* ಪಾಲಕರಿಂದ ಅಸುರಕ್ಷಿತ ಸ್ಥಳಗಳಲ್ಲಿ ತ್ಯಜಿಸುವಿಕೆ ಕಾರಣ* ಸರ್ಕಾರಿ ದತ್ತು ಏಜೆನ್ಸಿಗಳಲ್ಲಿ 800ಕ್ಕೂ ಹೆಚ್ಚು ಮಕ್ಕಳ ಸಾವು!* ಮೃತರಲ್ಲಿ 2 ವರ್ಷಕ್ಕಿಂತ ಕಡಿಮೆ ವಯಸ್ಸಿನವರೇ ಹೆಚ್ಚು
ನವದೆಹಲಿ(ಜು. 12): 2018ರಿಂದ ಸರ್ಕಾರಿ ಸ್ವಾಮ್ಯದ ವಿಶೇಷ ದತ್ತು ಏಜೆನ್ಸಿಗಳಲ್ಲಿ 800ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿರುವ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ. ಮೃತಪಟ್ಟವರಲ್ಲಿ ಹೆಚ್ಚಿನ ಮಕ್ಕಳು 2 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ ಆರ್‌ಟಿಐಗೆ ನೀಡಿದ ಪ್ರತಿಕ್ರಿಯೆಗಳ ಪ್ರಕಾರ 2021-22 ರಲ್ಲಿ ಸರ್ಕಾರಿ ಸ್ವಾಮ್ಯದ ದತ್ತು ಏಜೆನ್ಸಿಗಳಲ್ಲಿರುವ 118 ಮಕ್ಕಳು ಮೃತಪಟ್ಟಿದ್ದು, ಅವರಲ್ಲಿ 104 ಮಕ್ಕಳು 2 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನವರಾಗಿದ್ದಾರೆ. 2022-21ರಲ್ಲಿ 169 ಹಾಗೂ 2019-20ರಲ್ಲಿ 281 ಹಾಗೂ 2018-9ರಲ್ಲಿ 251 ಮಕ್ಕಳು ಮೃತಪಟ್ಟಿದ್ದಾರೆ.
ಈವರೆಗೆ ಮೃತಪಟ್ಟಒಟ್ಟು 819 ಮಕ್ಕಳಲ್ಲಿ 481 ಹೆಣ್ಣುಮಕ್ಕಳು ಹಾಗೂ 129 ಅಂಗವಿಕಲ ಮಕ್ಕಳು ಆಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಲಕರು ಮಕ್ಕಳನ್ನು ಅಸುರಕ್ಷಿತ ಸ್ಥಳಗಳಲ್ಲಿ ತ್ಯಜಿಸುವುದು ಮಕ್ಕಳ ಸಾವಿಗೆ ಪ್ರಮುಖ ಕಾರಣ ಎನ್ನಲಾಗಿದೆ. ಬಹಳಷ್ಟುಶಿಶುಗಳು ನಾಯಿ ಕಡಿತಕ್ಕೆ ತುತ್ತಾಗಿದ್ದು, ದತ್ತು ಏಜೆನ್ಸಿಯವರು ಮಕ್ಕಳನ್ನು ಹುಡುಕಿ ಚಿಕಿತ್ಸೆ ನೀಡಲು ಮುಂದಾದರೂ ಅವು ಬದುಕುಳಿಯಲು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ದೇಶದಲ್ಲಿ 7000ಕ್ಕೂ ಹೆಚ್ಚು ಮಕ್ಕಳು ವಿಶೇಷ ದತ್ತು ಏಜೆನ್ಸಿಗಳಲ್ಲಿ ವಾಸಿಸುತ್ತಿದ್ದಾರೆ.
