ಲಂಡನ್‌(ನ.24): ಮನುಕುಲವನ್ನೇ ಕಂಗಾಲಾಗಿಸಿರುವ ಕೊರೋನಾ ವೈರಸ್‌ ನಿಗ್ರಹಕ್ಕಾಗಿ ವಿಜ್ಞಾನಿಗಳು ನಡೆಸುತ್ತಿರುವ ಮತ್ತೊಂದು ಸಂಶೋಧನೆಗೆ ಭರ್ಜರಿ ಯಶಸ್ಸು ಸಿಕ್ಕಿದೆ. ಬ್ರಿಟನ್‌ನ ಪ್ರತಿಷ್ಠಿತ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಜತೆ ಆಸ್ಟ್ರಾಜೆನೆಕಾ ಔಷಧ ಕಂಪನಿ ಅಭಿವೃದ್ಧಿಪಡಿಸುತ್ತಿರುವ ಕೊರೋನಾ ಲಸಿಕೆ ಮೂರನೇ ಹಂತದ ಪ್ರಯೋಗದ ಮಧ್ಯಂತರ ಹಂತದಲ್ಲಿ ಶೇ.90ರಷ್ಟುಪರಿಣಾಮಕಾರಿ ಎಂಬುದು ಸಾಬೀತಾಗಿದೆ. ಅಮೆರಿಕದ ಫೈಝರ್‌, ಮಾಡೆರ್ನಾ ಬಳಿಕ ಇನ್ನೊಂದು ಲಸಿಕೆ ಪರಿಣಾಮಕಾರಿ ಎಂಬುದು ನಿರೂಪಿತವಾಗಿದ್ದು, ಜನರಿಗೆ ಲಸಿಕೆ ದೊರೆಯುವ ದಿನ ಮತ್ತಷ್ಟುಹತ್ತಿರವಾದಂತಾಗಿದೆ. ಈ ಲಸಿಕೆ ಈಗಾಗಲೇ ಪುಣೆಯಲ್ಲಿ ಉತ್ಪಾದನೆಯಾಗಿರುವುದರಿಂದ ಶೀಘ್ರದಲ್ಲೇ ಭಾರತಕ್ಕೂ ಲಭಿಸಲಿದೆ.

ಡಿ.11-12ಕ್ಕೆ ಅಮೆರಿಕ ಪ್ರಜೆಗಳಿಗೆ ಕೊರೋನಾ ಗೆಲ್ಲಲು ಫೈಝರ್‌ ಅಸ್ತ್ರ!

‘ಛಡಾಕ್ಸ್‌1 ಎನ್‌ಕೋವ್‌-2019’ ಹೆಸರಿನ ಈ ಲಸಿಕೆಯನ್ನು ಸುಮಾರು 24 ಸಾವಿರ ಸ್ವಯಂಸೇವಕರನ್ನು ಬಳಸಿಕೊಂಡು ಪರೀಕ್ಷೆ ನಡೆಸಲಾಗಿದೆ. ಈ ಪೈಕಿ ಮೊದಲ ಹಂತದಲ್ಲಿ ಹೆಚ್ಚಿನ ಡೋಸ್‌ (2 ಡೋನ್‌ ಪೈಕಿ ಮೊದಲು ಅರ್ಧ, ನಂತರ ಫುಲ್‌ ಡೋಸ್‌)ನಲ್ಲಿ ಲಸಿಕೆ ನೀಡಿದಾಗ ಶೇ.62ರಷ್ಟುಪರಿಣಾಮಕಾರಿಯಾಗಿದೆ. ಅದರ ಬೆನ್ನಲ್ಲೇ ಕಡಿಮೆ ಡೋಸ್‌ (ಎರಡೂ ಬಾರಿ ಪೂರ್ಣ ಡೋಸ್‌) ನೀಡಿದಾಗ ಶೇ.90ರಷ್ಟುಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಈ ವ್ಯತ್ಯಾಸ ಏಕೆ ಎಂಬುದನ್ನು ಅರಿಯಲು ವಿಜ್ಞಾನಿಗಳು ಯತ್ನಿಸುತ್ತಿದ್ದಾರೆ. ಎರಡೂ ಡೋಸ್‌ಗಳಿಂದ ಲಸಿಕೆಯ ಒಟ್ಟಾರೆ ಕ್ಷಮತೆ ಪ್ರಮಾಣ ಶೇ.70.4ರಷ್ಟಿದೆ. ಈ ಲಸಿಕೆಯು ಕೊರೋನಾ ವೈರಸ್‌ ತಡೆಯುವಲ್ಲಿ ಯಶಸ್ವಿಯಾಗಿದ್ದು, ಆ ಮಾರಕ ವೈರಸ್‌ನಿಂದ ರಕ್ಷಣೆ ನೀಡುವುದು ಖಾತ್ರಿಯಾಗಿದೆ.

ಮುಂದೇನು?:

ಮೂರನೇ ಹಂತದ ಪ್ರಯೋಗದ ಮಧ್ಯಂತರ ವರದಿಯಲ್ಲಿ ಲಸಿಕೆಯ ಕ್ಷಮತೆ ಗೊತ್ತಾಗಿದೆ. ಹೀಗಾಗಿ ಈ ಲಸಿಕೆಯ ತುರ್ತು ಬಳಕೆಗಾಗಿ ಬ್ರಿಟನ್‌, ಯುರೋಪ್‌, ಬ್ರೆಜಿಲ್‌ ಸೇರಿದಂತೆ ವಿಶ್ವದ ವಿವಿಧ ದೇಶಗಳ ಔಷಧ ನಿಯಂತ್ರಣ ಪ್ರಾಧಿಕಾರಗಳಿಗೆ ವಿಸ್ತೃತ ಸುರಕ್ಷತಾ ದಾಖಲೆಗಳನ್ನು ಆಕ್ಸ್‌ಫರ್ಡ್‌ ಹಾಗೂ ಆಸ್ಟ್ರಾಜೆನೆಕಾ ಸಲ್ಲಿಕೆ ಮಾಡಲಿವೆ. ಬ್ರಿಟನ್‌, ಬ್ರೆಜಿಲ್‌, ದಕ್ಷಿಣ ಆಫ್ರಿಕಾದಲ್ಲಿ 24 ಸಾವಿರ ಮಂದಿ ಸ್ವಯಂ ಸೇವಕರ ಮೇಲೆ ಪ್ರಯೋಗ ನಡೆಯುತ್ತಿದ್ದು, ಅದು ಮುಂದುವರಿಯಲಿದೆ.

ಬೆಂಗಳೂರಲ್ಲಿ 41 ಲಕ್ಷ ಮಂದಿಗೆ ಕೊರೋನಾ ಸೋಂಕು ಪರೀಕ್ಷೆ

-70 ಡಿಗ್ರಿ ಉಷ್ಣಾಂಶ ಬೇಕಿಲ್ಲ:

ಛಡಾಕ್ಸ್‌ ಎನ್‌ಕೋವ್‌-19 ಲಸಿಕೆಯನ್ನು ಸಾಮಾನ್ಯ ಶೀತ ವೈರಸ್‌ ಆಗಿರುವ ಅಡೆನೋವೈರಸ್‌ ಅನ್ನು ದುರ್ಬಲಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. ಈ ಲಸಿಕೆಯನ್ನು ಸಂಗ್ರಹಿಸಿಡಲು ಫೈಝರ್‌ ಹಾಗೂ ಮಾಡೆರ್ನಾ ರೀತಿ ಮೈನಸ್‌ 70 ಡಿಗ್ರಿ ಉಷ್ಣಾಂಶದ ಅಗತ್ಯವಿಲ್ಲ. 2ರಿಂದ 8 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇದ್ದರೂ ಸಾಕು. ಹೀಗಾಗಿ ಇದನ್ನು ಸುಲಭವಾಗಿ ಎಲ್ಲೆಡೆ ಸಾಗಿಸಬಹುದಾಗಿದೆ. ಅದೂ ಅಲ್ಲದೆ ಅಮೆರಿಕದ ಲಸಿಕೆಗಳಿಗೆ ಹೋಲಿಸಿದರೆ ಆಕ್ಸ್‌ಫರ್ಡ್‌ ಲಸಿಕೆ ಅಗ್ಗವಾಗಿರುವುದು ವರದಾನವಾಗಿದೆ.