ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದ ನೂಪುರ್ ಶರ್ಮಾರನ್ನು ಕೊಲ್ಲಲು ಬಂದ ಪಾಕ್‌ ನುಸುಳುಕೋರನನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿದೆ.. 

ನವದೆಹಲಿ(ಜು.20): ಮಾಜಿ ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಹತ್ಯೆ ಮಾಡುವ ಉದ್ದೇಶ ಹೊಂದಿದ್ದ ಪಾಕಿಸ್ತಾನಿ ನುಸುಳುಕೋರನನ್ನು ಗಡಿ ಭದ್ರತಾ ಪಡೆ ಅಧಿಕಾರಿಗಳು ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿರುವ ಅಂತಾರಾಷ್ಟ್ರೀಯ ಗಡಿ ಬಳಿ ಬಂಧಿಸಿದ್ದಾರೆ.

ರಿಜ್ವಾನ್‌ ಅಶ್ರಫ್‌ (24) ಬಂಧಿತ ಆರೋಪಿ. ಬಿಎಸ್‌ಎಫ್‌ ಯೋಧರಿಂದ ಬಂಧನಕ್ಕೊಳಗಾದಾಗ ಆಶ್ರಫ್‌ ಮೊದಲಿಗೆ, ತಾನು ಶ್ರೀ ಗಂಗಾನಗರದಿಂದ ಅಜ್ಮೇರ್‌ ದರ್ಗಾಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಲು ಬಂದಿದ್ದಾಗಿ ಸುಳ್ಳು ಹೇಳಿದ್ದಾನೆ. ಆದರೆ ತನಿಖೆ ಬಳಿಕ ಪ್ರವಾದಿ ಮೊಹಮ್ಮದ್‌ ಅವಹೇಳನ ಮಾಡಿದ ಮಾಜಿ ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಹತ್ಯೆ ಉದ್ದೇಶದಿಂದ ಭಾರತದ ಗಡಿಯಲ್ಲಿ ನುಸುಳಲು ಪ್ರಯತ್ನಿಸಿದ್ದೆ ಎಂದು ಬಾಯ್ಬಿಟ್ಟಿದ್ದಾನೆ.

ಹಿಂದೂ ಮಾಲ್ಕೋಟ್‌ನ ಖನಕ್‌ ಚೆಕ್‌ಪೋಸ್ಟ್‌ ಮೂಲಕ ದೇಶದ ಗಡಿಯನ್ನು ಪ್ರವೇಶಿಸಲು ಪ್ರಯತ್ನಿಸಿದ್ದೆ ಎಂದು ಒಪ್ಪಿಕೊಂಡಿದ್ದಾನೆ. ಈತನ ಬಳಿಯಿಂದ 2 ಚಾಕು, ಕೆಲವು ಪುಸ್ತಕಳು ಸೇರಿದಂತೆ ಕೆಲ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಿಎಸ್‌ಎಫ್‌, ರಾಜ್ಯ ಪೊಲೀಸರು ಹಾಗೂ ಗುಪ್ತಚರ ವಿಭಾಗದ ಅಧಿಕಾರಿಗಳನ್ನು ಒಳಗೊಂಡ ಜಂಟಿ ವಿಚಾರಣೆ ಸಮಿತಿ ಈತನ ವಿಚಾರಣೆ ನಡೆಸುತ್ತಿದೆ. ವ್ಯಕ್ತಿಯನ್ನು ಸ್ಥಳೀಯ ನ್ಯಾಯಾಲಯದ ಎದುರು ಹಾಜರು ಪಡಿಸಲಾಗಿದ್ದು, ಜು.24ರವರೆಗೆ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

ನೂಪುರ್‌ಗೆ ಸುಪ್ರೀಂ ರಿಲೀಫ್‌

ಕರ್ನಾಟಕ ಸೇರಿ 9 ರಾಜ್ಯಗಳಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ, ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್‌ ಶರ್ಮಾ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಸುಪ್ರೀಂಕೋರ್ಟ್‌ ಮಂಗಳವಾರ ತಡೆ ನೀಡಿದ್ದು, ಅವರಿಗೆ ಬಂಧನದಿಂದ ರಕ್ಷಣೆ ಸಿಕ್ಕಂತಾಗಿದೆ. ಅಲ್ಲದೆ ಈ ಹಿಂದೆ ವಿವಿಧ ರಾಜ್ಯಗಳಲ್ಲಿ ದಾಖಲಿಸಿದ್ದ ಪ್ರಕರಣಗಳನ್ನು ಒಗ್ಗೂಡಿಸಲು ನಿರಾಕರಿಸಿದ್ದ ನ್ಯಾಯಾಲಯ, ಇದೀಗ ಆ ಅರ್ಜಿಯನ್ನೂ ವಿಚಾರಣೆಗೆ ಸ್ವೀಕರಿಸಿದೆ.

ಹೀಗಾಗಿ ದುಷ್ಕರ್ಮಿಗಳಿಂದ ಜೀವ ಭೀತಿ ಎದುರಿಸುತ್ತಿದ್ದ ನೂಪುರ್‌ ಶರ್ಮಾ ಒಂದೇ ಪ್ರಕರಣದಲ್ಲಿ ಹಲವು ರಾಜ್ಯಗಳ ಠಾಣೆಗಳು ಹಾಗೂ ಕೋರ್ಟ್‌ಗಳಿಗೆ ಅಲೆಯುವ ಪ್ರಮೇಯ ಸದ್ಯಕ್ಕೆ ತಪ್ಪಿದೆ. ‘ನೂಪುರ್‌ ಜೀವರಕ್ಷಣೆ ಅಗತ್ಯವಾಗಿದೆ’ ಎಂದಿರುವ ಪೀಠ, ‘ಎಲ್ಲ ಕೋರ್ಟ್‌ಗಳಿಗೆ ನಿಮ್ಮನ್ನು ಅಲೆಸುವುದು ನಮ್ಮ ಉದ್ದೇಶವಾಗಿರಲಿಲ್ಲ’ ಎಂದು ಸ್ಪಷ್ಟಪಡಿಸಿದೆ ಹಾಗೂ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳಿಗೆ ನೋಟಿಸ್‌ ನೀಡಿ, ಆ.10ಕ್ಕೆ ವಿಚಾರಣೆ ಮುಂದೂಡಿದೆ.

ಈ ಹಿಂದೆ ಕೋರ್ಟ್‌ ಏನು ಹೇಳಿತ್ತು?:

ಈ ಹಿಂದೆ ಹಲವು ರಾಜ್ಯಗಳಲ್ಲಿ ಸಲ್ಲಿಸಿದ್ದ ಅರ್ಜಿ ಒಗ್ಗೂಡಿಸಲು ಕೋರಿ ನೂಪುರ್‌ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ನ್ಯಾ.ಸೂರ್ಯಕಾಂತ್‌ ಮತ್ತು ನ್ಯಾ.ಜೆ.ಪಿ.ಪರ್ದಿವಾಲಾ ಅವರನ್ನೊಳಗೊಂಡ ನ್ಯಾಯಪೀಠ, ‘ಇಡೀ ದೇಶದಲ್ಲಿ ಈಗ ಏನಾಗುತ್ತಿದೆಯೋ ಅದಕ್ಕೆಲ್ಲಾ ನೀವೊಬ್ಬರೇ ಕಾರಣ. ನಿಮ್ಮದು ಹರಕು ಬಾಯಿ. ನೀವು ಇಡೀ ದೇಶದ ಕ್ಷಮೆ ಕೋರಬೇಕು’ ಎಂದು ಕಿಡಿಕಾರಿತ್ತು. ನ್ಯಾಯಾಲಯದ ಈ ಹೇಳಿಕೆ ಬಳಿಕ ನೂಪುರ್‌ ವಿರುದ್ಧ ಹಲವು ರಾಜ್ಯಗಳಲ್ಲಿ ಮತ್ತಷ್ಟುಪ್ರಕರಣ ದಾಖಲಾಗಿದ್ದೂ ಅಲ್ಲದೆ ಅವರಿಗೆ ಜೀವ ಬೆದರಿಕೆ ಕರೆ ಹೆಚ್ಚಾಗಿತ್ತು.