ನವದೆಹಲಿ(ಡಿ.28): ಬೆಂಕಿ ಹಚ್ಚಿಸುವವರು ರಾಜಕೀಯ ನಾಯಕರಲ್ಲ ಎಂಬ ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿಕೆಯನ್ನ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಖಂಡಿಸಿದ್ದಾರೆ.

ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗಿಯಾಗಿ ಮಾತನಾಡಿದ ಚಿದಂಬರಂ, ಸೇನಾ ಮುಖ್ಯಸ್ಥರು ರಾಜಕೀಯ ಹೇಳಿಕೆ ನೀಡುವ ಸಂಪ್ರದಾಯ ಅಪಾಯಕಾರಿ ಎಂದು ಆತಂಕ ವ್ಯಕ್ತಪಡಿಸಿದರು.

ರಾಜಕೀಯ ನಾಯಕರು ಏನು ಮಾಡಬೇಕು ಏನು ಮಾಡಬಾರದು ಎಂದು ಸೇನಾ ಮುಖ್ಯಸ್ಥರು ಪಾಠ ಮಾಡುವ ಅಗತ್ಯವಿಲ್ಲ ಎಂದು ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.

ಸೇನಾ ಮುಖ್ಯಸ್ಥರು ತಮ್ಮ ಕಾರ್ಯವ್ಯಾಪ್ತಿ ಅರಿತು ಮಾತನಾಡಬೇಕು. ಯುದ್ಧ ಹೇಗೆ ಮಾಡಬೇಕು ಎಂಬುದನ್ನು ಸೇನಾ ಮುಖ್ಯಸ್ಥರಿಗೆ ರಾಜಕೀಯ ನಾಯಕರು ಹೇಳಿ ಕೊಡಲು ಸಾಧ್ಯವಿಲ್ಲ. ಅದೇ ರೀತಿ ರಾಜಕೀಯ ನಾಯಕರು ರಾಜಕೀಯ ಹೇಗೆ ಮಾಡಬೇಕು ಎಂದು ಸೇನಾ ಮುಖ್ಯಸ್ಥರು ಸಲಹೆ ನೀಡಬಾರದು ಎಂದು ಚಿದಂಬರಂ ಹೇಳಿದ್ದಾರೆ.

ಬೆಂಕಿ ಹಚ್ಚುವವರು ನಾಯಕರಲ್ಲ ಎಂಬ ಸೇನಾ ಮುಖ್ಯಸ್ಥರ ಹೇಳಿಕೆಗೆ ವಿಪಕ್ಷಗಳ ಆಕ್ಷೇಪ!

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟವನ್ನು ಖಂಡಿಸಿದ್ದ ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್, ಬೆಂಕಿ ಹಚ್ಚಿಸುವವರು ನಾಯಕರು ಎಂದೆನೆಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದರು.