ಜೈಪುರ[ಜ.18]: ದೇಶದೆಲ್ಲೆಡೆ ಪೌರತ್ವ ಕಾಯ್ದೆ ಹಾಗೂ NRC ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಆದರೆ ಈ ಪ್ರತಿಭಟನೆ ನಡುವೆಯೇ 2019ರ ಸೆಪ್ಟೆಂಬರ್ ನಲ್ಲಿ ಭಾರತೀಯ ಪೌರತ್ವ ಪಡೆದ ಪಾಕಿಸ್ತಾನ ವಲಸಿಗ ಮಹಿಳೆಯೊಬ್ಬರು ಚುನಾವಣೆಯೊಂದರಲ್ಲಿ ಗೆಲುವು ಸಾಧಿಸಿ 'ಜನನಾಯಕಿ'ಯಾಗಿದ್ದಾರೆ.

ಹೌದು 36 ವರ್ಷದ ನೀತಾ ಕನ್ವರ್ ರಾಜಸ್ಥಾನದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತಮ್ಮ ಎದುರಾಳಿ ಸೋನು ದೇವಿಯನ್ನು 362 ಮತಗಳ ಅಂತರದಿಂದ ಸೋಲಿಸಿ, ಸರ್ ಪಂಚ್ ಆಗಿ ಆಯ್ಕೆಯಾಗಿದ್ದಾರೆ. ಟೋಂಕ್ ಜಿಲ್ಲೆಯ ನಟ್ವಾಡಾ ಗ್ರಾಮ ಪಂಚಾಯಿತಿಗೆ ನಡೆದ ಚುನಾವಣೆ ಇದಾಗಿದ್ದು, ಒಟ್ಟು 7 ಮಂದಿ ಮಹಿಳೆಯರು ಕಣಕ್ಕಿಳಿದಿದ್ದರು. ಒಟ್ಟು 2,494 ಮತಗಳಲ್ಲಿ ಕನ್ವರ್ 1,073 ಮತಗಳನ್ನು ಪಡೆದಿದ್ದಾರೆ.

ಕೇರಳ ಬೆನ್ನಲ್ಲೇ ಕೇಂದ್ರಕ್ಕೆ ಸೆಡ್ಡು ಹೊಡೆದ ಮತ್ತೊಂದು ರಾಜ್ಯ!

ಪಾಕಿಸ್ತಾನದಲ್ಲಿ ಜನಿಸಿದ ನೀತಾ ಕನ್ವರ್ ಉನ್ನತ ಶಿಕ್ಷಣಕ್ಕಾಗಿ ಭಾರತಕ್ಕೆ ಆಗಮಿಸಿದ್ದರು. 2005ರಲ್ಲಿ ಅಜ್ಮೀರ್ ನ ಸೋಫಿಯಾ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪದವಿ ಪಡೆದ ಕನ್ವರ್, 2011ರ ಫೆಬ್ರವರಿ 19ರಂದು ನಟ್ವಾಡಾದ ಪುಣ್ಯ ಪ್ರತಾಪ್ ಕರಣ್ ರನ್ನು ಮದುವೆಯಾಗಿದ್ದರು. ಮದುವೆ ಬಳಿಕ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದ ಕನ್ವರ್ ಗೆ 2019ರ ಸೆಪ್ಟೆಂಬರ್ ನಲ್ಲಿ ಭಾರತೀಯ ಪೌರತ್ವ ಸಿಕ್ಕಿತ್ತು.

ಇನ್ನು ಗೆಲುವಿನ ಬಳಿಕ ಪ್ರತಿಕ್ರಿಯಿಸಿದ ನೀತಾ ಕನ್ವರ್ 'ನನ್ನನ್ನು ಗ್ರಾಮದ ನಾಯಕಿಯಾಗಿ ಆಯ್ಕೆ ಮಾಡಿದ ಗ್ರಾಮಸ್ಥರಿಗೆ ನನ್ನ ಧನ್ಯವಾದಗಳು. ಸರ್ ಪಂಚ್ ಆಗಿ ಜನರ ಏಳಿಗೆಗಾಗಿ, ಗ್ರಾಮದ ಅಭಿವೃದ್ಧಿಗಾಗಿ ಪ್ರಾಮಾಣಿಕ ಹಾಗೂ ಕಠಿಣ ಪರಿಶ್ರಮ ನೀಡುತ್ತೇನೆ' ಎಂದಿದ್ದಾರೆ.

ಕನ್ವರ್ ಪತಿ ಸಾರಿಗೆ ಉದ್ಯಮಿಯಾಗಿದ್ದರೆ, ಮಾವ ಠಾಕೂರ್ ಲಕ್ಷ್ಮಣ್ ಸಿಂಗ್ ಕರಣ್ ಮೂರು ಬಾರಿ ಇದೇ ಗ್ರಾಮದ ಸರ್ ಪಂಚ್ ಆಘಿ ಸೇವೆ ಸಲ್ಲಿಸಿದ್ದಾರೆ.

ಪೌರತ್ವ ಕಾಯ್ದೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 18ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ