ಪಹಲ್ಗಾಮ್ ದಾಳಿ ಬೆನ್ನಲ್ಲೇ ಜಮ್ಮು ಕಾಶ್ಮೀರದಲ್ಲಿ ಹೈ ಅಲರ್ಟ್ ಘೋಷಣೆ, ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರ ಸಹಚರರ ಬಂಧನ. ಪಾಕ್ ಗಡಿಯಲ್ಲಿ ಗುಂಡಿನ ದಾಳಿ, ರೈಲ್ವೆ ಮೂಲಸೌಕರ್ಯ, ಕಾಶ್ಮೀರಿ ಪಂಡಿತರ ಮೇಲೆ ಉಗ್ರರ ಕಣ್ಣು.
Pahalgam Attack Updates:ಕುಲ್ಗಾಂನಲ್ಲಿ ಇಬ್ಬರು ಉಗ್ರರ ಸಹಚರರ ಬಂಧನ
ಶ್ರೀನಗರ: ಪಹಲ್ಗಾಮ್ ದಾಳಿ ಬೆನ್ನಲ್ಲೇ ಜಮ್ಮು ಕಾಶ್ಮೀರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಭಾರತೀಯ ಸೇನೆ ಕಾರ್ಯಾಚರಣೆ ಆರಂಭಿಸಿದೆ. ಇದೀಗ ಕಾರ್ಯಚರಣೆಯ ಭಾಗವಾಗಿ ಉಗ್ರರ ಸಹಚರರಿಬ್ಬರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಜಮ್ಮು ಕಾಶ್ಮೀರದ ಕುಲ್ಗಾಂನಲ್ಲಿ ಭದ್ರತಾ ಸಿಬ್ಬಂದಿ ಇಬ್ಬರನ್ನು ಬಂಧಿಸಿದೆ. ಕುಲ್ಗಾಂ ಜಿಲ್ಲೆಯ ಖೈಮೋಹ್ ಪ್ರದೇಶದ ಥೋಕರ್ಪೋರಾದಿಂದ ಇಬ್ಬರನ್ನು ಬಂಧಿಸಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಬಿತ್ತರಿಸಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಪಾಕ್‌ನಿಂದ ಗುಂಡಿನ ದಾಳಿ
ಶುಕ್ರವಾರ ಬೆಳಗ್ಗೆ ಪಾಕ್ ಪಡೆಗಳು ಅಪ್ರಚೋದಿತವಾಗಿ ಭಾರತದ ಗಡಿಯತ್ತ ಹಲವು ಗಂಟೆಗಳ ಕಾಲ ಗುಂಡಿನ ದಾಳಿ ನಡೆಸಿದವು. ಇದಕ್ಕೆ ಪ್ರತಿಯಾಗಿ ಭಾರತೀಯ ಯೋಧರು ಕೂಡಾ ದಾಳಿ ನಡೆಸಲಾದ ಪಾಕ್ ಪ್ರದೇಶಗಳತ್ತ ಗುಂಡಿನ ದಾಳಿ ನಡೆಸಿದವು. ಇದಾದ ಬಳಿಕ ಪಾಕ್ ಪಡೆಗಳು ದಾಳಿ ನಿಲ್ಲಿಸಿದವು ಎಂದು ಸೇನಾ ಮೂಲಗಳು ತಿಳಿಸಿವೆ.
ರೈಲ್ವೆ ಮೂಲಸೌಕರ್ಯ, ಕಾಶ್ಮೀರಿ ಪಂಡಿತರ ಮೇಲೆ ಉಗ್ರರ ಕಣ್ಣು?
ಪಹಲ್ಗಾಂನಲ್ಲಿ ಪ್ರವಾಸಿಗರಿಗೆ ಗುಂಡಿಕ್ಕಿದ್ದ ಉಗ್ರರು ಇದೀಗ ರೈಲ್ವೆ ಮೂಲಸೌಕರ್ಯ, ಕಾಶ್ಮೀರಿ ಪಂಡಿತರು ಮತ್ತು ಸ್ಥಳೀಯರಲ್ಲದವರನ್ನು ಗುರಿಯಾಗಿಸಿ ದಾಳಿ ನಡೆಸಲು ಹೊಂಚು ಹಾಕಿದ್ದಾರೆ ಎಂಬ ಗುಪ್ತಚರ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ, ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿವೆ.
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಶ್ರೀನಗರ ಹಾಗೂ ಗಂದರ್ಬಲ್ ಜಿಲ್ಲೆಗಳಲ್ಲಿ ಕಾಶ್ಮೀರಿ ಪಂಡಿತರು ಮತ್ತು ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿ ದಾಳಿ ನಡೆಸಲು ಸಂಚು ರೂಪಿಸಿರುವುದಾಗಿ ಗುಪ್ತಚರ ಸಂಸ್ಥೆ ಎಚ್ಚರಿಸಿದೆ.ಈ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕಾ ಕ್ರಮವಾಗಿ ರೈಲ್ವೆ ಭದ್ರತಾ ಸಿಬ್ಬಂದಿಗೆ ತಮ್ಮ ಬ್ಯಾರಕ್‌ನಿಂದ ಅನವಶ್ಯಕವಾಗಿ ಹೊರಬಂದು ಓಡಾಡದಂತೆ ಸೂಚಿಸಲಾಗಿದೆ.
ಇದನ್ನೂ ಓದಿ: ಪಹಲ್ಗಾಂ ರಕ್ಕಸರಿಗಾಗಿ ಕಾರ್ಯಾಚರಣೆ: ಉಗ್ರಗಾಮಿಗಳ ಬೇಟೆ ಶುರು
ಪ್ರತೀಕಾರಕ್ಕೆ ಆರ್‌ಎಸ್‌ಎಸ್ ಕರೆ
ಪಹಲ್ಗಾಂ ದುರಂತದ ಪ್ರತೀಕಾರದ ಬಗ್ಗೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅಬ್ಬರಿಸಿದ ಬೆನ್ನಲ್ಲೇ ಆರ್‌ಎಸ್‌ಎಸ್ ಕೂಡ ಗುಡುಗಿದ್ದು, ‘ ಭಾರತ ಪ್ರತೀಕಾರವನ್ನು ತೀರಿಸಿಕೊಳ್ಳಬೇಕು. ದುಷ್ಟತನವನ್ನು ನಾಶ ಮಾಡಲು ಶಕ್ತಿ ತೋರಬೇಕು’ ಎಂದು ಕರೆ ನೀಡಿದೆ.
ಮುಂಬೈ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ವೇಳೆ ಪಹಲ್ಗಾಂ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವರ್, ‘ಜನರ ಧರ್ಮದ ಬಗ್ಗೆ ಕೇಳಿದ ಬಳಿಕ ಅವರನ್ನು ಸಾಯಿಸಿದ್ದಾರೆ. ಹಿಂದೂಗಳು ಎಂದಿಗೂ ಅಂತಹ ಕೃತ್ಯ ಮಾಡುವುದಿಲ್ಲ. ಇದು ಮತ್ತು ಅಧರ್ಮದ ವಿರುದ್ಧದ ಯುದ್ಧ. ನಮ್ಮ ಹೃದಯದಲ್ಲಿ ನೋವಿದೆ. ಕೋಪಗೊಂಡಿದ್ದೇವೆ. ಆದರೆ ದುಷ್ಟತನವನ್ನು ನಾಶ ಮಾಡಲು ಶಕ್ತಿಯನ್ನು ತೋರಿಸಬೇಕು’ ಎಂದರು.
ದ್ವೇಷ ಮತ್ತು ಹಗೆತನ ನಮ್ಮ ಗುಣವಲ್ಲ
ಇದೇ ಸಂದರ್ಭದಲ್ಲಿ ಎಲ್ಲರೂ ಒಗ್ಗಟ್ಟಾಗಿರಬೇಕು ಎಂದು ಕರೆ ನೀಡಿದ ಅವರು, ‘ನಾವು ಒಗ್ಗಟ್ಟಾಗಿದ್ದರೆ ಯಾರು ನಮ್ಮನ್ನು ಕೆಟ್ಟ ಉದ್ದೇಶದಿಂದ ನೋಡಲು ಧೈರ್ಯ ಮಾಡುವುದಿಲ್ಲ. ದ್ವೇಷ ಮತ್ತು ಹಗೆತನ ನಮ್ಮ ಗುಣವಲ್ಲ. ಆದರೆ ಮೌನವಾಗಿ ಹಾನಿಯನ್ನು ಸಹಿಸಿಕೊಳ್ಳುವುದಲ್ಲ. ಶಕ್ತಿ ಇಲ್ಲಿದ್ದರೆ ಬೇರೆ ಆಯ್ಕೆಯಿಲ್ಲ ಆದರೆ ಸಾಮರ್ಥ್ಯವಿದ್ದಾಗ ಅಗತ್ಯವಿದ್ದ ಸಂದರ್ಭದಲ್ಲಿ ಅದು ಗೋಚರಿಸಬೇಕು’ ಎಂದು ಹೇಳಿದರು.
ಇದನ್ನೂ ಓದಿ: ಬಲೂಚಿಸ್ತಾನ ದಾಳಿ: ಪಾಕ್ ಸೇನೆಯ 10 ಯೋಧರು ಉಡೀಸ್!
ಪ್ರವಾಸಿ ತಾಣಗಳು ಖಾಲಿ ಖಾಲಿ
ಭಾರತದ ಮುಕುಟದಂತಿರುವ ಪ್ರಾಕೃತಿಕ ಸೌಂದರ್ಯದ ಗಣಿ ಕಾಶ್ಮೀರದಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ. ಕಳೆದ ಕೆಲ ವರ್ಷಗಳಿಂದ ಭಾರೀ ಪ್ರಮಾಣದಲ್ಲಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದ ತಾಣಗಳು ಕಳೆದ 2 ದಿನಗಳಿಂದ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿವೆ. ಪಹಲ್ಗಾಂ ದಾಳಿ ಬೆನ್ನಲ್ಲೇ ಲಕ್ಷಾಂತರ ಜನರು ತಮ್ಮ ಜಮ್ಮು ಕಾಶ್ಮೀರದ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.
