಾವುದೇ ಪಕ್ಷದಲ್ಲಿ ಗುರುತಿಸಿಕೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಉಗ್ರರ ಗುಂಡಿನ ದಾಳಿಯಿಂದಾಗಿ ತೀವ್ರ ಗಾಯಗೊಂಡಿದ್ದ ಮನ್ಸೂರ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಘಟನೆಯ ಬಳಿಕ ಪಟ್ಟಾನ್ ಪ್ರದೇಶಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಉಗ್ರರಿಗಾಗಿ ಶೋಧ ನಡೆದಿದೆ ಪೊಲೀಸರು ತಿಳಸಿದ್ದಾರೆ.
ಕಾಶ್ಮೀರದ ಶೋಪಿಯಾನ್ ಎನ್‌ಕೌಂಟರ್‌ನಲ್ಲಿ 4 ಲಷ್ಕರ್ ಉಗ್ರರ ಹತ್ಯೆ
ಜಮ್ಮು ಕಾಶ್ಮೀರದ ಶೋಪಿಯಾನ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ನಾಲ್ವರು ಲಷ್ಕರ್ ಉಗ್ರರು ಹತರಾಗಿದ್ದಾರೆ. ಎನ್‌ಕೌಂಟರ್ ಸ್ಥಳಕ್ಕೆ ಧಾವಿಸುತ್ತಿದ್ದಾಗ ನಡೆದ ಅಪಘಾತದಲ್ಲಿ ಇಬ್ಬರು ಯೋಧರು ಸಾವಿಗೀಡಾಗಿದ್ದಾರೆ.
ಶೋಪಿಯಾನ್‌ನ ಝೈನ್‌ಪೋರಾದ ಬಾದಿಗಾಮ್ ಪ್ರದೇಶದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿಯ ಮೇಲೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿದ್ದವು. ಈ ಸಮಯದಲ್ಲಿ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರಿಂದ ಯೋಧರು ಪ್ರತಿದಾಳಿ ನಡೆಸಿದರು. ಈ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಧಾವಿಸುತ್ತಿದ್ದ ಸೈನಿಕರ ವಾಹನಕ್ಕೆ ಅಫಘಾತ ಸಂಭವಿಸಿದ ಕಾರಣ ಇಬ್ಬರು ಯೋಧರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಜಮ್ಮು ಪೊಲೀಸರು ತಿಳಿಸಿದ್ದಾರೆ.