ಪಹಲ್ಗಾಂ ದಾಳಿಗೆ ಮುನ್ನ ಶಂಕಿತ ಉಗ್ರನೊಬ್ಬ ತಮ್ಮನ್ನು ವಿಚಾರಿಸಿದ್ದಾಗಿ ಜಲ್ನಾದ ಆದರ್ಶ್ ರಾವತ್ ತಿಳಿಸಿದ್ದಾರೆ. ರೇಖಾಚಿತ್ರದಲ್ಲಿ ಆ ವ್ಯಕ್ತಿಯನ್ನು ಗುರುತಿಸಿದ್ದಾರೆ. ಎನ್‌ಐಎಗೆ ಮಾಹಿತಿ ನೀಡಿದರೂ ಪ್ರತಿಕ್ರಿಯೆ ಬಂದಿಲ್ಲ ಎಂದಿದ್ದಾರೆ. ಭಾರತ ನೀರು ನಿಲ್ಲಿಸಿದರೆ ಯುದ್ಧಕ್ಕೆ ಸಿದ್ಧ ಎಂದು ಪಾಕಿಸ್ತಾನದ ಉಪಪ್ರಧಾನಿ ಎಚ್ಚರಿಸಿದ್ದಾರೆ.
ಜಲ್ನಾ(ಮೇ.01): ಪಹಲ್ಗಾಂ ದಾಳಿಯ ಒಂದು ದಿನ ಮೊದಲು ಶಂಕಿತ ಉಗ್ರನೊಬ್ಬ ತನ್ನೊಂದಿಗೆ ಮಾತಾಡಿದ್ದ ಎಂದು ಕಾಶ್ಮೀರದಿಂದ ಹಿಂದಿರುಗಿದ ಮಹಾರಾಷ್ಟ್ರದ ಜಲ್ನಾ ನಗರದ ಆದರ್ಶ್ ರಾವತ್ ಹೇಳಿದ್ದಾರೆ. ‘ಏ.21ರಂದು ಪಹಲ್ಗಾಂನಲ್ಲಿ ಕುದುರೆ ಸವಾರಿಗೆ ಹೋಗಿದ್ದ ವೇಳೆ ರಸ್ತೆ ಬದಿ ಆಹಾರ ಮಳಿಗೆ ಬಳಿ ನಿಂತಿದ್ದೆವು. ಆಗ ವ್ಯಕ್ತಿಯೊಬ್ಬ ನನ್ನ ಬಳಿ ಬಂದು ನೀವು ಹಿಂದೂಗಳೇ? ನೀವು ಕಾಶ್ಮೀರದವರಂತೆ ಕಾಣುತ್ತಿಲ್ಲ ಎಂದು ಕೇಳಿದ್ದ. ನಂತರ ಆತ ತನ್ನ ಸಹಚರನ ಕಡೆಗೆ ತಿರುಗಿ, ಇಂದು ಜನಸಂದಣಿ ಕಡಿಮೆಯಾಗಿದೆ ಎಂದು ಹೇಳಿದ್ದ. ಭದ್ರತಾ ಸಂಸ್ಥೆಗಳು ಬಿಡುಗಡೆ ಮಾಡಿರುವ ಮೂವರು ಶಂಕಿತ ಉಗ್ರರ ರೇಖಾಚಿತ್ರಗಳಲ್ಲಿ, ಒಬ್ಬ ತನ್ನೊಂದಿಗೆ ಮಾತನಾಡಿದ ವ್ಯಕ್ತಿಗೆ ಹೊಂದಿಕೆಯಾಗುತ್ತಾನೆ’ ಎಂದು ಆದರ್ಶ್ ರಾವತ್ ಹೇಳಿದ್ದಾರೆ.
‘ಕಾಶ್ಮೀರದಲ್ಲಿ ನನ್ನ ಅನುಭವದ ವಿವರಗಳನ್ನು ಎನ್‌ಐಎಗೆ ಇಮೇಲ್ ಮಾಡಿದ್ದೇನೆ. ಆದರೆ ನನ್ನ ಇಮೇಲ್‌ಗೆ ಎನ್‌ಐಎಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅವರು ನನ್ನನ್ನು ಸಂಪರ್ಕಿಸಿದರೆ ನಾನು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಅವರೊಂದಿಗೆ ಸಹಕರಿಸುತ್ತೇನೆ’ ಎಂದಿದ್ದಾರೆ.
ಪಾಕ್ ನಿರ್ಬಂಧದಿಂದ ಭಾರತೀಯ ವಿಮಾನಯಾನಕ್ಕೆ ₹3700 ಕೋಟಿ ಹೊರೆ
ಭಾರತ ನೀರು ನಿಲ್ಲಿಸಿದರೆ ಯುದ್ಧಕ್ಕೆ ಸಿದ್ಧ: ಪಾಕ್ ಉಪಪ್ರಧಾನಿ ದಾರ್
ಪಹಲ್ಗಾಂ ದಾಳಿ ಬೆನ್ನಲ್ಲೇ ಭಾರತ ಸರ್ಕಾರ ಸಿಂಧು ನದಿ ಒಪ್ಪಂದ ರದ್ದು ಮಾಡಿದ್ದಕ್ಕೆ ಪಾಕಿಸ್ತಾನದ ವಿದೇಶಾಂಗ ಸಚಿವ ಮತ್ತು ಉಪ ಪ್ರಧಾನಿಯೂ ಆದ ಇಷಾಕ್ ದಾರ್ ಪ್ರತಿಕ್ರಿಯಿಸಿದ್ದು, ಭಾರತ ನೀರು ನಿಲ್ಲಿಸಿದರೆ, ಯುದ್ಧ ಶುರು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಬಗ್ಗೆ ಸೆನೆಟ್‌ನಲ್ಲಿ ಮಾತನಾಡಿದ ದಾರ್, ಭಾರತ ಸಿಂಧು ನದಿ ಒಪ್ಪಂದವನ್ನು ರದ್ದುಗೊಳಿಸಲು ಪಹಲ್ಗಾಂ ದಾಳಿಯನ್ನು ಹೆಳೆ ಮಾಡಿಕೊಂಡಿದೆ. ಭಾರತ ಏನಾದರೂ ಮಾಡಿದಲ್ಲಿ ನಾವು ಕೇವಲ ಏಟಿಗೆ ಎದಿರೇಟು ಅಲ್ಲ. ಅದಕ್ಕಿಂತ ಹೆಚ್ಚಾಗಿ ಕೊಡಲಿದ್ದೇವೆ. ಪಹಲ್ಗಾಂ ದಾಳಿಯಲ್ಲಿ ಪಾಕಿಸ್ತಾನದ ಕಯವಾಡವಿಲ್ಲ ಎಂದು ಹೇಳಿದರು.
ಜೊತೆಗೆ ಪಾಕಿಸ್ತಾನ ಈಗಾಗಲೇ ಸೌದಿ ಅರೇಬಿಯಾ, ಬ್ರಿಟನ್, ಚೀನಾ, ಬಹ್ರೇನ್, ಯುಎಇ ಮತ್ತು ಹಂಗೇರಿ ದೇಶಗಳೊಂದಿಗೆ ರಾಜತಾಂತ್ರಿಕ ಮಾತುಕತೆ ನಡೆಸಿದ್ದು, ಭಾರತದ ಬಗ್ಗೆ ವಿವರಿಸಲಾಗಿದೆ ಎಂದು ಹೇಳಿದರು.


