ಗೋಲ್ಡನ್ ಟೆಂಪಲ್ ಕೊಳದಲ್ಲಿ ಮುಖ ತೊಳೆದು ಉಗುಳಿದ ಅನ್ಯಕೋಮಿನ ವ್ಯಕ್ತಿ, ಸಿಖ್‌ರ ಪವಿತ್ರ ಕ್ಷೇತ್ರದಲ್ಲಿ ಕೈ ಕಾಲು ಮುಖ ತೊಳೆದು ಉಗುಳಿದ ವ್ಯಕ್ತಿ ವಿರುದ್ಧ ಭಾರಿ ಆಕ್ರೋಶ ಭುಗಿಲೆದ್ದಿದೆ.

ಅಮೃತಸರ (ಜ.17) ಅಮೃತಸರದ ಸ್ವರ್ಣ ಮಂದಿರ ಸಿಖ್‌ರ ಪವಿತ್ರ ತೀರ್ಥ ಕ್ಷೇತ್ರ. ಯಾವುದೇ ಪವಿತ್ರ ಕ್ಷೇತ್ರವನ್ನು ಅಪವಿತ್ರಗೊಳಿಸುವುದು ಯಾರು ಸಹಿಸುವುದಿಲ್ಲ. ಅದರಲ್ಲೂ ಸಿಖ್ ಸಮುದಾಯ ಎಂದಿಗೂ ಸಹಿಸುವುದಿಲ್ಲ. ಇದೀಗ ಅಮೃತಸರದ ಗೋಲ್ಡನ್ ಟೆಂಪಲ್ ಪವಿತ್ರ ಕೊಳದಲ್ಲಿ ಅನ್ಯಕೋಮಿನ ವ್ಯಕ್ತಿ ಮುಖ, ಕೈ ಕಾಲು ತೊಳದು ಉಗುಳಿದ ವಿಡಿಯೋ ಕೋಲಾಹಲ ಸೃಷ್ಟಿಸಿದೆ. ಘಟನೆಗೆ ಸ್ವರ್ಣ ಮಂದಿರ ನಿರ್ವಹಿಸುತ್ತಿರುವ ಶಿರೋಮಣಿ ಗುರುದ್ವಾರ ಪ್ರಬಂಧಕ್ ಕಮಿಟಿ (SGPC) ತೀವ್ರ ಖಂಡನೆ ವ್ಯಕ್ತಪಡಿಸಿದೆ. ಈ ವಿಡಿಯೋ ಹರಿದಾಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಮರ್ಯಾದೆ ಪಾಲಿಸಿ, ಖಡಕ್ ಸೂಚನೆ

ಸಿಖ್ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡುವಾಗ ಸಮುದಾಯದ ಪವಿತ್ರತೆ ಕಾಪಾಡಬೇಕು. ಕನಿಷ್ಠ ಮರ್ಯಾದೆ ಪಾಲಿಸಬೇಕು. ಯಾರಿಗೂ ನೋವಾಗುವಂತೆ ನಡೆದುಕೊಳ್ಳಬಾರದು ಎಂದು SGPC ಹರಿಂದರ್ ಸಿಂಗ್ ಧಮಿ ಹೇಳಿದ್ದಾರೆ. ಇದೇ ವೇಳೆ ಅನ್ಯಕೋಮಿನ ವ್ಯಕ್ತಿಯ ನಡೆ ಹಾಗೂ ವಿಡಿಯೋ ಕುರಿತು ಆತಂರಿಕ ತನಿಖೆಗೆ ಸೂಚಿಸಿದ್ದಾರೆ. ತಪ್ಪೆಸಗಿ ಬಳಿಕ ಕ್ಷಮೆ ಕೇಳುವುದಲ್ಲ, ಪಾವಿತ್ರ್ಯತೆ ಹಾಳು ಮಾಡಿದರೆ ಪದೇ ಪದೇ ಕ್ಷಮಿಸಲು ಸಾಧ್ಯವಿಲ್ಲ. ಯಾವುದೇ ಕ್ಷೇತ್ರಕ್ಕೆ ಭೇಟಿ ನೀಡುವಾಗ ಅಲ್ಲಿನ ಆಚಾರ ವಿಚಾರ, ಸಂಪ್ರದಾಯಗಳ ಬಗ್ಗೆ ತಿಳಿದುಕೊಳ್ಳಿ, ಅದರಂತೆ ನಡೆದುಕೊಳ್ಳಿ. ಅಲ್ಲಿ ನಿಮ್ಮತನ, ನಿಮ್ಮ ಸಂಪ್ರದಾಯ ಪಾಲಿಸಲು ಸಾಹಸ ಮಾಡಬೇಡಿ ಎಂದು ಹರಿಂದ್ರ ಸಿಂಗ್ ಧಮಿ ಎಚ್ಚರಿಸಿದ್ದಾರೆ.

ಅಸಮಾಧಾನ ಹೊರಹಾಕಿದ ದೆಹಲಿ ಸಚಿವ

ದೆಹಲಿ ಸಚಿವ ಮಜಿಂದರ್ ಸಿಂಗ್ ಸಿರ್ಸಾ ಈ ಘಟನೆ ಕುರಿತು ಪ್ರತಿಕ್ರಿಯಿಸಿದ್ದಾರೆ. ಎಲ್ಲಾ ಧರ್ಮಗಳನ್ನು ಗೌರವಿಸಬೇಕು. ಆದರೆ ಧರ್ಮಗಳು, ಸಮುದಾಯಗಳ ಭಕ್ತಿ, ನಂಬಿಕೆಯನ್ನು ಘಾಸಿಗೊಳಿಸುವ ಪ್ರಯತ್ನ ಮಾಡಬಾರದು. ದರ್ಬಾರ್ ಸಾಹೀಬ್ ನಡೆ ಸಹಿಸಲು ಸಾಧ್ಯವಿಲ್ಲ. ದಯವಿಟ್ಟು ಕ್ಷೇತ್ರಗಳ ಪಾವಿತ್ರ್ಯತೆ ಕಾಪಾಡಿ ಎಂದು ಸಿರ್ಸಾ ಮನವಿ ಮಾಡಿದ್ದಾರೆ.

ಕ್ಷಮೆ ಕೇಳಿದ ಯುವಕ

ಸ್ವರ್ಣ ಮಂಡಳಿ ಆಡಳಿತ ಮಂಡಳಿ, ಸಿಖ್ ಸಮುದಾಯ ಸೇರಿದಂತೆ ದೇಶಾದ್ಯಂತ ಆಕ್ರೋಶಗಳು ವ್ಯಕ್ತವಾಗುತ್ತಿದ್ದಂತೆ ಸ್ವರ್ಣಮಂದಿರದಲ್ಲಿ ಕೈ ಕಾಲು ಮುಖ ತೊಳೆದು ನಂಬಿಕೆಗೆ ಘಾಸಿ ಮಾಡಿದ ವ್ಯಕ್ತಿ ಕ್ಷಮೆ ಕೇಳಿದ್ದಾರೆ. ಕ್ಷೇತ್ರದ ಪಾವಿತ್ರ್ಯತೆ ಹಾಳುವ ಮಾಡುವ ಉದ್ದೇಶವಿರಲಿಲ್ಲ. ಭಕ್ತಿಯಿಂದ ಗುರುದ್ವಾರಕ್ಕೆ ಭೇಟಿ ನೀಡಿದ್ದೇನೆ. ಈ ವೇಳೆ ತನ್ನಿಂದ ತಪ್ಪಾಗಿದೆ. ದಯವಿಟ್ಟು ಕ್ಷಮಿಸಿ ಎಂದು ಮನವಿ ಮಾಡಿದ್ದಾನೆ. ಇದೇ ವೇಳೆ ತಾನು ಮತ್ತೆ ಸ್ವರ್ಣಮಂದಿರಕ್ಕೆ ಭೇಟಿ ನೀಡಿ ಕ್ಷಮಿಸುವಂತೆ ಕೋರುತ್ತೇನೆ ಎಂದು ಯುವಕ ಪ್ರತಿಕ್ರಿಯಿಸಿದ್ದಾನೆ.

ನನ್ನಿಂದ ತಪ್ಪಾಗಿದೆ. ಸ್ವರ್ಣ ಮಂದಿರದ ನೀತಿ, ಸಂಪ್ರದಾಯಗಳಿಗೆ ನಾನು ಧಕ್ಕೆ ಮಾಡಿದ್ದೇನೆ. ಇದು ಉದ್ದೇಶಪೂರ್ವಕ ಆಗಿರಲಿಲ್ಲ. ಅಚಾತುರ್ಯದಿಂದ ಆಗಿದೆ. ಇದಕ್ಕಾಗಿ ನಾನು ಎಲ್ಲಾ ಸಿಖ್ ಸಮುದಾಯದಲ್ಲಿ ಕ್ಷಮೆ ಕೇಳುತ್ತೇನೆ. ದಯವಿಟ್ಟು ನನ್ನ ತಪ್ಪನ್ನು ಮನ್ನಿಸಬೇಕೆಂದು ಕೋರುತ್ತೇನೆ ಎಂದು ಯುವಕ ಹೇಳಿದ್ದಾನೆ.

ಇದೇ ವೇಳೆ SGPC ಸೆಕ್ರಟರಿ ಕುಲ್ವಂತ್ ಸಿಂಗ್ ಮಾನ್ ಘಟನೆ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಈ ವಿಡಿಯೋ, ನಡೆದ ಘಟನೆ ಕುರಿತು ಸಂಪೂರ್ಣ ತನಿಖೆಗೆ ಸೂಚಿಸಿದ್ದಾರೆ. ಎಐ ವಿಡಿಯೋ, ಅಥವಾ ವಿಡಿಯೋದಲ್ಲಿ ಎಐ ಬಳಕೆ ಮಾಡಿದ್ದಾರಾ, ಅಸಲಿಯೋ, ನಕಲಿಯೋ ಸೇರಿದಂತೆ ಎಲ್ಲಾ ರೀತಿಯ ತನಿಖೆಗೆ ಸೂಚಿಸಿದ್ದಾರೆ. ಇತ್ತ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶಗಳು ಹೆಚ್ಚಾಗುತ್ತಿದೆ.

Scroll to load tweet…